ಕೊರೋನಾ ರೆಸ್‌ನಲ್ಲಿ ಭಾರತ ಶರವೇಗದ ಓಟ, 14,200 ದಾಟಿದ ಸಾವಿನ ಸಂಖ್ಯೆ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಮುಂಬೈ, ಜೂ. 23- ಕಿಲ್ಲರ್ ಕೊರೊನಾ ವೈರಸ್ ಬಿಗಿಮುಷ್ಟಿಯಲ್ಲಿ ದೇಶವು ನಲುತ್ತಿದ್ದು, 24 ಗಂಟೆಗಳಲ್ಲಿ 14,900ಕ್ಕೂ ಹೆಚ್ಚು ಸೋಂಕು ಪ್ರಕರಣಗಳು ದಾಖಲಾಗಿದೆ. ಇದೇ ಅವಧಿಯಲ್ಲಿ 312 ರೋಗಿಗಳು ಅಸುನೀಗಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಸೋಂಕು ಪ್ರಕರಣಗಳ ಸಂಖ್ಯೆ 15,000ರ ಸನಿಹದಲ್ಲಿ ಮುಂದುವರಿದಿರುವುದು ಆತಂಕಕ್ಕೆ ಕಾರಣವಿದೆ.

ಈವರೆಗೆ ಭಾರತದಲ್ಲಿ ಸೋಂಕಿತರ ಸಂಖ್ಯೆ 4.40ಲಕ್ಷ ದಾಟಿದ್ದು, ಒಟ್ಟು 14,011 ಮಂದಿ ಮೃತಪಟ್ಟಿದ್ದಾರೆ.  ಅಲ್ಲದೇ ಸತತ 20 ದಿನಗಳಿಂದ ಸೋಂಕಿತರ ಸಂಖ್ಯೆ 9,000+ ಹಾಗೂ ನಿರಂತರ 12 ದಿವಸಗಳಿಂದ 10,000+ ಪ್ರಮಾಣದಲ್ಲೇ ಮುಂದುವರಿದಿದೆ.  ನಾಳೆ ವೇಳೆಗೆ ದೇಶದಲ್ಲಿ ಸಾವಿನ ಪ್ರಮಾಣ ಸುಮಾರು 14,700 ಮತ್ತು ಸೋಂಕು ಬಾಧಿತರ ಸಂಖ್ಯೆ 4.55 ಲಕ್ಷ ತಲುಪುವ ಆತಂಕವಿದೆ.

ನಿನ್ನೆ ಒಂದೇ ದಿನ ದೇಶದ ವಿವಿಧ ರಾಜ್ಯಗಳಲ್ಲಿ ಒಟ್ಟು 312 ಮಂದಿ ಸಾವಿಗೀಡಾಗಿದ್ದು, ಒಟ್ಟಾರೆ ಮೃತ ಸಂಖ್ಯೆ 14,011ಕ್ಕೇರಿದೆ ಭಾರತದಲ್ಲಿ. ಸೋಂಕು ಪೀಡಿತರ ಸಂಖ್ಯೆ 4,40,215 ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

24 ತಾಸುಗಳಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ ಸಂಭವಿಸಿದ 312 ಸಾವಿನ ವಿವರ: ಮಹಾರಾಷ್ಟ್ರ 113, ದೆಹಲಿ 58, ತಮಿಳುನಾಡು 37, ಗುಜರಾತ್ 21, ಉತ್ತರಪ್ರದೇಶ 19, ಪಶ್ಚಿಮ ಬಂಗಾಳ 14, ಹರಿಯಾಣ 9, ರಾಜಸ್ತಾನ ಮತ್ತು ತೆಲಂಗಾಣ ತಲಾ 7, ಮಧ್ಯಪ್ರದೇಶ 6, ಆಂಧ್ರಪ್ರದೇಶ ಮತ್ತು ಕರ್ನಾಟಕ ತಲಾ 5, ಜಮ್ಮು-ಕಾಶ್ಮೀರ 3, ಬಿಹಾರ ಮತ್ತು ಪಂಜಾಬ್ ತಲಾ ಎರಡು ಹಾಗೂ ಛತ್ತೀಸ್‍ಗಢ, ಗೋವಾ, ಒಡಿಶಾ ಮತ್ತು ಉತ್ತರಾಖಂಡ್ ರಾಜ್ಯಗಳಲ್ಲಿ ತಲಾ ಒಂದೊಂದು ಸಾವು ಪ್ರಕರಣ ವರದಿಯಾಗಿದೆ.

ಇಂದು ಬೆಳಗ್ಗೆಯೂ ಕೆಲವು ರಾಜ್ಯಗಳಲ್ಲಿ ಸಾವು ಪ್ರಕರಣಗಳು ವರದಿಯಾಗಿದೆ. ಮಹಾರಾಷ್ಟ್ರ, ದೆಹಲಿ, ಗುಜರಾತ್, ಮಧ್ಯಪ್ರದೇಶ, ರಾಜಸ್ತಾನ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಕರ್ನಾಟಕ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಪಂಜಾಬ್, ಒಡಿಶಾ ಮತ್ತಿತರ ರಾಜ್ಯಗಳಲ್ಲಿ ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿವೆ.

ಈ ಆಘಾತಕಾರಿ ಸನ್ನಿವೇಶದ ನಡುವೆಯೇ ಭಾರತವು ಸೋಂಕು ಪ್ರಮಾಣದಲ್ಲಿ ಬ್ರಿಟನ್‍ನನ್ನು ಹಿಂದಿಕ್ಕಿ ಈಗ ನಾಲ್ಕನೆ ಸ್ಥಾನಕ್ಕೇರಿದೆ. ಪರಿಸ್ಥಿತಿ ಇದೇ ರೀತಿ ಗಂಡಾಂತರದಲ್ಲಿ ಮುಂದುವರಿದರೆ ಮೂರನೇ ಸ್ಥಾನದಲ್ಲಿರುವ ರಷ್ಯಾವನ್ನು ಭಾರೆತ ಹಿಂದಿಕ್ಕುವ ಕಾಲ ದೂರವಿಲ್ಲ. ಲಾಕ್‍ಡೌನ್ ಸಡಿಲಗೊಳಿಸಿದ ನಂತರ ದೇಶದಾದ್ಯಂತ ಸೋಂಕು ಮತ್ತು ಸಾವಿನ ಪ್ರಕರಣಗಳು ಆತಂಕಕಾರಿ ಮಟ್ಟದಲ್ಲಿ ಹೆಚ್ಚಾಗಿದೆ.

ಈ ನಡುವೆ 24 ತಾಸುಗಳಲ್ಲಿ 9,994 ರೋಗಿಗಳು ಗುಣಮುಖರಾಗಿದ್ದು, ಚೇತರಿಕೆ ಪ್ರಮಾಣದಲ್ಲಿ ಶೇ.56.38ರಷ್ಟು ಏರಿಕೆ ಕಂಡುಬಂದಿರುವುದು ಸಮಾಧಾನಕಾರ ಸಂಗತಿ.

Facebook Comments