ಇಂದು ಇಂಡೋ-ಚೀನಾ ಕಮ್ಯಾಂಡರ್‌ಗಳ 5ನೆ ಸುತ್ತಿನ ಮಹತ್ವದ ಚರ್ಚೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಆ.2-ಪೂರ್ವ ಲಡಾಖ್‍ನ ವಾಸ್ತವ ಗಡಿ ನಿಯಂತ್ರಣ ರೇಖೆ (ಎಲ್‍ಎಸಿ) ಬಳಿ ಇಂಡೋ-ಚೀನಾ ಸೇನಾಪಡೆಗಳ ಹಿಂಸಾತ್ಮಕ ಸಂಘರ್ಷಕ್ಕೆ ಕಾರಣವಾದ ಸೂಕ್ಷ್ಮ ಸ್ಥಳಗಳಿಂದ ಯೋಧರನ್ನು ಹಿಂದಕ್ಕೆ ಕರೆಸಿಕೊಳ್ಳುವ ನಿಟ್ಟಿನಲ್ಲಿ ಉಭಯ ದೇಶಗಳ ಮಿಲಿಟರಿ ಕಮಾಂಡರ್‍ಗಳ ನಡುವೆ ಮತ್ತೊಂದು ಹೊಸ ಸುತ್ತಿನ ಮಹತ್ವದ ಮಾತುಕತೆ ಏರ್ಪಟ್ಟಿದೆ.

ಭಾರತದ ಕಠಿಣ ಕ್ರಮಗಳು ಮತ್ತು ಅಂತಾರಾಷ್ಟ್ರೀಯ ಒತ್ತಡದ ಹಿನ್ನೆಲೆಯಲ್ಲಿ ಡ್ರಾಗನ್ ತೆಪ್ಪಗಾಗಿದ್ದು, ನವದೆಹಲಿ ಬೇಡಿಕೆಗಳಿಂದ ಚೀನಾ ಮಣಿಯಲೇಬೇಕಾದ ಪರಿಸ್ಥಿತಿಯಲ್ಲಿದೆ. ಗಡಿಯಿಂದ ತನ್ನ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್‍ಎ)ಯನ್ನು ಸಂಪೂರ್ಣ ವಾಪಸ್ ಕರೆಸಿಕೊಳ್ಳಲೇಬೇಕಾದ ಅನಿವಾರ್ಯ ಸ್ಥಿತಿಗೆ ಚೀನಾ ಸಿಲುಕಿದೆ.

ಲಡಾಖ್‍ನಲ್ಲಿ ಕಳೆದ ಮೂರು ತಿಂಗಳುಗಳಿಂದ ತಲೆದೋರಿದ್ದ ಗಡಿ ಬಿಕ್ಕಟ್ಟು ಇತ್ಯರ್ಥವಾಗುವ ಸ್ಷಪ್ಟ ಲಕ್ಷಣಗಳು ಗೋಚರಿಸುತ್ತಿವೆ. ಎಲ್‍ಎಸಿ ಬಳಿ ಚೀನಾಗೆ ಸೇರಿದ ಮೊಲ್ಡೋದಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ಉಭಯ ಸೇನಾಪಡೆಗಳ ಉನ್ನತಾಧಿಕಾರಿಗಳ ಐದನೇ ಸುತ್ತಿನ ಸಭೆ ನಡೆಯುತ್ತಿದೆ.

ಪೂರ್ವ ಲಡಾಖ್‍ನ ಪ್ಯಾನ್‍ಗಾಂಗ್ ಸೋ ಸೇರಿದಂತೆ ಉಭಯ ಸೇನಾಪಡೆಗಳ ನಡುವೆ ಘರ್ಷಣೆಗೆ ಕಾರಣವಾದ ಮುಂಚೂಣಿ ನೆಲೆಗಳಿಂದ ಎರಡೂ ದೇಶಗಳ ಯೋಧರು ಸಂಪೂರ್ಣ ಹಿಂದಕ್ಕೆ ಸರಿಯುವ ಪ್ರಕ್ರಿಯೆಯನ್ನು ಅಂತಿಮಗೊಳಿಸುವ ನಿಟ್ಟಿನಲ್ಲಿ ಸೇನಾ ಕಮ್ಯಾಂಡರ್‍ಗಳ ಇಂದಿನ ಮಾತುಕತೆ ಭಾರೀ ಪ್ರಾಮುಖ್ಯತೆ ಪಡೆದುಕೊಂಡಿದೆ.

ನಿಗದಿತ ಕಾಲ ಚೌಕಟ್ಟಿನಲ್ಲಿ ಇಂಡೋ-ಚೀನಾ ಗಡಿ ಭಾಗದಲ್ಲಿ ಮೊಕ್ಕಾಂ ಹೂಡಿರುವ ಉಭಯ ದೇಶಗಳ ಯೋಧರು ಮತ್ತು ಶಸ್ತ್ರಾಸ್ತ್ರಗಳ ಸಂಪೂರ್ಣ ವಾಪಸ್ ಕರೆಸಿಕೊಳ್ಳುವ ಪ್ರಕ್ರಿಯೆಯನ್ನು ನವದೆಹಲಿ ಮತ್ತು ಬೀಜಿಂಗ್ ಅಖೈರುಗೊಳಿಸಲಿದೆ ಎಂದು ಉನ್ನತ ಮೂಲಗಳು ಹೇಳಿವೆ.

ಪೂರ್ವ ಲಡಾಖ್‍ನಲ್ಲಿ ಉಭಯ ದೇಶಗಳ ಸೇನೆ ನಡುವೆ ಸಂಘರ್ಷ ತೀವ್ರಗೊಂಡು ಯುದ್ಧದ ಕಾರ್ಮೋಡಗಳು ದಟ್ಟವಾಗಿ ಕವಿದನ ನಂತರ ಗಡಿಯಲ್ಲಿ ಶಾಂತಿ ಸ್ಥಾಪನೆ ನಿಟ್ಟಿನಲ್ಲಿ ಭಾರತ-ಚೀನಾ ನಡುವೆ ನಡೆಯುತ್ತಿರುವ ಹಿರಿಯ ಸೇನಾಧಿಕಾರಿಗಳ ನಡುವಣ ಐದನೇ ಸುತ್ತಿನ ಮಹತ್ವದ ಮಾತುಕತೆ ಇದಾಗಿದೆ.

ಗಡಿ ಉದ್ವಿಗ್ನತೆ ಉಪಶಮನಗೊಳಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಚೀನಾ ವಿದೇಶಾಂಗ ವ್ಯವಹಾರಗಳ ಸಚಿವ ವಾಂಗ್ ಯೀ ನಡುವೆ ನಡೆದ ಎರಡು ತಾಸುಗಳ ದೂರವಾಣಿ ಸಂಭಾಷಣೆ ಮರುದಿನ ಅಂದರೆ ಜುಲೈ 6ರಂದು ಎರಡೂ ದೇಶಗಳ ಸೇನಾಪಡೆಗಳು ಮುಂಚೂಣಿ ನೆಲೆಗಳಿಂದ ಅಧಿಕೃತವಾಗಿ ಹಿಂದಕ್ಕೆ ಸರಿಯುವ ಪ್ರಕ್ರಿಯೆ ಆರಂಭಿಸಿದವು.

ಚೀನಾ ಸೇನೆ ಈಗಾಗಲೇ ಗಾಲ್ವಾನ್ ಕಣಿವೆ ಮತ್ತು ಕೆಲವು ಇತರ ಮುಂಚೂಣಿ ಸೂಕ್ಷ್ಮ ಸ್ಥಳಗಳಿಂದ ತನ್ನ ಸೇನೆ ಮತ್ತು ಯುದ್ಧಾಸ್ತ್ರಗಳನ್ನು ಹಿಂದಕ್ಕೆ ಪಡೆದಿದೆ. ಆದರೆ ಭಾರತ ಇಟ್ಟಿರುವ ಬೇಡಿಕೆಯಂತೆ ಪ್ಯಾನ್‍ಗಾಂಗ್‍ನ ಫಿಂಗರ್ ಪ್ರದೇಶಗಳಿಂದ ತನ್ನ ಸೇನೆಯನ್ನು ವಾಪಸ್ ಕರೆಸಿಕೊಂಡಿಲ್ಲ.

ಘರ್ಷಣೆಯ ಅತ್ಯಂತ ಸೂಕ್ಷ್ಮ ಸ್ಥಳಗಳಾದ ಫಿಂಗರ್ ಫೋರ್ ಮತ್ತು ಎಯ್ಡ್ ಪ್ರದೇಶಗಳಿಂದ ತನ್ನ ಸೇನಾ ಪಡೆಗಳನ್ನು ಸಂಪೂರ್ಣ ಹಿಂದಕ್ಕೆ ಕರೆಸಿಕೊಳ್ಳಲೇಬೇಕೆಂದು ಭಾರತ ಚೀನಾ ಮೇಲೆ ನಿರಂತರ ಒತ್ತಡ ಹೇರುತ್ತಲೇ ಇದೆ.

ಈ ಪ್ರದೇಶಗಳಲ್ಲಿರುವ ಪರ್ವತಸ್ತೋಮಗಳು ಬೆರಳುಗಳ ಆಕಾರದಲ್ಲಿ ಇರುವುದರಿಂದ ಇದಕ್ಕೆ ಪಿಂಗರ್ಸ್ ಎಂದು ಹೆಸರಿಡಲಾಗಿದೆ.
ಜುಲೈ 24ರಂದು ಗಡಿ ಬಿಕ್ಕಟ್ಟು ಉಪಶಮನಗೊಳಿಸುವ ನಿಟ್ಟಿನಲ್ಲಿ ರಾಜತಾಂತ್ರಿಕ ಸಮಾಲೋಚನೆ ನಡೆದಿದ್ದವು.

ಮಾತುಕತೆ ನಂತರ, ದ್ವಿಪಕ್ಷೀಯ ಒಪ್ಪಂದಕ್ಕೆ ಅನುಗುಣವಾಗಿ ಎಲ್‍ಎಸಿಯಿಂದ ಸೇನಾಪಡೆಗಳನ್ನು ಆದಷ್ಟು ಶೀಘ್ರ ಮತ್ತು ಸಂಪೂರ್ಣವಾಗಿ ಹಿಂದಕ್ಕೆ ಕರೆಸಿಕೊಳ್ಳಲು ಉಭಯ ದೇಶಗಳು ಸಮ್ಮತಿಸಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿತ್ತು. ದ್ವಿಪಕ್ಷೀಯ ಸಂಬಂಧಗಳ ಸಮಗ್ರ ಪ್ರಗತಿಗೆ ಶಿಷ್ಟಾಚಾರಗಳನ್ನು ಪಾಲಿಸುವುದು ಅತ್ಯಗತ್ಯ ಎಂದು ಸಚಿವಾಲಯ ಸ್ಪಷ್ಟಪಡಿಸಿತ್ತು.

ಇಂಡೋ-ಚೀನಾ ಸೇನಾಪಡೆಗಳ ಕಮ್ಯಾಂಡರ್‍ಗಳ ಮಟ್ಟದ ನಾಲ್ಕು ಸುತ್ತುಗಳ ಮಾತುಕತೆ ವೇಳೆ ಒಪ್ಪಿಗೆ ನೀಡಿರುವಂತೆ ಚೀನಾ ಸೇನಾ ಪಡೆಗಳನ್ನು ಗಡಿಯಿಂದ ಸಂಪೂರ್ಣ ಹಿಂದಕ್ಕೆ ಕರೆಸಿಕೊಳ್ಳಬೇಕೆಂದು ಭಾರತ ಚೀನಾಗೆ ಸ್ಪಷ್ಟ ಸಂದೇಶ ರವಾನಿಸಿದೆ.

ಚೀನಾ ಎರಡು ದಿನಗಳ ಹಿಂದಷ್ಟೇ ಹೇಳಿಕೆ ನೀಡಿ ಪೂರ್ವ ಲಡಾಕ್‍ನ ಬಹುತೇಕ ಎಲ್ಲ ಮುಂಚೂಣಿ ನೆಲೆಗಳಿಂದ ತನ್ನ ಸೇನಾಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುವುದಾಗಿ ತಿಳಿಸಿತ್ತು. ಆದರೆ ಈ ಹೇಳಿಕೆಯನ್ನು ಭಾರತ ಸ್ಪಷ್ಟವಾಗಿ ತಳ್ಳಿ ಹಾಕಿ ಸೂಕ್ಷ್ಮ ಸ್ಥಳಗಳಿಂದ ಸಂಪೂರ್ಣ ಹಿಂದಕ್ಕೆ ಸರಿದಿಲ್ಲ ಎಂದು ತಿರುಗೇಟು ನೀಡಿತ್ತು.

ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಇಂದಿನ ಇಂಡೋ-ಚೀನಾ ಮಾತುಕತೆಗೆ ಭಾರೀ ಪ್ರಾಮುಖ್ಯತೆ ಲಭಿಸಿದ್ದು, ಚೀನಾ ಭಾರತಕ್ಕೆ ಮಣಿಯುವುದು ಬಹುತೇಕ ಖಚಿತವಾಗಿದೆ.

# ಉತ್ತರಾಖಂಡದಲ್ಲೂ ಚೀನಾ ಕ್ಯಾತೆ:
ಈ ಮಧ್ಯೆ, ಸಿಕ್ಕಿಂ, ಲಡಾಖ್, ಅರುಣಾಚಲ ಪ್ರದೇಶ ರಾಜ್ಯಗಳ ಗಡಿ ಭಾಗಗಳಲ್ಲಿ ತನ್ನ ಸೇನಾಪಡೆಗಳನ್ನು ಜಮಾವಣೆ ಮಾಡಿ ಕ್ಯಾತೆ ತೆಗೆದಿದ್ದ ಚೀನಾ ಈಗ ಉತ್ತರಾಖಂಡದಲ್ಲೂ ತನ್ನ ನರಿಬುದ್ಧಿ ಪ್ರದರ್ಶಿಸಿದೆ.

ಚೀನಾದ ಪಿಎಲ್‍ಎ ಸೇನೆ ಉತ್ತರಾಖಂಡದ ಲಿಪುಲೇಖ್ ಬಳಿ ಭಾರೀ ಸಂಖ್ಯೆಯಲ್ಲಿ ಮೊಕ್ಕಾಂ ಹೂಡುತ್ತಿರುವುದು ಮತ್ತೊಂದು ಆತಂಕಕಾರಿ ಬೆಳವಣಿಗೆಯಾಗಿದೆ.

Facebook Comments

Sri Raghav

Admin