ಚುಟುಕು ವಿಶ್ವಕಪ್‍ನ ಫೈನಲ್‍ಗೇರಲು ಭಾರತೀಯ ವನಿತೆಯರ ಹೋರಾಟ

ಈ ಸುದ್ದಿಯನ್ನು ಶೇರ್ ಮಾಡಿ

ಮೆಲ್ಬೊರ್ನ್,ಮಾ.4- ಚೊಚ್ಚಲ ಟ್ವೆಂಟಿ-20 ವಿಶ್ವಕಪ್ ಗೆಲ್ಲುವ ಹುಮ್ಮಸ್ಸಿನಲ್ಲಿರುವ ಹರ್‍ಮೀತ್‍ಕೌರ್ ನಾಯಕತ್ವದ ಮಹಿಳಾ ತಂಡವು ನಾಳೆ ನಡೆಯಲಿರುವ ಸೆಮಿಫೈನಲ್‍ನಲ್ಲಿ ಬಲಿಷ್ಠ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.  ಕಳೆದ ಎಲ್ಲಾ ವಿಶ್ವಕಪ್‍ಗಿಂತಲೂ ಈ ಬಾರಿ ಭಾರತವು ಬಲಿಷ್ಠ ತಂಡವಾಗಿದ್ದು ಲೀಗ್‍ನಲ್ಲಿ ಆಸ್ಟ್ರೇಲಿಯಾದಂತಹ ವಿಶ್ವ ಚಾಂಪಿಯನ್ಸ್‍ರನ್ನೇ ಸೋಲಿಸಿ ಹುಮ್ಮಸ್ಸು ಹೆಚ್ಚಿಸಿಕೊಂಡಿದ್ದ ವನಿತೆಯರ ತಂಡವು ಲೀಗ್‍ನ ಎಲ್ಲಾ 4 ಪಂದ್ಯಗಳಲ್ಲೂ ಅಜೇಯ ಓಟ ಆರಂಭಿಸಿರುವುದರಿಂದ ಈ ಬಾರಿ ಭಾರತೀಯ ವನಿತೆಯರು ಚೊಚ್ಚಲ ವಿಶ್ವಕಪ್ ಚಾಂಪಿಯನ್ಸ್ ಆಗಿ ಹೊರ ಬರುತ್ತಾರೆ ಎಂದು ಆಸ್ಟ್ರೇಲಿಯಾದ ಮಾಜಿ ವೇಗಿ ಬ್ರೆಟ್‍ಲೀ ಸೇರಿದಂತೆ ಹಲವು ಕ್ರಿಕೆಟ್ ದಿಗ್ಗಜರು ಹೇಳಿದ್ದಾರೆ.

ಭಾರತಕ್ಕೆ ಸೆಮಿ ಭೂತ: ಎ ಗ್ರೂಪ್‍ನಲ್ಲಿ ಟಾಪ್ 1 ಸ್ಥಾನದಲ್ಲಿರುವ ಭಾರತ ತಂಡದವು ಇದುವರೆಗೂ 4 ಬಾರಿ ಸೆಮಿಫೈನಲ್ ತಲುಪಿದ್ದರೂ ಒಮ್ಮೆಯೂ ಫೈನಲ್‍ಗೇರಿಲ್ಲ, ಆದರೆ ಈ ಬಾರಿ ಫೈನಲ್ಸ್‍ಗೇರುವ ಎಲ್ಲಾ ಅವಕಾಶಗಳು ಇವೆ. ಭಾರತದ ವನಿತೆ ಯರು 2009, 2010 ಮತ್ತು 2018ರ ಸೆಮಿಫೈನಲ್‍ಗೇರಿದ್ದರು. ಈ ಬಾರಿಯು ಭಾರತದ ವನಿತೆಯರು ಬ್ಯಾಟಿಂಗ್‍ಗಿಂತ ಬೌಲಿಂಗ್‍ನಲ್ಲೇ ಹೆಚ್ಚು ಪ್ರಾಬಲ್ಯ ಹೊಂದಿರುವುದರಿಂದ ಇಂಗ್ಲೆಂಡ್ ಆಟಗಾರ್ತಿಯರ ರನ್ ದಾಹಕ್ಕೆ ಬ್ರೇಕ್ ಹಾಕಲು ತಂತ್ರ ರೂಪಿಸಿದ್ದಾರೆ.

ಆದರೆ ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರ ನಿರ್ವಹಣೆ ಅಷ್ಟಾಗಿ ಚೆನ್ನಾಗಿಲ್ಲ ಇದುವರೆಗೂ ಆಡಿರುವ 5 ಪಂದ್ಯಗಳಲ್ಲಿ ಭಾರತ ಗೆದ್ದಿರುವುದು ಒಂದರಲ್ಲಿ ಮಾತ್ರ. ಅಂಕಿ ಅಂಶಗಳು ಏನೇ ಇದ್ದರೂ ಈ ಬಾರಿ ಭಾರತೀಯರ ವನಿತೆಯರು ಗೆಲ್ಲುವ ಹುಮ್ಮಸ್ಸು ಮೂಡಿಸಿಕೊಂಡಿದ್ದಾರೆ. 2009ರಲ್ಲಿ ಚೊಚ್ಚಲ ಬಾರಿಗೆ ಟ್ವೆಂಟಿ-20 ಸೆಮಿಫೈನಲ್‍ಗೇರಿದ್ದ ಭಾರತೀಯರ ವನಿತೆಯರು ನ್ಯೂಜಿಲ್ಯಾಂಡ್ ವಿರುದ್ಧ 93 ರನ್‍ಗಳಿಗೆ ಸರ್ವಪತನವಾಗುವ ಫೈನಲ್‍ಗೇರುವ ಅವಕಾಶವನ್ನು ತಪ್ಪಿಸಿಕೊಂಡಿತ್ತು.

ಭಾರತ ಸೆಮಿಫೈನಲ್‍ಗೇರಿದ ಬಗೆ:
ಪ್ರಥಮ ಪಂದ್ಯದಲ್ಲೇ ಆಸ್ಟ್ರೇಲಿಯಾ ವಿರುದ್ಧ ಗೆಲುವು ಸಾಧಿಸಿದ್ದ ಹರ್‍ಮೀತ್‍ಕೌರ್ ಪಡೆ ನಂತರ ಬಾಂಗ್ಲಾದೇಶ, ನ್ಯೂಜಿಲ್ಯಾಂಡ್, ಶ್ರೀಲಂಕಾ ವಿರುದ್ಧವೂ 150 ರನ್‍ಗಳಿಗಿಂತ ಕಡಿಮೆ ಸ್ಕೋರ್ ಮಾಡಿದ್ದರೂ ಬೌಲರ್‍ಗಳ ಕರಾಮತ್ತಿನಿಂದ ಸೆಮಿಫೈನಲ್‍ಗೇರಿದೆ.

ಬೌಲಿಂಗ್ ಜಾದು:
ಭಾರತ ತಂಡವು ಈ ಬಾರಿ ಬೌಲಿಂಗ್‍ನಲ್ಲಿ ಬಲಿಷ್ಠವಾಗಿದೆ, ಎಲ್ಲ ತಂಡಗಳ ಬೌಲರ್‍ಗಳಿಗಿಂತ ಭಾರತೀಯ ವನಿತೆಯರು ಹೆಚ್ಚು ವಿಕೆಟ್ ಕಬಳಿಸಿದರೆ ಸಾಕ್ಷಿ. ಕೌರ್ ಪಡೆಯು 4 ಪಂದ್ಯಗಳಿಂದ 30 ವಿಕೆಟ್ ಕಬಳಿಸಿದ್ದರೆ, ಇಂಗ್ಲೆಂಡ್ 27, ಆಸ್ಟ್ರೇಲಿಯಾ 24, ದಕ್ಷಿಣ ಆಫ್ರಿಕಾದ ಆಟಗಾರ್ತಿಯರು 24 ವಿಕೆಟ್‍ಗಳನ್ನು ಕೆಡವಿದ್ದಾರೆ. ಟೂರ್ನಿಯಲ್ಲಿ ಭಾರತದ ಲೆಗ್‍ಸ್ಪಿನ್ನರ್ ಪೂನಂಯಾದವ್ 9 ವಿಕೆಟ್ ಕೆಡವಿ ಮೊದಲ ಸ್ಥಾನದಲ್ಲಿದ್ದರೆ, ಇವರಿಗೆ ಶಿಖಾಪಾಂಡೆ, ರಾಜೇಶ್ವರಿಯಿಂದ ಉತ್ತಮ ಬೆಂಬಲ ದೊರೆಯುತಿದೆ.

ಮಿಂಚುವರೇ ಮಂದಾನ- ಕೌರ್:
ಭಾರತ ತಂಡದಲ್ಲಿ ಬಲಿಷ್ಠ ಬ್ಯಾಟ್ಸ್‍ಗಾರ್ತಿಯರಾಗಿ ಗುರುತಿಸಿಕೊಂಡಿರುವ ನಾಯಕಿ ಹರ್‍ಮೀತ್‍ಕೌರ್ ಹಾಗೂ ಸ್ಮೃತಿಮಂದನಾ ಅವರು ಲೀಗ್‍ನಲ್ಲಿ ಆಡಿದ ಎಲ್ಲ ಪಂದ್ಯಗಳಲ್ಲೂ ದೊಡ್ಡ ಇನ್ನಿಂಗ್ಸ್ ಕಟ್ಟುವಲ್ಲಿ ಎಡವಿದ್ದು ಮಂದನಾ 38 ರನ್ ಗಳಿಸಿದ್ದರೆ, ಹರ್ಮಿತ್ 26 ರನ್ ಗಳಿಸಿ ನಿರಾಸೆ ಮೂಡಿಸಿದ್ದು ಭಾರತ ತಂಡ ಫೈನಲ್‍ಗೇರಲು ಈ ಇಬ್ಬರು ಆಟಗಾರ್ತಿಯರು ಸೆಮಿಫೈನಲ್‍ನಲ್ಲಿ ದೊಡ್ಡ ಇನ್ನಿಂಗ್ಸ್ ಕಟ್ಟಲೇಬೇಕು. ಭಾರತದ ಯುವ ಆಟಗಾರ್ತಿ ಶೆಫಾಲಿ ವರ್ಮ (161 ರನ್), ಜೆಮಿಮಾ ರೊಡ್ರಿಗನ್ (85 ರನ್), ದೀಪ್ತಿಶರ್ಮಾ (83 ರನ್) ಕೂಡ ದೊಡ್ಡ ಇನ್ನಿಂಗ್ಸ್ ಕಟ್ಟುವ ಆಟಗಾರ್ತಿಯರಾಗಿದ್ದು ಈ ಬಾರಿ ಫೈನಲ್‍ಗೇರುವ ಹುಮ್ಮಸ್ಸು ಮೂಡಿಸಿದ್ದಾರೆ.

ನಾಳೆ ನಡೆಯಲಿರುವ ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು ಆಸ್ಟ್ರೇಲಿಯಾದ ಸವಾಲನ್ನ ಎದುರಿಸಲಿದೆ.

Facebook Comments