ಫಾಲೋ ಆನ್ ಭೀತಿಯಲ್ಲಿ ಆಸ್ಟ್ರೇಲಿಯಾ, ಪಂದ್ಯಕ್ಕೆ ಮಂದಬೆಳಕು ಅಡ್ಡಿ

ಈ ಸುದ್ದಿಯನ್ನು ಶೇರ್ ಮಾಡಿ

IND--1

ಸಿಡ್ನಿ,ಜ.5- ಕ್ರಿಕೆಟ್ ಕಾಶಿ ಸಿಡ್ನಿಯಲ್ಲಿ ನಡೆಯುತ್ತಿರುವ ನಾಲ್ಕನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತೀಯ ಬೌಲರ್‍ಗಳು ಪ್ರಾಬಲ್ಯ ಸಾಧಿಸಿದ್ದು, ಮೂರನೇ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ 236 ರನ್‍ಗಳಿಗೆ 6 ವಿಕೆಟ್ ಕಳೆದುಕೊಂಡಿದ್ದು, ಫಾಲೋ ಆನ್ ಭೀತಿ ಎದುರಿಸುತ್ತಿದೆ.ನಿನ್ನೆ ಯಾವುದೇ ವಿಕೆಟ್ ನಷ್ಟವಿಲ್ಲದೆ 24 ರನ್ ಮಾಡಿದ್ದ ಆಸೀಸ್ ಇಂದು ಎಚ್ಚರಿಕೆಯ ಆಟ ಮುಂದುವರೆಸಿತು. ಇದರ ನಡುವೆ ಭಾರತೀಯ ಬೌಲರ್‍ಗಳ ಲಯಬದ್ಧ ದಾಳಿಯಿಂದ ಹಂತ ಹಂತವಾಗಿ ಅತಿಥೇಯರು ವಿಕೆಟ್‍ಗಳನ್ನು ಕಳೆದುಕೊಳ್ಳುತ್ತಿದ್ದರು.

ತಂಡದ ಮೊತ್ತ 72 ರನ್‍ಗಳಾಗಿದ್ದಾಗ ಕುಲ್‍ದೀಪ್ ಯಾದವ್ ಭಾರತಕ್ಕೆ ಮೊದಲ ಯಶಸ್ಸು ತಂದುಕೊಟ್ಟರು. ಆಕರ್ಷಕ ಆಟಗಾರ ಕವೇಜ(27 ರನ್) ಅವರ ವಿಕೆಟ್ ಉರುಳಿಸುವಲ್ಲಿ ಯಶಸ್ವಿಯಾದರು. ನಂತರ ಬಂದ ಲಬೂಸ್‍ಚಾಗ್ನಿ ತಾಳ್ಮೆಯ ಆಟಕ್ಕೆ ಮುಂದಾಗಿ ಹ್ಯಾರೀಸ್ ಜೊತೆಗೂಡಿ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು.

ಭೋಜನ ವಿರಾಮದ ನಂತರ ವಿರಾಟ್ ಕೊಹ್ಲಿ ಕಾರ್ಯತಂತ್ರವನ್ನು ಬದಲಿಸಿ ಆಸೀಸ್ ಬ್ಯಾಟ್ಸ್‍ಮನ್‍ಗಳ ಮೇಲೆ ಒತ್ತಡ ಹೇರಿದರು. ಈ ನಡುವೆ ಉತ್ತಮ ಲಯದಲ್ಲಿದ್ದ ಅರ್ಧ ಶತಕ ಸಿಡಿಸಿದ್ದ ಹ್ಯಾರೀಸ್ (79) ರನ್ನು ಕ್ಲೀನ್ ಬೋಲ್ಡ್ ಮಾಡುವ ಮೂಲಕ ರವೀಂದ್ರ ಜಡೇಜ ಪೆವಿಲಿನ್‍ಗೆ ಅಟ್ಟಿದರು.

ನಂತರ ಬಂದ ಮಾರ್ಷ್ ಕೇವಲ 6 ರನ್‍ಗಳಿಗೆ ಜಡೇಜ ಬೌಲಿಂಗ್‍ನಲ್ಲಿ ಔಟಾದರು. ಭಾರತದ ಪಾಳೆಯದಲ್ಲಿ ಸಂಭ್ರಮ ಮನೆ ಮಾಡಿತು. ನಂತರ ಬಂದ ಹ್ಯಾಂಡ್ಸ್‍ಕೋಮ್ ತಂಡವನ್ನು ಅಪಾಯದಿಂದ ಪಾರು ಮಾಡಲು ಹೆಣಗಾಡಿದರು. ಈ ನಡುವೆ ವೇಗಿ ಮೊಹಮ್ಮದ್ ಶಮಿ ಅವರ ಬೌಲಿಂಗ್‍ನಲ್ಲಿ ಎಡವಟ್ಟು ಮಾಡಿಕೊಂಡ ಲಬೂಸ್‍ಚಾಗ್ನಿ(38) ರಹಾನೆಗೆ ಕ್ಯಾಚ್ ನೀಡಿ ಔಟಾದರು.

ತಂಡದ ಮೊತ್ತ 152 ರನ್ ಆಗುವಷ್ಟರಲ್ಲಿ ಪ್ರಮುಖ ನಾಲ್ಕು ವಿಕೆಟ್‍ಗಳನ್ನು ಕಳೆದುಕೊಂಡ ಆಸೀಸ್ ಪಾಳೆಯದಲ್ಲಿ ಆತಂಕ ಮನೆಮಾಡಿತು. ಹ್ಯಾಂಡ್ಸ್‍ಕೋಮ್ ಜೊತೆಗೂಡಿದ ಅನುಭವಿ ಆಟಗಾರ ಹೆಡ್ ತಂಡವನ್ನು ಅಪಾಯದಿಂದ ಪಾರು ಮಾಡಲು ರಕ್ಷಣಾತ್ಮಕ ಆಟಕ್ಕೆ ಮುಂದಾದರು. ಕೊಹ್ಲಿ ಒಂದು ತುದಿಯಿಂದ ಸ್ಪಿನ್ ಮತ್ತೊಂದೆಡೆ ವೇಗದ ದಾಳಿಯ ಕಾರ್ಯತಂತ್ರ ಹೆಣೆದರು.

ಅದಕ್ಕೆ ಫಲವಾಗಿ ಹೆಡ್(20) ಅವರ ವಿಕೆಟ್ ಉರುಳಿತು. ಕುಲ್‍ದೀಪ್ ಯಾದವ್ ಅವರ ಚಮತ್ಕಾರಿ ಚೆಂಡನ್ನು ಅರಿಯದೆ ಹೆಡ್ ಅವರು ಕಾಟ್ ಅಂಡ್ ಬೋಲ್ಡ್ ಆಗಿ ವಿಕೆಟ್ ಒಪ್ಪಿಸಿದರು. 192 ರನ್‍ಗಳಿಗೆ ಆಸೀಸ್‍ನ 5ನೇ ವಿಕೆಟ್ ಪತನಗೊಂಡಿತು. ನಂತರ ಬಂದ ಪೈನಿ ಕೂಡ ಕೇವಲ 6 ರನ್‍ಗಳಿಗೆ ಕುಲ್‍ದೀಪ್ ಅವರ ಓವರ್‍ನಲ್ಲಿಯೇ ಔಟಾದರು.

ನಂತರ ಮೈದಾನದಲ್ಲಿ ಮಂದ ಬೆಳಕಿನಿಂದಾಗಿ ಪಂದ್ಯವನ್ನು ನಿಗದಿತ ಸಮಯಕ್ಕೆ ಮುಂಚೆಯೇ ನಿಲ್ಲಿಸಲಾಯಿತು. ಮೂರನೇ ದಿನದಾಟಕ್ಕೆ ಹ್ಯಾಂಡ್ಸ್‍ಕೋಮ್(28) ಮತ್ತು ಕುಮಿಂಗ್ಸ್(25) ನಾಲ್ಕನೇ ದಿನದಾಟಕ್ಕೆ ಬ್ಯಾಟಿಂಗ್ ಉಳಿಸಿಕೊಂಡರು.  ಒಟ್ಟಾರೆ ಇಂದು ಭಾರತೀಯ ಬೌಲರ್‍ಗಳ ಪ್ರಾಬಲ್ಯ ಸಾಧಿಸಿದ್ದು, ಆಸೀಸ್ 236 ರನ್‍ಗಳನ್ನು ಮಾಡಿದ್ದು ಫಾಲ್ ಆನ್‍ನಿಂದ ಪಾರಾಗಲು 300 ಗಡಿ ತಲುಪಬೇಕಾಗಿರುವುದು ಅನಿವಾರ್ಯವಾಗಿದೆ.

Facebook Comments

Sri Raghav

Admin