ಮಿನಿ ಸರ್ಜಿಕಲ್ ಸ್ಟ್ರೈಕ್, ಪಿಒಕೆಯಲ್ಲಿ ಉಗ್ರರ ಅಡಗುದಾಣಗಳು ಉಡೀಸ್..!

ಈ ಸುದ್ದಿಯನ್ನು ಶೇರ್ ಮಾಡಿ

ತಂಗ್ದಾರ್(ಜಮ್ಮು-ಕಾಶ್ಮೀರ), ಅ.20- ಕಾಶ್ಮೀರ ಕಣಿವೆಯಲ್ಲಿ ಉಪಟಳ ನೀಡುತ್ತಿರುವ ಪಾಕಿಸ್ತಾನಿ ಬೆಂಬಲಿತ ಉಗ್ರಗಾಮಿಗಳ ಹುಟ್ಟಡಗಿಸಲು ಭಾರತೀಯ ಸೇನೆ ನಡೆಸಿದ ಮತ್ತೊಂದು ಭರ್ಜರಿ ಕಾರ್ಯಾಚರಣೆ ಯಶಸ್ವಿಯಾಗಿದೆ.

ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ)ದಲ್ಲಿ ಮತ್ತೆ ಬಾಲಬಿಚ್ಚಿದ ಪಾಕ್ ಕೃಪಾಪೋಷಿತ ಉಗ್ರಗಾಮಿಗಳ 4 ಲಾಂಚ್‍ಪ್ಯಾಡ್‍ಗಳು ಮತ್ತು ಅಡಗುತಾಣಗಳನ್ನು ಭಾರತೀಯ ಸೇನೆ ಮತ್ತೊಂದು ಮಿನಿ ಸರ್ಜಿಕಲ್ ಸ್ಟ್ರೈಕ್ ಮೇಲೆ ಧ್ವಂಸಗೊಳಿಸಿದೆ.

ಈ ಮಹತ್ವದ ಕಾರ್ಯಾಚರಣೆಯಲ್ಲಿ ಉಗ್ರ ಪಾಳಯದಲ್ಲಿ ಸಾವು-ನೋವು ಸಂಭವಿಸಿದೆ ಎಂದು ಭಾರತೀಯ ಸೇನೆಯ ಉನ್ನತ ಮೂಲಗಳು ತಿಳಿಸಿವೆ. ಜಮ್ಮು ಮತ್ತು ಕಾಶ್ಮೀರದ ತಂಗ್ದಾರ್ ವಲಯದ ಸನಿಹ ಪಾಕ್ ಆಕ್ರಮಿತ ಕಾಶ್ಮೀರದೊಳಗೆ ತಲೆಯೆತ್ತಿದ್ದ ಭಯೋತ್ಪಾದಕರ ಶಿಬಿರಗಳನ್ನು ಭಾರತೀಯ ಸೇನೆ ನುಚ್ಚುನೂರು ಮಾಡಿದೆ. ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ಲಘು ಪಿರಂಗಿ ಗನ್‍ಗಳನ್ನು ಬಳಸಿ ಉಗ್ರರ ಲಾಂಚ್‍ಪ್ಯಾಡ್‍ಗಳು ಮತ್ತು ಅಡಗುತಾಣಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಉನ್ನತಾಧಿಕಾರಿ ತಿಳಿಸಿದ್ದಾರೆ.

ಈ ಶಿಬಿರಗಳು ಮತ್ತು ಅಡಗುತಾಣಗಳಿಂದ ಗಡಿ ಮೂಲಕ ಭಾರತದೊಳಗೆ ನುಸುಳಿ ಭಾರೀ ವಿಧ್ವಂಸಕ ಕೃತ್ಯಗಳನ್ನು ಎಸಗಲು ಜೈಷ್-ಎ-ಮೊಹಮ್ಮದ್ ಮತ್ತು ಲಷ್ಕರಿ ತೊಯ್ಬಾ ಉಗ್ರರು ಸಜ್ಜಾಗುತ್ತಿದ್ದರು. ಈ ಬಗ್ಗೆ ಖಚಿತ ಸುಳಿವಿನ ಮೇರೆಗೆ ಭಾರತೀಯ ಯೋಧರು ಅತ್ಯಂತ ವ್ಯವಸ್ಥಾಪನಾ ತಂತ್ರದ ಮೂಲಕ ಪಿಒಕೆ ಮೇಲೆ ಭರ್ಜರಿ ದಾಳಿ ನಡೆಸಿ ಭಯೋತ್ಪಾದಕರ ದಮನ ಮಾಡಿದ್ದಾರೆ.

ಕಳೆದ ಕೆಲವು ದಿನಗಳಿಂದ ಭಾರತೀಯ ಸೇನಾ ನೆಲೆಗಳು ಮತ್ತು ಗಡಿ ಗ್ರಾಮಗಳನ್ನು ಗುರಿಯಾಗಿಟ್ಟುಕೊಂಡು ಪಾಕಿಸ್ತಾನ ಸೈನಿಕರು ಶೆಲ್ ಮತ್ತು ಗುಂಡಿನ ದಾಳಿ ನಡೆಸುತ್ತಿದ್ದರು. ಇದೇ ಸಂದರ್ಭದಲ್ಲಿ ಉಗ್ರರು ಭಾರತದೊಳಗೆ ನುಸುಳಲು ಕುತಂತ್ರ ರೂಪಿಸಿದ್ದರು.

ಇದನ್ನು ಅರಿತ ಸೇನೆಯ ಕಮಾಂಡೋಗಳು ಪಿಒಕೆಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಪಾಕ್ ಬೆಂಬಲಿತ ಉಗ್ರರಿಗೆ ಸರಿಯಾಗಿ ಬಿಸಿ ಮುಟ್ಟಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಉಗ್ರರ ಶಿಬಿರದಲ್ಲಿ ಸಾವು-ನೋವು ಸಂಭವಿಸಿದೆ ಮತ್ತು ಅವರು ಸಂಗ್ರಹಿಸಿಟ್ಟಿದ್ದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳು ಧ್ವಂಸವಾಗಿವೆ.

Facebook Comments

Sri Raghav

Admin