ನಾಳೆಯಿಂದ ಇಂಡೋ-ಆಸೀಸ್ ಏಕದಿನ ಫೈಟ್
ಮುಂಬೈ, ಜ. 13- ಶ್ರೀಲಂಕಾ ವಿರುದ್ಧ ನಡೆದ ಟ್ವೆಂಟಿ-20 ಸರಣಿಯನ್ನು ಕೈ ವಶ ಮಾಡಿಕೊಂಡಿರುವ ವಿರಾಟ್ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾವು ನಾಳೆಯಿಂದ ಆಸ್ಟ್ರೇಲಿಯಾ ವಿರುದ್ಧ ಏಕದಿನ ಫೈಟ್ ಅನ್ನು ಎದುರಿಸಲಿದೆ. ಇಂಗ್ಲೆಂಡ್ನಲ್ಲಿ ನಡೆದ ವಿಶ್ವಕಪ್ನಲ್ಲಿ ಜಯ ಗಳಿಸಿದ ನಂತರ ಎದುರಿಸಿದ 4 ಪಂದ್ಯಗಳಲ್ಲಿ ಭಾರತ ಕೇವಲ 1 ಪಂದ್ಯದಲ್ಲಿ ಜಯ ಗಳಿಸಿದ್ದರೂ ಕೂಡ ತವರಿನ ಅಭಿಮಾನಿಗಳ ಬೆಂಬಲ ಪಡೆದು ಮತ್ತೊಂದು ಸರಣಿ ವಶಕ್ಕೆ ವಿರಾಟ್ ಪಡೆ ಸಜ್ಜಾಗಿದೆ.
ಶ್ರೀಲಂಕಾ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದ ಸ್ಫೋಟಕ ಆಟಗಾರ ರೋಹಿತ್ ಶರ್ಮಾ ನಾಳೆ ತಮ್ಮ ತಾಯ್ನಾಡಿನಲ್ಲಿ ನಡೆಯುವ ಪಂದ್ಯದಲ್ಲಿ ರನ್ಗಳ ಹೊಳೆ ಸುರಿಸಲು ಸಜ್ಜಾಗಿದ್ದರೆ, ರೋಹಿತ್ ರೊಂದಿಗೆ ಧವನ್ , ರಾಹುಲ್ರಲ್ಲಿ ಯಾರು ಆರಂಭಿಕ ಆಟಗಾರರಾಗಿ ಇಳಿಯುತ್ತಾರೆ ಎಂಬ ಕುತೂಹಲ ಮೂಡಿದೆ.
ಈ ಹಿಂದೆ ಭಾರತ ಸರಣಿಯನ್ನು ಕೈಗೊಂಡಿದ್ದಾಗ ಸರಣಿ ಸೋತಿದ್ದ ಆಸ್ಟ್ರೇಲಿಯಾ ಈ ಬಾರಿ ಸರಣಿಯನ್ನು ವಶಪಡಿಸಿಕೊಳ್ಳುವ ಕಾತರದಲ್ಲಿದೆ. ಆಸ್ಟ್ರೇಲಿಯಾ ತಂಡದಲ್ಲಿ ಆರೋನ್ಪಿಂಚ್, ಡೇವಿಡ್ ವಾರ್ನರ್, ಸ್ಟೀವನ್ಸ್ಮಿತ್ರ ಬ್ಯಾಟ್ಸ್ಮನ್ಗಳು, ಮಿಚಲ್ಸ್ಟಾರ್ಕ್, ಪ್ಯಾಟ್ ಕುಮಿನ್ಸ್, ಆ್ಯಡಂ ಜಂಪಾರಂತಹ ಸದೃಢ ಬೌಲಿಂಗ್ ಪಡೆಯನ್ನು ಹೊಂದಿದ್ದು ಗೆಲ್ಲುವ ಹುಮ್ಮಸ್ಸನ್ನು ಹೆಚ್ಚಿಸಿಕೊಂಡಿದೆಯಾದರೂ ವಿರಾಟ್ ಪಡೆ ಮುಂದೆ ಗೆಲುವು ಸುಲಭವಲ್ಲ.