ನಾಳೆ ಆಸ್ಟ್ರೇಲಿಯಾ-ಭಾರತ ಮೊದಲ ಟಿ-20 ಫೈಟ್

ಈ ಸುದ್ದಿಯನ್ನು ಶೇರ್ ಮಾಡಿ

Team-India

ಬ್ರಿಸ್ಬೇನ್, ನ.20- ಆಸ್ಟ್ರೇಲಿಯಾ-ಭಾರತದ ನಡುವೆ ನಾಳೆ ಇಲ್ಲಿ ನಡೆಯಲಿರುವ ಪ್ರಥಮ ಟಿ-20 ಅಂತಾರಾಷ್ಟ್ರೀಯ ಚುಟುಕು ಕ್ರಿಕೆಟ್ ಪಂದ್ಯ ತೀವ್ರ ಕುತೂಹಲ ಕೆರಳಿಸಿದೆ. ಅತ್ಯುತ್ತಮ ಫಾರ್ಮ್‍ನಲ್ಲಿರುವ ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸದಲ್ಲಿ ಅತ್ಯುತ್ತಮ ಪ್ರದರ್ಶನ ಮತ್ತು ಸಾಧನೆ ಮೂಲಕ ಗೆಲುವಿನ ಜೈತ್ರಯಾತ್ರೆ ಮುಂದುವರಿಸುವ ತವಕದಲ್ಲಿದೆ.

ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್, ಏಕದಿನ ಹಾಗೂ ಟಿ-20 ಸರಣಿಗಳಲ್ಲಿ ಕ್ಲೀನ್‍ಸ್ವಿಪ್ ಮಾಡಿರುವ ಭಾರತ, ಆತಿಥೇಯರ ನೆಲದಲ್ಲಿ ಪ್ರಬಲ ಆಸಿಸ್ ತಂಡವನ್ನು ಮಣಿಸುವ ದೃಢ ಆತ್ಮ ವಿಶ್ವಾಸದಲ್ಲಿದೆ. ಕಳೆದ ವರ್ಷ ನವೆಂಬರ್‍ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಏಳು ಟಿ-20 ಸರಣಿಗಳನ್ನು ಗೆದ್ದಿರುವ ಭಾರತ ಆ ಗೆಲುವಿನ ಆ್ಯಕ್ಷನ್ ರಿಪ್ಲೈ ಮಾಡುವ ಸಿದ್ಧತೆಯಲ್ಲಿದೆ.

ಇದೇ ವೇಳೆ ಪ್ರಬಲ ಆಸ್ಟ್ರೇಲಿಯಾ ತಂಡದಲ್ಲಿ ಈಗ ಕೆಲವು ಸಮಸ್ಯೆಗಳು ಕಾಡುತ್ತಿದ್ದು, ಭಾರತಕ್ಕೆ ಅದು ಪ್ಲಸ್ ಪಾಯಿಂಟ್ ಆಗಲಿದೆ. ಚೆಂಡು ವಿರೂಪ ಪ್ರಕರಣದಲ್ಲಿ ನಿಷೇಧಕ್ಕೆ ಗುರಿಯಾಗಿರುವ ಆಸ್ಟ್ರೇಲಿಯಾದ ಸ್ಟೀವ್‍ಸ್ಮಿತ್ ಮತ್ತು ಡೇವಿಡ್ ವಾರ್ನರ್ ಅವರ ಮೇಲಿನ ನಿರ್ಬಂಧಗಳನ್ನು ಸಡಿಲಿಸಲು ಆಸ್ಟ್ರೇಲಿಯಾ ಕ್ರಿಕೆಟರ್ಸ್ ಅಸೋಸಿಯೇಷನ್ (ಎಸಿಎ) ನಿರಾಕರಿಸಿದೆ.

ಈ ಹಿನ್ನೆಲೆಯಲ್ಲಿ ಸ್ಮಿತ್ ಮತ್ತು ವಾರ್ನರ್ ಭಾರತದ ವಿರುದ್ಧದ ಪಂದ್ಯದಲ್ಲಿ ಅಲಭ್ಯ. ಪ್ರಬಲ ಆಟಗಾರರ ಕೊರತೆಯನ್ನು ಎದುರಿಸುತ್ತಿರುವ ಆಸ್ಟ್ರೇಲಿಯಾ ಹಿಂದಿನ ಸರಣಿಗಳಲ್ಲಿ ಉತ್ತಮ ಪ್ರದರ್ಶನ ತೋರದಿರುವುದು ಆ ತಂಡಕ್ಕೆ ಈಗ ಭಾರತ ಬಲಿಷ್ಠ ಎದುರಾಳಿ ಎನಿಸಿದೆ. ಆಸ್ಟ್ರೇಲಿಯಾ ಪ್ರವಾಸದಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಬ್ಲೂ ಬಾಯ್ಸ್ ಮತ್ತೊಂದು ಪ್ರಬಲ ತಂಡದ ವಿರುದ್ಧ ಜಯಭೇರಿಗೆ ಸಜ್ಜಾಗಿದ್ದು, ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್‍ಗಳಲ್ಲಿ ಲಯ ಕಾಯ್ದುಕೊಂಡಿದೆ. ಆಸ್ಟ್ರೇಲಿಯಾದ ಸುದೀರ್ಘ ಪ್ರವಾಸದ ವೇಳೆ ಭಾರತ ಮೂರು ಟಿ-20, ನಾಲ್ಕು ಟೆಸ್ಟ್ ಮತ್ತು ಮೂರು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಸೆಣೆಸಲಿದೆ.

# ತಂಡಗಳ ವಿವರ:
ಭಾರತ: ವಿರಾಟ್ ಕೊಹ್ಲಿ (ನಾಯಕ), ಶಿಖರ್‍ದವನ್, ರೋಹಿತ್ ಶರ್ಮ, ಕೆ.ಎಲ್.ರಾಹುಲ್, ಮನೀಶ್ ಪಾಂಡೆ, ಶ್ರೇಯಸ್ ಅಯ್ಯರ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ರಿಷಬ್ ಪಂಥ್, ಕೃನಾಲ್ ಪಾಂಡ್ಯ, ಯಜುವೇಂದ್ರ ಚಾಹಲ್, ಕುಲ್‍ದೀಪ್ ಯಾದವ್, ಜಸ್‍ಪ್ರೀತ್ ಬೂಮ್ರ, ಭುವನೇಶ್‍ಕುಮಾರ್, ಉಮೇಶ್ ಯಾದವ್, ಕಲೀಲ್ ಅಹಮ್ಮದ್ ಮತ್ತು ವಾಷಿಂಗ್ಟನ್ ಸುಂದರ್.

ಆಸ್ಟ್ರೇಲಿಯ: ಅರೋನ್‍ಫಿಂಚ್ (ನಾಯಕ), ಅಸ್ಟೋನ್ ಆಗರ್, ಜಾಸನ್, ಬೆರೇನ್‍ಡ್ರೋಫ್, ಅಲೆಕ್ಸ್ ಕ್ಯಾರೆ, ನಾಥನ್ ಕಲ್ಟರ್-ನೈಲ್, ಕ್ರಿಸ್‍ಲಿನ್, ಬೆನ್ ಮ್ಯಾಕ್‍ಡರ್ಮೆಟ್, ಗ್ಲೆನ್ ಮ್ಯಾಕ್ಸ್‍ವೆಲ್, ಡಿ.ಅರೈ ಶಾರ್ಟ್, ಬಿಲ್ಲಿ ಸ್ಟಾನ್‍ಲೆಕ್, ಮಾರ್ಕಸ್ ಸ್ಟೊಯಿನಿಸ್, ಆ್ಯಂಡ್ರ್ಯೂ ಟೈ ಮತ್ತು ಆ್ಯಡಮ್ ಜಂಪ.
ಪಂದ್ಯ ಆರಂಭ: ಭಾರತೀಯ ಕಾಲಮಾನ ಮಧ್ಯಾಹ್ನ 1.20.

Facebook Comments

Sri Raghav

Admin