ಕೊರೋನಾ ನಿಯಂತ್ರಣಕ್ಕೆ ಅನ್ಯ ಮಾರ್ಗವಿಲ್ಲ, ಲಾಕ್‍ಡೌನ್‍ಗೆ ದೇಶ, ವಿದೇಶಗಳಿಂದ ಹೆಚ್ಚಿದ ಒತ್ತಡ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಮೇ 4- ಸೋಂಕಿನ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಲಾಕ್‍ಡೌನ್ ಘೋಷಣೆ ಮಾಡುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮೇಲೆ ಒತ್ತಡ ಹೆಚ್ಚಾಗ ತೊಡಗಿದೆ. ಕಳೆದ ಎರಡು ವಾರಗಳ ಹಿಂದೆ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಅವರು ಲಾಕ್‍ಡೌನ್ ಕೊನೆಯ ಅಸ್ತ್ರವಾಗಬೇಕು. ಅದಕ್ಕೂ ಮೊದಲು ಸೋಂಕು ನಿಯಂತ್ರಣಕ್ಕೆ ಪರ್ಯಾಯ ಮಾರ್ಗಗಳ ಮೂಲಕ ಬಿಗಿ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದ್ದರು. ಆದರೆ ದೇಶದಲ್ಲಿ ದಿನೇ ದಿನೇ ಪರಿಸ್ಥಿತಿ ಬಿಗಡಾಯಿಸಿದೆ.

ಎರಡನೇ ಅಲೆಯಲ್ಲಿ ಸೋಂಕಿನ ಹೆಚ್ಚಳದ ಜೊತೆಗೆ ಸಾವಿನ ಸಂಖ್ಯೆಯೂ ಆತಂಕಕಾರಿಯಾಗಿ ಏರಿಕೆಯಾಗಿದೆ. ವಿಶ್ವದಲ್ಲಿ ಭಾರತ ಅತಿಹೆಚ್ಚು ಸೋಂಕು ಬಾಧಿತ ದೇಶವಾಗಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ತರಬೇಕಾದರೆ ಲಾಕ್‍ಡೌನ್ ಒಂದೇ ಮಾರ್ಗ ಎಂದು ತಜ್ಞರು ಸಲಹೆ ನೀಡಿದ್ದಾರೆ.

ಸುಪ್ರೀಂಕೋರ್ಟ್ ಕೂಡ ಲಾಕ್‍ಡೌನ್ ಜಾರಿಗೊಳಿಸುವ ಕುರಿತಂತೆ ಗಂಭೀರವಾಗಿ ಪರಿಶೀಲನೆ ನಡೆಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸಲಹೆ ನೀಡಿದೆ. ಅಮೆರಿಕಾ ಸೇರಿದಂತೆ ವಿವಿಧ ದೇಶಗಳ ಅಂತರಾಷ್ಟ್ರೀಯ ವೇದಿಕೆಗಳು ಲಾಕ್‍ಡೌನ್ ಅನಿವಾರ್ಯ ಎಂಬ ಸಲಹೆ ನೀಡಿವೆ.

ಇನ್ನೊಂದೆಡೆ ದೇಶಿಯವಾಗಿಯೂ ಸಾಕಷ್ಟು ಒತ್ತಡಗಳು ಹೆಚ್ಚಾಗಿವೆ. ಬಹುತೇಕ ರಾಜಕೀಯ ಪಕ್ಷಗಳು ಲಾಕ್‍ಡೌನ್ ಸೂತ್ರವನ್ನು ಪಠಿಸಿವೆ. ದೇಶದಲ್ಲಿ ಬಹುತೇಕ ರಾಜ್ಯಗಳ ಭಾಗಶಃ ಕಠಿಣ ನಿಯಮಾವಳಿಗಳ ಹೆಸರಿನಲ್ಲಿ ಪರೋಕ್ಷ ಲಾಕ್‍ಡೌನ್ ಜಾರಿಗೆ ತಂದಿವೆ. ಇನ್ನೂ ಕೆಲವು ರಾಜ್ಯಗಳು ನೇರವಾಗಿಯೇ ಲಾಕ್‍ಡೌನ್ ಜಾರಿ ಮಾಡಿವೆ.

ಕೆಲವೆಡೆ ಪರಿಸ್ಥಿತಿ ಸುಧಾರಿಸಿದರೆ ಮತ್ತೆ ಕೆಲವೆಡೆ ಸೋಂಕು ತಹಬದಿಗೆ ಬರುತ್ತಿಲ್ಲ. ಹಾಗಾಗಿ ದೇಶಾದ್ಯಂತ ಏಕರೂಪದ ಲಾಕ್‍ಡೌನ್ ಜಾರಿಗೆ ತರುವ ಅಗತ್ಯ ಹೆಚ್ಚಿದೆ ಎಂಬ ಒತ್ತಡಗಳು ಕೇಳಿ ಬರುತ್ತಿವೆ.

ಪಂಚರಾಜ್ಯಗಳ ಚುನಾವಣೆ ಫಲಿತಾಂಶದ ಬಳಿಕ ಪ್ರಧಾನಿ ಅವರು ದೇಶಾದ್ಯಂತ ಲಾಕ್‍ಡೌನ್ ಘೋಷಣೆ ಮಾಡುತ್ತಾರೆ ಎಂದು ಹೇಳಲಾಗಿತ್ತು. ಆದರೆ ಅದು ಹುಸಿಯಾಗಿದೆ. ಲಾಕ್‍ಡೌನ್ ಘೋಷಣೆ ಮಾಡಿದರೆ ಎದುರಾಗುವ ಸಾಮಾಜಿಕ ಹಾಗೂ ಆರ್ಥಿಕ ಸಮಸ್ಯೆಗಳು ತೀವ್ರ ಆತಂಕ ಸೃಷ್ಟಿಸಿವೆ.

Facebook Comments

Sri Raghav

Admin