ಭಾರತದ ಬೌಲರ್‍ಗಳ ದಾಳಿಗೆ ನಲುಗಿದ ಹರಿಣಗಳು

ಈ ಸುದ್ದಿಯನ್ನು ಶೇರ್ ಮಾಡಿ

ರಾಂಚಿ, ಅ.21- ದಕ್ಷಿಣ ಆಫ್ರಿಕಾ ವಿರುದ್ಧ ಎರಡೂ ಪಂದ್ಯಗಳಲ್ಲೂ ಪ್ರಾಬಲ್ಯ ಮೆರೆದಿದ್ದ ಭಾರತೀಯ ಬೌಲರ್‍ಗಳು ಅಂತಿಮ ಪಂದ್ಯದಲ್ಲೂ ತಮ್ಮ ಬೌಲಿಂಗ್ ಜಾದೂವನ್ನು ಪ್ರದರ್ಶಿಸಿ ಹರಿಣಗಳನ್ನು ಫಾಲೋಆನ್ ಭೀತಿ ಸುಳಿಗೆ ಸಿಲುಕಿಸಿದ್ದಾರೆ. ಈಗಾಗಲೇ 3 ಪಂದ್ಯಗಳ ಸರಣಿಯಲ್ಲಿ 2-0 ಯಿಂದ ಸರಣಿಯನ್ನು ವಶಪಡಿಸಿಕೊಂಡಿದ್ದು ಅಂತಿಮ ಟೆಸ್ಟ್‍ನಲ್ಲೂ ಇನ್ನಿಂಗ್ಸ್ ಗೆಲುವು ಸಾಧಿಸುವತ್ತ ವಿರಾಟ್ ಪಡೆ ಹೆಜ್ಜೆ ಇಟ್ಟಿದೆ.

ಮೂರನೇ ಟೆಸ್ಟ್‍ನ ಎರಡನೇ ದಿನದಾಟಕ್ಕೆ ದಕ್ಷಿಣ ಆಫ್ರಿಕಾ 9 ರನ್‍ಗಳಿಗೆ 2 ವಿಕೆಟ್‍ಗಳನ್ನು ಸಂಕಷ್ಟಕ್ಕೆ ಸಿಲುಕಿತ್ತು, ಇಂದು ಆರಂಭಿಕ ಪಾಳೆಯದಲ್ಲಿ ದಕ್ಷಿಣ ಆಫ್ರಿಕಾ ನಾಯಕ ಡುಪ್ಲೆಸಿಸ್ 1 ರನ್ ಗಳಿಸಿ ವೇಗಿ ಉಮೇಶ್‍ಯಾದವ್ ಬೌಲಿಂಗ್‍ನಲ್ಲಿ ಕ್ಲೀನ್ ಬೌಲ್ಡ್ ಆಗುವ ಮೂಲಕ ಹರಿಣಗಳು ಆಘಾತ ಅನುಭವಿಸಿದರು.

ಆಜ್ಮಾ- ಬುವಾಮಾ ಆಸರೆ:  ಡುಪ್ಲೆಸಿಸ್ ಔಟಾಗುತ್ತಿದ್ದಂತೆ ಕ್ರೀಸ್‍ಗಿಳಿದ ಬುವಾಮಾ ತಂಡಕ್ಕೆ ಆಸರೆಯಾಗಿ ನಿಂತರು. ಜುಬಾಯ್ರ್ ಹಂಜಾ (62 ರನ್, 10 ಬೌಂಡರಿ, 1ಸಿಕ್ಸರ್) ಟೆಸ್ಟ್‍ನಲ್ಲಿ ತಮ್ಮ ಚೊಚ್ಚಲ ಅರ್ಧಶತಕ ಗಳಿಸಿ ಅಪಾಯಕಾರಿಯಾಗುತ್ತಿದ್ದಂತೆಯೇ ಸ್ಪಿನ್ನರ್ ಜಡೇಜಾ ಅವರು ಹೆಣೆದ ಸ್ಪಿನ್ ಬಲೆಯಲ್ಲಿ ಸೆರೆಯಾದರು. ಹಂಜಾ ಔಟಾಗುವುದಕ್ಕೂ ಮುನ್ನ ಬುವಾಮಾರೊಂದಿಗೆ 5ನೆ ವಿಕೆಟ್‍ಗೆ 91 ರನ್‍ಗಳ ಜೊತೆಯಾಟ ನೀಡಿದ್ದರು.

ಜುಬಾಯ್ರ್ ಔಟಾಗುತ್ತಿದ್ದಂತೆ ತಾಳ್ಮೆ ಕಳೆದುಕೊಂಡ ಬುವಾಮಾ (32ರನ್, 5 ಬೌಂಡರಿ) ನದೀಮ್ ಬೌಲಿಂಗ್‍ನಲ್ಲಿ ಮುನ್ನುಗ್ಗಿ ಚೆಂಡನ್ನು ಬಾರಿಸಲು ಯತ್ನಿಸಿ ವೃದ್ಧಿಮಾನ್ ಷಾ ಮಾಡಿದ ಸ್ಟೆಂಪಿಂಗ್‍ಗೆ ಬಲಿಯಾದರು. ಈ ಮೂಲಕ ನದೀಮ್ ಟೆಸ್ಟ್‍ನಲ್ಲಿ ತಮ್ಮ ಚೊಚ್ಚಲ ವಿಕೆಟ್ ಕಬಳಿಸಿದರು.

ನಂತರ ಬಂದ ವಿಕೆಟ್ ಕೀಪರ್ ಕ್ಲಸನ್ ( 6 ರನ್, 1 ಬೌಂಡರಿ)ಆಕರ್ಷಕ ಬೌಂಡರಿ ಬಾರಿಸಿದರೂ ಜಡೇಜಾ ಬೌಲಿಂಗ್‍ನಲ್ಲಿ ಕ್ಲೀನ್ ಬೌಲ್ಡ್ ಆಗಿ ಮೈದಾನ ತೊರೆದರೆ ಡೇನ್ ಪಿಡ್ಟ್ 4 ರನ್‍ಗಳಿಗೆ ತಮ್ಮ ಆರ್ಭಟ ಮುಗಿಸಿದರೆ, ವೇಗಿ ರಬಾಡ ಇಲ್ಲದ ರನ್ ಕದಿಯಲು ಹೋಗಿ ಉಮೇಶ್‍ಯಾದವ್‍ರ ಚುರುಕಿನ ಫೀಲ್ಡಿಂಗ್‍ಗೆ ಬಲಿಯಾದರು.

ಪತ್ರಿಕೆ ಮುದ್ರಣಕ್ಕೆ ಹೋಗುವ ವೇಳೆಗೆ ದಕ್ಷಿಣ ಆಫ್ರಿಕಾ 8 ವಿಕೆಟ್ ಕಳೆದುಕೊಂಡು 143 ರನ್ ಗಳಿಸಿದ್ದು, ಲಿಂಡ್ಲೆ (21 ರನ್, 3 ಬೌಂಡರಿ) ಹಾಗೂ ನೋಟ್ರಿಜ್ (2ರನ್) ಕ್ರೀಸ್‍ನಲ್ಲಿದ್ದರು.
ಭಾರತದ ತಂಡದ ಪರ ಮೊಹಮ್ಮದ್ ಶಮಿ, ಉಮೇಶ್‍ಯಾದವ್, ರವೀಂದ್ರಾ ಜಡೇಜಾ ತಲಾ 2 ವಿಕೆಟ್ ಕಬಳಿಸಿದರೆ, ಶಹಬಾಜ್ ನದೀಮ್ 1 ವಿಕೆಟ್ ಕೆಡವಿದರು.

Facebook Comments