ಮತ್ತೆ ಕೊರೋನಾ ರಣಕೇಕೆ, ಒಂದೇ ದಿನ 50 ಸಾವಿರ ಕೇಸ್, ಯುಗಾದಿ-ಗುಡ್‍ಫ್ರೈಡೆಗೆ ಬ್ರೇಕ್..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಮಾ.25- ಮಹಾಮಾರಿ ಕೊರೊನಾ ಮತ್ತೊಮ್ಮೆ ಹಬ್ಬರಿಸಿದ್ದು, ನಿನ್ನೆ ಒಂದೇ ದಿನ 50 ಸಾವಿರ ಗಡಿ ದಾಟಿ ಸೋಂಕು ವ್ಯಾಪಿಸಿದೆ. ಈ ಮೂಲಕ ಮುಂಬರುವ ಯುಗಾದಿ, ಹೋಳಿ, ಗುಡ್‍ಫ್ರೈಡೆ ಸೇರಿದಂತೆ ಇತರೆ ಧಾರ್ಮಿಕ ಆಚರಣೆಗಳ ಮೇಲೆ ಕರಿನೆರಳು ಬಿದ್ದಂತಾಗಿದೆ. ಕಳೆದ ನ.6ರಂದು ದೇಶದಲ್ಲಿ 50ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರು ಪತ್ತೆಯಾಗಿದ್ದರು.

ಕಳೆದ ಐದು ತಿಂಗಳ ಬಳಿಕ ನಿನ್ನೆ ಒಂದೇ ದಿನ 53,476 ಮಂದಿಗೆ ಸೋಂಕು ತಗುಲಿದೆ. 251 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸಾವನ್ನಪ್ಪಿರುವವರಲ್ಲಿ ಶೇ.80ರಷ್ಟು ಮಂದಿ 45 ವರ್ಷ ಮೇಲ್ಪಟ್ಟವರು ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಅತಿ ಹೆಚ್ಚು ಸೋಂಕು ಹೊಂದಿರುವ ರಾಜ್ಯಗಳ ಪೈಕಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದು, 31,851 ಮಂದಿ ಕೊರೊನಾಗೆ ಸಿಲುಕಿದ್ದಾರೆ. ಪಂಜಾಬ್‍ನಲ್ಲಿ 2,613 ಸೋಂಕು ತಗುಲಿದ್ದು, ಎರಡನೇ ಸೋಂಕಿತ ರಾಜ್ಯವಾಗಿದೆ. ಈ ಹಿನ್ನೆಲೆಯಲ್ಲಿ ಗುಜರಾತ್, ದೆಹಲಿ, ಹರಿಯಾಣ, ಪುಣೆಯಲ್ಲಿ ಹೋಳಿ ಹಬ್ಬ ಆಚರಣೆಯನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಗುಜರಾತ್ ಸರ್ಕಾರ ಸೋಂಕು ನಿಯಂತ್ರಣಕ್ಕೆ ಹಲವಾರು ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

ದೇಶದಲ್ಲಿ 3,95,192 ಸಕ್ರಿಯ ಪ್ರಕರಣಗಳಿದ್ದು, ನಿನ್ನೆ 26,490 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 1,12,31,650 ಮಂದಿಯಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 1,17,87,534 ರಷ್ಟಾಗಿದೆ. ಈವರೆಗೂ 1,60,692 ಮಂದಿ ಸೋಂಕಿನಿಂದ ಪ್ರಾಣ ಕಳೆದುಕೊಂಡಿದ್ದಾರೆ. ನಿನ್ನೆ ಒಂದೇ ದಿನ 251 ಮಂದಿ ಸಾವನ್ನಪ್ಪಿದ್ದು, ಅವರಲ್ಲಿ ಶೇ.88ರಷ್ಟು ಮಂದಿ 45 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನವರಾಗಿದ್ದಾರೆ.

ಮಹಾರಾಷ್ಟ್ರ ಸರ್ಕಾರ ಸೋಂಕು ನಿಯಂತ್ರಣಕ್ಕೆ ಹಲವಾರು ಕ್ರಮ ಕೈಗೊಳ್ಳುತ್ತಿದೆ. ಮಾಸ್ಕ್ ಧರಿಸದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದ್ದು, 2.03 ಲಕ್ಷ ಮಂದಿಗೆ 4.06 ಕೋಟಿ ದಂಡ ವಿಧಿಸಿದೆ. ಕರ್ನಾಟಕ ಸರ್ಕಾರ ಕೂಡ ದಂಡದ ಪ್ರಮಾಣವನ್ನು ಹೆಚ್ಚಳ ಮಾಡಿ ಆದೇಶ ಹೊರಡಿಸಿದ್ದು, ಮಾಸ್ಕ್ ಧರಿಸದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಈವರೆಗೂ 5,31,45,709 ಮಂದಿಗೆ ಕೊರೊನಾ ಲಸಿಕೆ ಹಾಕಲಾಗಿದೆ.

Facebook Comments