ಸುಪ್ರೀಂ ಸೂಚನೆಯಂತೆ ಕಂಪ್ಲೀಟ್ ಲಾಕ್‍ಡೌನ್ ಆಗುತ್ತಾ ಭಾರತ..?

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಮೇ 3- ವೇಗವಾಗಿ ಹರಡುತ್ತಿರುವ ಕೋವಿಡ್ ಸೋಂಕನ್ನು ನಿಯಂತ್ರಿಸಲು ದೇಶಾದ್ಯಂತ ಲಾಕ್‍ಡೌನ್ ಜಾರಿಗೊಳಿಸುವಂತೆ ಸುಪ್ರೀಂಕೋರ್ಟ್ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.ಭಾನುವಾರ ರಾತ್ರಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಚಂದ್ರಚೂಡ್ ಅವರನ್ನು ಒಳಗೊಂಡ ಪೀಠ ಲಾಕ್‍ಡೌನ್ ಜಾರಿಯ ಬಗ್ಗೆ ಸರ್ಕಾರಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದೆ.

ಲಾಕ್‍ಡೌನ್ ಜಾರಿಯಾದ ವೇಳೆ ಎದುರಾಗುವ ಆರ್ಥಿಕ ಹಾಗೂ ಸಾಮಾಜಿಕ ಪರಿಣಾಮಗಳ ತೀವ್ರತೆಯ ಬಗ್ಗೆ ಸುಪ್ರೀಂಕೋರ್ಟ್‍ಗೆ ಅರಿವಿದೆ. ಸರ್ಕಾರಗಳು ಈ ಬಗ್ಗೆ ಮುಂಜಾಗ್ರತೆ ವಹಿಸಬೇಕು, ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬೇಕು. ಕಾಲಕಾಲಕ್ಕೆ ಅಗತ್ಯ ನೆರವನ್ನು ನೀಡಿ ಜನಸಾಮಾನ್ಯರ ಹಿತ ಕಾಪಾಡಬೇಕು ಎಂದು ಸೂಚನೆ ನೀಡಿದೆ.

ಈ ಹಿಂದೆ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿಯಾಗಿದ್ದ ಎಸ್.ಎ.ಬೋಬ್ಡೆ ಅವರು ನಿವೃತ್ತಿಯಾಗುವ ಮುನ್ನ ಕೋವಿಡ್ ಪರಿಸ್ಥಿತಿಯ ಬಗ್ಗೆ ಸ್ವಯಂ ಪ್ರೇರಿತವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದರು. ಅದರ ನಿರಂತರ ವಿಚಾರಣೆ ನ್ಯಾಯಮೂರ್ತಿ ಚಂದ್ರಚೂಡ್ ಅವರ ಪೀಠದಲ್ಲಿ ನಡೆಯುತ್ತಿದೆ.

ದೇಶಾದ್ಯಂತ ಲಾಕ್‍ಡೌನ್ ಘೋಷಣೆ, ಆಮ್ಲಜನಕ ನಿರ್ವಹಣೆ, ಔಷಧಿ ಇತರ ಜೀವ ರಕ್ಷಕ ಸಾಮಗ್ರಿಗಳ ಪೂರೈಕೆ ಸೇರಿದಂತೆ ಹಲವಾರು ಮಹತ್ವದ ವಿಚಾರಗಳು ವಿಚಾರಣೆಗೆ ಒಳಪಡುತ್ತಿವೆ. ದೇಶದಲ್ಲಿ ಕೋವಿಡ್ ಸೋಂಕು ದಿನಕ್ಕೆ 4 ಲಕ್ಷದವರೆಗೂ ವರದಿಯಾಗುತ್ತಿದ್ದು, ಸಾವಿನ ಸಂಖ್ಯೆ ಹಿಂದಿಗಿಂತಲೂ ದುಪ್ಪಟ್ಟಾಗಿದೆ. ಪರಿಸ್ಥಿತಿ ಗಂಭೀರ ಸ್ವರೂಪಕ್ಕೆ ತಿರುಗಿದೆ.

ಹೀಗಾಗಿ ಉತ್ತರ ಪ್ರದೇಶದ ಆರು ಪ್ರಮುಖ ನಗರಗಳಲ್ಲಿ ಕಫ್ರ್ಯೂ ಜಾರಿಗೊಳಿಸುವಂತೆ ಅಲ್ಲಿನ ಹೈಕೋರ್ಟ್ ಆದೇಶ ನೀಡಿತ್ತು. ಲಾಕ್‍ಡೌನ್ ಅಥವಾ ಕಫ್ರ್ಯೂ ಜಾರಿಗೆ ನ್ಯಾಯಾಲಯ ಆದೇಶ ನೀಡಬಾರದು. ಕಾನೂನು ಸುವಸ್ಥೆ ಹಾಗೂ ಜನರ ಆರೋಗ್ಯ ರಕ್ಷಣೆ ಸರ್ಕಾರಗಳ ಜವಾಬ್ದಾರಿ ಎಂದು ಸರ್ಕಾರಗಳು ವಾದಿಸಿದ್ದವು.

ಆದರೆ ಪರಿಸ್ಥಿತಿ ದಿನೇ ದಿನೇ ಕೈ ಮೀರುತ್ತಿರುವುದರಿಂದ ನ್ಯಾಯಾಲಯಗಳೇ ಲಾಕ್‍ಡೌನ್‍ಗೆ ಆದೇಶ ನೀಡುವ ಪರಿಸ್ಥಿತಿ ನಿರ್ಮಾಣವಾಗಿದೆ.ಮಹಾರಾಷ್ಟ್ರದಲ್ಲಿ ದಿನವೊಂದಕ್ಕೆ 65 ಸಾವಿರದವರೆಗೂ ಸೋಂಕಿನ ಪ್ರಕರಣಗಳು ವರದಿಯಾಗಿದ್ದವು.

ಹಾಗಾಗಿ ಅಲ್ಲಿ ಸುಮಾರು 22 ದಿನಗಳಿಂದ ಲಾಕ್‍ಡೌನ್ ಜಾರಿಗೆ ತರಲಾಗಿದೆ. ಅಲ್ಲಿನ ಪರಿಸ್ಥಿತಿ ನಿಧಾನಕ್ಕೆ ಸುಧಾರಿಸಿಕೊಳ್ಳಲಾರಂಭಿಸಿದೆ. ಕರ್ನಾಟಕದಲ್ಲೂ ಸೋಂಕಿನ ಸಂಖ್ಯೆ 50 ಸಾವಿರದ ಸಮೀಪ ತಲುಪಿತ್ತು. ಹಾಗಾಗಿ ಇಲ್ಲಿ ನೇರವಾಗಿ ಲಾಕ್‍ಡೌನ್ ಘೋಷಣೆ ಮಾಡದೆ ಕಠಿಣ ನಿಯಮಗಳನ್ನು ಜಾರಿಗೆ ತರಲಾಗಿದೆ. ದೇಶದಲ್ಲಿ ಸುಮಾರು 14 ರಾಜ್ಯಗಳಲ್ಲಿ ಸೋಂಕಿನ ಪ್ರಮಾಣ ನಿಯಂತ್ರಣ ಮೀರಿ ಏರಿಕೆಯಾಗಿದ್ದು,ಅದನ್ನು ತಹಬದಿಗೆ ತರಲು ರಾಜ್ಯ ಸರ್ಕಾರಗಳು ಹೆಣಗಾಡುತ್ತಿವೆ.

ಕೇಂದ್ರ ಸರ್ಕಾರ ನೇರವಾಗಿ ಲಾಕ್‍ಡೌನ್ ಘೋಷಣೆ ಮಾಡದೆ ಸ್ಥಳೀಯ ಪರಿಸ್ಥಿತಿ ಆಧರಿಸಿ ರಾಜ್ಯ ಸರ್ಕಾರಗಳೆ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹೇಳಿದೆ. ಈಗ ನ್ಯಾಯಾಲಯ ಸೂಚನೆ ನೀಡಿರುವುದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರ ಯಾವ ನಿರ್ಧಾರಗಳನ್ನು ತೆಗೆದುಕೊಳ್ಳುತ್ತವೆ ಎಂದು ಕಾದು ನೋಡಬೇಕಿದೆ.

Facebook Comments

Sri Raghav

Admin