ನಾಳೆಯಿಂದ ಇಂಡೋ-ಬಾಂಗ್ಲಾ ಟೆಸ್ಟ್ ಫೈಟ್

ಈ ಸುದ್ದಿಯನ್ನು ಶೇರ್ ಮಾಡಿ

ಇಂಧೋರ್, ನ. 13- ಚುಟುಕು ಕ್ರಿಕೆಟ್ ಸರಣಿಯನ್ನು ಗೆದ್ದ ಸಂಭ್ರಮದಲ್ಲಿರುವ ಟೀಂ ಇಂಡಿಯಾ ಈಗ ಟೆಸ್ಟ್ ಸರಣಿಯನ್ನು ವಶಪಡಿಸಿಕೊಳ್ಳುವತ್ತ ಹೆಜ್ಜೆ ಇಟ್ಟಿದೆ.ಟೆಸ್ಟ್‍ನಲ್ಲಿ ನಂಬರ್ 1 ತಂಡವಾಗಿ ಗುರುತಿಸಿಕೊಂಡಿರುವ ವಿರಾಟ್ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾ ನೆನ್ನೆಯಿಂದಲೂ ಇಲ್ಲಿನ ನೆಟ್ಸ್‍ಗಳಲ್ಲಿ ಅಭ್ಯಾಸ ಮಾಡುತ್ತಿದ್ದು ತರಬೇತುದಾರ ರವಿಶಾಸ್ತ್ರಿ ನೀಡುವ ಸೂಚನೆಯನ್ನು ಬಳಸಿಕೊಂಡು ಸರಣಿ ಗೆಲ್ಲುವ ಕಾತರದಲ್ಲಿದ್ದಾರೆ.

ಶಕಿಬ್ ಅಲ್ ಹಸನ್‍ರ ಅನುಪಸ್ಥಿತಿಯಲ್ಲಿ ಬಾಂಗ್ಲಾದೇಶ ತಂಡವು ದುರ್ಬಲವಾಗಿ ಕಂಡರೂ ಭಾರತಕ್ಕೆ ಯಾವ ಸಮಯದಲ್ಲಿ ಬೇಕಾದರೂ ಸೆಡ್ಡು ಹೊಡೆಯುವ ಚಾಕಚಕ್ಯತೆ ಹೊಂದಿದ್ದೇವೆ ಎಂಬುದನ್ನು ಟ್ವೆಂಟಿ-20 ಸರಣಿಯ ಮೊದಲ ಪಂದ್ಯದಲ್ಲೇ ಸಾಬೀತು ಪಡಿಸಿದ್ದಾರೆ. ಟ್ವೆಂಟಿ-20 ಸರಣಿಯಿಂದ ಹೊರಗುಳಿದಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತೆ ತಂಡದ ನಾಯಕತ್ವವನ್ನು ವಹಿಸಿಕೊಂಡಿರುವುದರಿಂದ ಭಾರತದ ಬ್ಯಾಟಿಂಗ್ ಬಲ ಮತ್ತಷ್ಟು ಪ್ರಬಲವಾಗಿದೆ.

ದಕ್ಷಿಣ ಆಫ್ರಿಕಾ ತಂಡದ ವಿರುದ್ಧದ ಓಪನರ್ ಆಗಿ ಕಣಕ್ಕಿಳಿದಿದ್ದ ರೋಹಿತ್ ಶರ್ಮಾ ಹಾಗೂ ಕನ್ನಡಿಗ ಮಯಾಂಕ್ ಅಗರ್‍ವಾಲ್ ಅವರು ದೊಡ್ಡ ಇನ್ನಿಂಗ್ಸ್ ಅನ್ನು ಕಟ್ಟಿ ಸರಣಿ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿರುವುದರಿಂದ ಬಾಂಗ್ಲಾ ವಿರುದ್ಧವು ಆ ಜೋಡಿಯನ್ನೇ ಆರಂಭಿಕರಾಗಿ ಇಳಿಸಲು ಕೊಹ್ಲಿ ಚಿಂತಿಸಿದ್ದಾರೆ.

ವಿರಾಟ್‍ಕೊಹ್ಲಿ, ಅಜೆಂಕ್ಯಾ ರಹಾನೆ, ಚೇತೇಶ್ವರ ಪೂಜಾರ,ವೃದ್ಧಿಮಾನ್ ಶಾರಂತಹ ಸ್ಫೋಟಕ ಬ್ಯಾಟ್ಸ್‍ಮನ್‍ಗಳು, ರವೀಂದ್ರಾಜಾಡೇಜಾ, ಕುಲ್‍ದೀಪ್‍ಯಾದವ್, ಉಮೇಶ್‍ಯಾದವ್, ಇಶಾಂತ್‍ಶರ್ಮಾರಂತಹ ಬಲಿಷ್ಠ ಬೌಲಿಂಗ್ ಪಡೆಯನ್ನು ಹೊಂದಿರುವ ಟೀಂ ಇಂಡಿಯಾ ನಾಳೆಯಿಂದ ಇಲ್ಲಿ ನಡೆಯುವ ಮೊದಲ ಟೆಸ್ಟ್ ಪಂದ್ಯವನ್ನು ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ.

ಬಾಂಗ್ಲಾ ದೇಶ ತಂಡದಲ್ಲೂ ಮೊಮಿನೂಲ್‍ಹಕ್, ಇಮ್ರ್ರೂಲ್ ಕಾಯಾಸ್, ಮಹಮದುಲ್ಲಾ, ಲಿಟನ್‍ದಾಸ್, ಮುಷ್ತಾಫಿಕ್ಯೂರ್ ರೆಹಮಾನ್, ಮೆಹದಿ ಹಸನ್‍ರಂತಹ ಬಲಿಷ್ಠ ಆಟಗಾರರನ್ನೇ ಹೊಂದಿರುವುದರಿಂದ ಭಾರತ ತಂಡವನ್ನು ದಿಟ್ಟವಾಗಿ ಎದುರಿಸುವ ಮೂಲಕ ಪಂದ್ಯಕ್ಕೆ ರೋಚಕತೆ ತಂದುಕೊಡಲಿದ್ದಾರೆ. 2017ರಲ್ಲಿ ಭಾರತ ವಿರುದ್ಧ ನಡೆದ ಏಕೈಕ ಟೆಸ್ಟ್‍ನಲ್ಲಿ ಬಾಂಗ್ಲಾ ಸೋಲು ಕಂಡಿದ್ದರೂ ಈಗ ನಡೆಯುವ 2 ಟೆಸ್ಟ್ ಪಂದ್ಯಗಳಲ್ಲಿ ರೋಚಕ ಪ್ರದರ್ಶನ ನೀಡುವ ಹುಮ್ಮಸ್ಸಿನಲ್ಲಿದೆ.

Facebook Comments