ಭಾರತೀಯ ಔಷಧಿಗಳ ಕೇಂದ್ರೀಯ ಮಂಡಳಿಗಳ ರಚನೆಗೆ ರಾಜ್ಯಸಭೆ ಅಸ್ತು

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಸೆ.18- ಹೋಮಿಯೋಪತಿ ಕೇಂದ್ರೀಯ ಮಂಡಳಿ ಮತ್ತು ಭಾರತೀಯ ಔಷಧಿಗಳ ಕೇಂದ್ರೀಯ ಮಂಡಳಿಗಳ ರಚನೆಗೆ ರಾಜ್ಯಸಭೆ ಇಂದು ಅನುಮೋದನೆ ನೀಡಿದೆ. ಸಂಸತ್‍ನ ಮುಂಗಾರು ಅಧಿವೇಶನದ 5ನೇ ದಿನದ ಕಲಾಪದಲ್ಲಿ ಈ ಕುರಿತ ಚರ್ಚೆ ನಂತರ ಈ ಎರಡು ಕೇಂದ್ರೀಯ ಮಂಡಳಿಗಳ ರಚನೆಗಾಗಿ ಎರಡು ಮಸೂದೆಗಳಿಗೆ ಮೇಲ್ಮನೆ ಅಂಗೀಕಾರ ನೀಡಿತು.

ಹೋಮಿಯೋಪತಿ ಕೇಂದ್ರೀಯ ಮಂಡಳಿ(ತಿದ್ದುಪಡಿ) 2002 ಮತ್ತು ಭಾರತೀಯ ಔಷಧಿಗಳ ಕೇಂದ್ರೀಯ ಮಂಡಳಿ(ತಿದ್ದುಪಡಿ) 2020 ಈ ಎರಡು ವಿಧೇಯಕಗಳಿಗೆ ರಾಜ್ಯಸಭೆ ಅಂಗೀಕಾರ ನೀಡಿದೆ.  ಈ ಎರಡು ಮಂಡಳಿಗಳ ರಚನೆಗಾಗಿ ಈ ಹಿಂದೆ ಸುಗ್ರೀವಾಜ್ಞೆ ಹಡಿಸಲಾಗಿತ್ತಾದರೂ ಇವುಗಳ ರಚನೆಗೆ ಅನುವು ಮಾಡಿಕೊಡುವ ವಿಧೇಯಕಕ್ಕೆ ಅಂಗೀಕಾರ ದೊರೆತಿರಲಿಲ್ಲ.

ಈ ಬಗ್ಗೆ ಸದನದಲ್ಲಿ ಕಾಂಗ್ರೆಸ್ ಮತ್ತು ಇತರೆ ಪಕ್ಷಗಳು ಮಂಡಳಿಗಳ ರಚನೆಗೆ ಕೇಂದ್ರ ಸರ್ಕಾರ ವಿನಾಕಾರಣ ವಿಳಂಬ ಮಾಡುತ್ತಿದೆ. ಸುಗ್ರೀವಾಜ್ಞೆ ಜಾರಿಗೊಳಿಸಿದ್ದರೂ ವಿಧೇಯಕ ಅನುಷ್ಠಾನಕ್ಕೆ ಅನಗತ್ಯವಾಗಿ ವಿಳಂಬವಾಗುತ್ತಿದೆ ಎಂದು ಆರೋಪಿಸಿದರು. ಕಾಲಮಿತಿಯೊಳಗೆ ಈ ಎರಡು ಮಂಡಳಿಗಳ ರಚನೆಗೆ ಅನುವು ಮಾಡಿಕೊಡುವ ವಿಧೇಯಕಗಳಿಗೆ ಮೇಲ್ಮನೆ ಅಂಗೀಕಾರ ನೀಡಿದ್ದು, ಹಾದಿ ಸುಗಮವಾಗಿದೆ.

Facebook Comments