ರೆಡ್‍ಲೈನ್ ದಾಟಿದರೆ ಬಡಿದಟ್ಟುತ್ತೇವೆ : ಚೀನಾಗೆ ಭಾರತೀಯ ಸೇನೆ ಖಡಕ್ ವಾರ್ನಿಂಗ್

ಈ ಸುದ್ದಿಯನ್ನು ಶೇರ್ ಮಾಡಿ

ಪ್ಯಾಂಗಾಂಗ್‍ತ್ಸೋ ಸರೋವರ (ಲಡಾಖ್), ಸೆ.10- ಪೂರ್ವ ಲಡಾಖ್‍ನ ಗಡಿ ಪ್ರದೇಶದ ಅತ್ಯಂತ ಮಹತ್ವದ ಮತ್ತು ಎತ್ತರದ ಸ್ಥಳವಾದ ಫಿಂಗರ್ ಫೋರ್ನನ್ನು ಭಾರತೀಯ ಸೇನಾಪಡೆಗಳು ವಶಕ್ಕೆ ಪಡೆದಿವೆ.

ಅಲ್ಲದೆ, ಪ್ಯಾಂಗಾಂಗ್‍ತ್ಸೋ ಸರೋವರದ ಉತ್ತರ ಮತ್ತು ದಕ್ಷಿಣ ದಂಡೆ ಪ್ರದೇಶದಲ್ಲಿ ಮುಳ್ಳುತಂತಿ ಬೇಲಿಗಳನ್ನು ಭಾರತೀಯ ಸೇನಾಪಡೆ ನಿರ್ಮಿಸಿ ಇದಕ್ಕೆ ರೆಡ್‍ಲೈನ್ ಎಂದು ಘೋಷಿಸಿವೆ.

ಈ ಕೆಂಪುಗೆರೆಯನ್ನು ದಾಟಿ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್‍ಎ) ದುಸ್ಸಾಹಸಕ್ಕೆ ಮುಂದಾದರೆ ಯಾವುದೇ ಮುಲಾಜಿಲ್ಲದೆ ಹೊಡೆದೋಡಿಸುತ್ತೇವೆ ಎಂದು ಭಾರತೀಯ ಸೇನಾಪಡೆ ಗಂಭೀರ ಎಚ್ಚರಿಕೆ ನೀಡಿದೆ.

ಭಾರತೀಯ ಯೋಧರು ನಿಗದಿಗೊಳಿಸಿರುವ ರೆಡ್‍ಲೈನ್ ಚೀನಾಗೆ ಒಂದು ರೀತಿಯ ಲಕ್ಷ್ಮಣ ಗೆರೆ ರೀತಿಯ ಎಚ್ಚರಿಕೆಯಾಗಿದೆ.  ಈ ಹಿಂದೆ ಚೀನಾ ಸೇನಾಪಡೆ ಫಿಂಗರ್ ಫೋರ್ ಮತ್ತು ಸುತ್ತಮುತ್ತಲ ಪ್ರದೇಶವನ್ನು ಅತಿಕ್ರಮಣ ಮಾಡಲು ದುಸ್ಸಾಹಸ ನಡೆಸಿ ವಿಫಲವಾಗಿತ್ತು.

ಭಾರತೀಯ ದಿಟ್ಟ ಯೋಧರು ಚೀನಾದ ಅತಿಕ್ರಮಣ ಯತ್ನವನ್ನು ಹಿಮ್ಮೆಟ್ಟಿಸಿ ಈ ಪ್ರದೇಶದಲ್ಲಿ ಪ್ರಾಬಲ್ಯ ಸಾಧಿಸಿದ್ದರು. ನಂತರ ಫಿಂಗರ್ ಫೋರ್ ಪ್ರದೇಶವನ್ನು ತಮ್ಮ ಸ್ವಾಧೀನಕ್ಕೆ ತೆಗೆದುಕೊಂಡಿದ್ದಾರೆ. ಜತೆಗೆ ಸರೋವರದ ದಕ್ಷಿಣ ಮತ್ತು ಉತ್ತರ ದಂಡೆಯಲ್ಲಿ ಮುಳ್ಳು ತಂತಿಬೇಲಿಗಳನ್ನು ಅಳವಡಿಸಿ ಈ ಪ್ರದೇಶವನ್ನು ಅತ್ಯಂತ ಸುರಕ್ಷಿತವಾಗಿಟ್ಟಿದ್ದಾರೆ ಎಂದು ಉನ್ನತ ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎತ್ತರದ ಸ್ಥಳವಾದ ಇಲ್ಲಿಂದ ಚೀನಾ ಸೇನಾಪಡೆ ಮತ್ತು ಟಿಎಲ್‍ಎ ಯೋಧರ ಪ್ರತಿಯೊಂದು ಚಲನವವಲನವನ್ನೂ ಗಮನಿಸಲು ಸಾಧ್ಯವಿದೆ. ಇನ್ನು ಮುಂದೆ ಈ ಪ್ರದೇಶಕ್ಕೆ ಚೀನಾದ ಯಾವುದೇ ಅತಿಕ್ರಮಣವನ್ನು ವಿಫಲಗೊಳಿಸಲು ನಾವು ಸಜ್ಜಾಗಿದ್ದೇವೆ ಮತ್ತು ಅತ್ಯಂತ ಸಮರ್ಥರಾಗಿದ್ದೇವೆ ಎಂದು ಉನ್ನತಾಧಿಕಾರಿ ಹೇಳಿದ್ದಾರೆ.

ಈ ಮಧ್ಯೆ ಸರೋವರದ ಉತ್ತರ ಭಾಗದ ಮತ್ತೊಂದೆಡೆ ಚೀನಾ ತನ್ನ ಅನಧಿಕೃತ ನಿರ್ಮಾಣ ಮತ್ತು ಸೇನಾ ಜಮಾವಣೆಯನ್ನು ಮುಂದುವರಿಸಿದ್ದು, ಯಾವುದೇ ದುಸ್ಸಾಹಸಕ್ಕೆ ತಿರುಗೇಟು ನೀಡಲು ಭಾರತೀಯ ಯೋಧರು ಸರ್ವಸನ್ನದ್ಧರಾಗಿದ್ದಾರೆ.

Facebook Comments