ಈ ಬಾರಿ ಭಾರತದ ಜೊತೆ ಯುದ್ಧಕ್ಕಿಳಿದರೆ ಚೀನಾದ ಡ್ರ್ಯಾಗನ್ ಬಾಲ ಕಟ್..!
ನವದೆಹಲಿ, ಮೇ 27- ವಿಶ್ವಾದ್ಯಂತ ಕಿಲ್ಲರ್ ಡೆಡ್ಲಿ ಕೊರೊನಾ ಹಾವಳಿಯಿಂದ ವ್ಯಾಪಕ ಸಾವು-ನೋವು ಸಂಭವಿಸಿರುವಾಗಲೇ ಇಂಡೋ-ಚೀನಾ ಗಡಿ ಬಳಿ ಚೀನಿ ಸೇನಾ ಪಡೆಗಳು ಕ್ಯಾತೆ ತೆಗೆದಿರುವುದಕ್ಕೆ ಭಾರತದ ಮಿತ್ರ ರಾಷ್ಟ್ರಗಳು ಆಕ್ರೋಶ ವ್ಯಕ್ತಪಡಿಸಿದೆ.
ಲಡಾಕ್ ಮತ್ತು ಸಿಕ್ಕಿಂ ಗಡಿ ಭಾಗಗಳಲ್ಲಿ ಚೀನಿ ಸೇನೆ ಅನಕೃತ ನಿರ್ಮಾಣ ಮತ್ತು ರಸ್ತೆ ಕಾಮಗಾರಿ ಚಟುವಟಿಕೆಗಳನ್ನು ಬಿರುಸುಗೊಳಿಸಿದ ನಂತರ ಅಲ್ಲಿ ಉದ್ರಿಕ್ತ ವಾತಾವರಣ ನೆಲೆಗೊಂಡಿದ್ದು, ಭಾರತೀಯ ಸೇನಾ ಪಡೆಗಳು ಜಮಾವಣೆಗೊಳ್ಳುತ್ತಿದ್ದಂತೆ ಚೀನಾ ತನ್ನ ಸೇನೆಯ ವಾಸ್ತವ್ಯವನ್ನು ಮತ್ತಷ್ಟು ಹೆಚ್ಚಿಸಿದೆ.
ಇದರಿಂದ ಉಭಯ ದೇಶಗಳ ಗಡಿ ಭಾಗಗಳು ಪ್ರಕ್ಷುಬ್ಧಗೊಂಡಿದ್ದು , ಯುದ್ಧದ ಕಾರ್ಮೋಡ ಕವಿದಿದೆ. ಈ ನಡುವೆ ವಿಶ್ವಸಂಸ್ಥೆಯ ಉಭಯ ದೇಶಗಳು ಗಡಿಯಲ್ಲಿ ಗರಿಷ್ಠ ಸಂಯಮ ಕಾಯ್ದುಕೊಳ್ಳುವಂತೆ ಸಲಹೆ ಮಾಡಿದ್ದರೆ ಅಮೆರಿಕಾ, ಇಂಗ್ಲೆಂಡ್, ಫ್ರಾನ್ಸ್, ಜರ್ಮನಿ , ಜಪಾನ್ ಸೇರಿದಂತೆ ಭಾರತದ ಮಿತ್ರ ರಾಷ್ಟ್ರಗಳು ಚೀನಾದ ಗಡಿ ಭಾಗದ ಕ್ಯಾತೆ ಬಗ್ಗೆ ಗರಂ ಆಗಿವೆ.
ಇಡೀ ವಿಶ್ವಕ್ಕೆ ಕಿಲ್ಲರ್ ಕೊರೊನಾ ವೈರಸ್ ಅನ್ನು ಕೊಡುಗೆಯಾಗಿ ನೀಡಿ ಅಪಾರ ಸಾವು-ನೋವು ಮತ್ತು ವ್ಯಾಪಕ ಸೋಂಕಿಗೆ ಕಾರಣವಾಗಿರುವ ಚೀನಾದ ದುರ್ವರ್ತನೆ ಭಾರತದ ಮಿತ್ರ ರಾಷ್ಟ್ರಗಳನ್ನು ಕೆರಳಿಸಿದೆ. ಗಡಿ ಭಾಗದಲ್ಲಿ ಯಾವುದೇ ಪರಿಸ್ಥಿತಿ ಎದುರಿಸಲು ಸನ್ನದ್ಧರಾಗುವಂತೆ ಕಮ್ಯುನಿಸ್ಟ್ ರಾಷ್ಟ್ರದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ರಣಕಹಳೆ ಮೊಳಗಿಸಿರುವ ಬಗ್ಗೆ ವಿಶ್ವದ ಬಹುತೇಕ ರಾಷ್ಟ್ರಗಳು ಕಳವಳ ವ್ಯಕ್ತಪಡಿಸಿವೆ.
ಕೊರೊನಾ ವೈರಸ್ ನಿಗ್ರಹಕ್ಕೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವುದನ್ನು ಬಿಟ್ಟು ಗಡಿಯಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ತಗಾದೆ ತೆಗೆದಿರುವ ಚೀನಾ ವಿರುದ್ಧ ವಿಶ್ವಸಂಸ್ಥೆಯಲ್ಲಿನ ಸದಸ್ಯ ರಾಷ್ಟ್ರಗಳು ತೀವ್ರ ಬೇಸರ ವ್ಯಕ್ತಪಡಿಸಿವೆ. ಭಾರತದ ವಿಷಯದಲ್ಲಿ ಮೊದಲಿನಿಂದಲೂ ಒಂದಿಲ್ಲೊಂದು ಕ್ಯಾತೆ ತೆಗೆಯುತ್ತಿರುವ ಚೀನಾದ ವರ್ತನೆಯನ್ನು ಅಮೆರಿಕದ ಬಹುತೇಕ ಸಂಸದರು ಈಗಾಗಲೇ ಖಂಡಿಸಿ ಬೀಜಿಂಗ್ಗೆ ಛೀಮಾರಿ ಹಾಕಿದ್ದಾರೆ.
ಒಂದು ವೇಳೆ ಚೀನಾ ಭಾರತದ ಮೇಲೆ ಯುದ್ಧಕ್ಕೆ ನಿಂತರೆ ಡ್ರ್ಯಾಗನ್ ಬಾಲ ಸುಡುವುದು ಬಹುತೇಕ ಖಚಿತವಾಗಿದೆ. ಏಕೆಂದರೆ ಕೊರೊನಾ ಉಗಮ ಸ್ಥಾನವಾಗಿರುವ ಚೀನಾ ವಿರುದ್ಧ ಅನೇಕ ದೇಶಗಳು ಈಗಾಗಲೇ ತೀವ್ರ ಆಕ್ರೋಶ ವ್ಯಕ್ತಪಡಿಸಿ ಪ್ರತೀಕಾರಕ್ಕಾಗಿ ಕಾಯುತ್ತಿವೆ.
ಈ ಸಂದರ್ಭದಲ್ಲಿ ಡ್ರ್ಯಾಗನ್ ಬಾಲ ಬಿಚ್ಚಿದರೆ ಭಾರತಕ್ಕೆ ಸಂಪೂರ್ಣ ಬೆಂಬಲ ನೀಡಿ ಕೆಂಪು ದೇಶದ ದುರ್ವರ್ತನೆಗೆ ಪಾಠ ಕಲಿಸಲು ಅನೇಕ ದೇಶಗಳು ಸಜ್ಜಾಗಿವೆ. ಸದ್ಯಕ್ಕೆ ಚೀನಾಗೆ ಪಾಕಿಸ್ತಾನ ಮತ್ತು ನಾಲ್ಕೈದು ದೇಶಗಳನ್ನು ಹೊರತುಪಡಿಸಿ ಇನ್ಯಾವ ರಾಷ್ಟ್ರಗಳ ಬೆಂಬಲ ಇಲ್ಲ.
ಅಮೆರಿಕ ಅಧ್ಯಕ್ಷ ಟ್ರಂಪ್ ಅವರಂತೂ ಚೀನಾ ವಿರುದ್ಧ ಕೆಂಡಾಮಂಡಲವಾಗಿದ್ದು, ಗಡಿ ತಗಾದೆ ತೀವ್ರಗೊಂಡರೆ ಭಾರತಕ್ಕೆ ಸಂಪೂರ್ಣ ಸಹಕಾರ ನೀಡಿ ಬೀಜಿಂಗ್ ಅನ್ನು ಬಗ್ಗು ಬಡಿಯಲು ತುದಿಗಾಲಲ್ಲಿ ನಿಂತಿದ್ದಾರೆ. ಚೀನಿ ಅಧ್ಯಕ್ಷರ ಹೇಳಿಕೆಯೂ ಹೊರಗೆ ಸಾಧನೆ , ಒಳಗೆ ವೇದನೆ ಎಂಬಂತಾಗಿದೆ. ಕೊರೊನಾ ಹಾವಳಿಯಿಂದ ಇಡೀ ವಿಶ್ವವೇ ಚೀನಾ ವಿರುದ್ಧ ತಿರುಗಿ ಬಿದ್ದಿರುವುದು ಕ್ಸಿ ಜಿನ್ ಪಿಂಗ್ಗೆ ಚೆನ್ನಾಗಿ ಮನವರಿಕೆಯಾಗಿದೆ.
ಈ ಸಂದರ್ಭದಲ್ಲಿ ಯುದ್ಧಕ್ಕೆ ಮುಂದಾದರೆ ಅದರಿಂದ ಚೀನಾಗೆ ಭಾರೀ ಮುಖಭಂಗವಾಗುತ್ತದೆ ಎಂಬುದು ಕೂಡ ಅಧ್ಯಕ್ಷರಿಗೆ ಚೆನ್ನಾಗಿ ಗೊತ್ತಿದೆ. ಆದರೂ ಯುದ್ಧದ ರಣಕಹಳೆ ಮೊಳಗಿಸಿ ಗೊಡ್ಡು ಬೆದರಿಕೆ ಹಾಕುತ್ತಿದ್ದಾರೆ.
# ಮೋದಿ ರಣತಂತ್ರ :
ಭಾರೀ ಸಂಕಷ್ಟ ಪರಿಸ್ಥಿತಿ ಎದುರಾದಾಗಲೆಲ್ಲಾ ಅತ್ಯಂತ ಜಾಣ್ಮೆಯ ನಡೆ ಅನುಸರಿಸಿರುವ ಮೋದಿ ಚೀನಾದ ಗಡಿ ಕ್ಯಾತೆಯನ್ನು ಹಗುರವಾಗಿ ಪರಿಗಣಿಸಿಲ್ಲ.ನಿನ್ನೆ ಸೇನಾಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿ ಪರಿಸ್ಥಿತಿಯನ್ನು ಅವಲೋಕಿಸಿದರು.
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಭಾರತ ಸಶಸ್ತ್ರ ಪಡೆಯ ಮಹಾ ದಂಡನಾಯಕ ಬಿಪಿನ್ ರಾವತ್ , ಭೂ ಸೇನೆ, ವಾಯು ಪಡೆ ಮತ್ತು ನೌಕಾ ದಳದ ಮುಖ್ಯಸ್ಥರು ಹಾಗೂ ರಕ್ಷಣಾ ಇಲಾಖೆಯ ಉನ್ನತಾಕಾರಿಗಳು ಸಭೆಯಲ್ಲಿ ಭಾಗವಹಿಸಿ ಗಹನ ಚರ್ಚೆ ನಡೆಸಿ ಕ್ರಮಗಳನ್ನು ಕೈಗೊಂಡಿದ್ದಾರೆ.
ಇದಕ್ಕೂ ಮುನ್ನ ಮೋದಿ ಅವರು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಮತ್ತು ಸಚಿವಾಲಯದ ಹಿರಿಯ ಅಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಅನುಸರಿಸಬೇಕಾದ ಮಾರ್ಗೋಪಾಯಗಳ ಕುರಿತು ಸಮಾಲೋಚಿಸಿದರು.
ಇದಕ್ಕೂ ಮುನ್ನ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಕೂಡ ಭಾರತದ ಮೂರು ಸಶಸ್ತ್ರ ಪಡೆಗಳ ಮುಖ್ಯಸ್ಥರೊಂದಿಗೆ ಸಮಾಲೋಚನೆ ನಡೆಸಿದರು.
ಲಡಾಕ್ ಮತ್ತು ಸಿಕ್ಕಿಂ ಗಡಿ ಪ್ರದೇಶದಲ್ಲಿ ಒಂದೆಡೆ ಚೀನಾದ ಅಕ್ರಮ ನಿರ್ಮಾಣ ಕಾಮಗಾರಿಗಳು ಮುಂದುವರೆಯುತ್ತಿದ್ದು , ಇನ್ನೊಂದೆಡೆ ಚೀನಿ ವಾಯು ಪಡೆಯ ಹೆಲಿಕಾಪ್ಟರ್ಗಳು ಮತ್ತು ಯುದ್ಧ ವಿಮಾನಗಳು ವಾಯು ಗಡಿ ನಿಯಮ ಉಲ್ಲಂಘಿಸಿ ಹಾರಾಡುತ್ತಿವೆ.
ಗಡಿಯಲ್ಲಿ ಚೀನಿ ಸೇನೆ ಹೆಚ್ಚಿನ ಸಂಖ್ಯೆಯಲ್ಲಿ ಜಮಾವಣೆಗೊಂಡ ನಂತರ ಭಾರತವೂ ತನ್ನ ಗಡಿ ಭಾಗವನ್ನು ಅತ್ಯಂತ ಸುರಕ್ಷಿತವಾಗಿಡಲು ಅಗತ್ಯವಾದ ಎಲ್ಲಾ ಕ್ರಮಗಳನ್ನು ಕೈಗೊಂಡು ಹೆಚ್ಚುವರಿ ಸೇನಾ ಪಡೆಗಳನ್ನು ನಿಯೋಜಿಸಿದೆ. ಯಾವುದೇ ಪರಿಸ್ಥಿತಿ ಎದುರಿಸಲು ಭಾರತ ಸೇನೆ ಸರ್ವ ಸನ್ನದ್ಧವಾಗಿದ್ದು , ಚೀನಿ ಸೈನಿಕರಿಗೆ ತಿರುಗೇಟು ನೀಡಲು ಸಜ್ಜಾಗಿದ್ದಾರೆ.