ಆಸ್ಟ್ರೇಲಿಯಾದಲ್ಲಿ ಚಲಿಸಲಿವೆ ಭಾರತದ ಮೆಟ್ರೊ ರೈಲುಗಳು..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜೂ.13-ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳ ಪ್ರಮುಖ ಮತ್ತು ಜನಸ್ನೇಹಿ ಸಾರಿಗೆ ವ್ಯವಸ್ಥೆಯಾದ ಮೆಟ್ರೋ ಈಗ ಮತ್ತೊಂದು ಮಹತ್ವದ ಪಥದತ್ತ ಸಾಗುತ್ತಿದೆ.

ಭಾರತದಲ್ಲಿ ತಯಾರಾಗುವ ಮೆಟ್ರೋ ಟ್ರೈನ್‍ಗಳು ಆಸ್ಟ್ರೇಲಿಯಾದಲ್ಲಿ ಚಲಿಸಲು ಸಜ್ಜಾಗಿವೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಮೇಕ್ ಇನ್ ಇಂಡಿಯಾ ಅಭಿಯಾನವು ದೇಶವು ತಂತ್ರಜ್ಞಾನ ಜಗತ್ತಿನಲ್ಲಿ ಬೆಳಗುತ್ತಿರುವ ತಾರೆ ಎಂಬುದಕ್ಕೆ ಇದೊಂದು ಸ್ಪಷ್ಟ ನಿದರ್ಶನವಾಗಿದೆ.

ರೇಲ್ವೆ ಮತ್ತು ವಾಣಿಜ್ಯ ಸಚಿವ ಪಿಯೂಷ್ ಗೋಯೆಲ್ ಭಾರತದ ಸಾಧನೆ ಬಗ್ಗೆ ಮಾಹಿತಿ ನೀಡಿದ್ದಾರೆ. ನಮ್ಮ ದೇಶವು ಸಾರಿಗೆ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ದಿಟ್ಟ ಹೆಜ್ಜೆ ಇಟ್ಟಿದೆ. ಭಾರತದಲ್ಲಿ ನಿರ್ಮಾಣವಾಗಿರುವ ಮೆಟ್ರೋ ರೈಲುಗಳ ಬಗ್ಗೆ ಆಸ್ಟ್ರೇಲಿಯಾ ಪ್ರಭಾವಿತವಾಗಿದೆ.

ಆ ದೇಶದ ವಿವಿಧ ಮಹಾ ನಗರಗಳ ಮೆಟ್ರೋ ಮಾರ್ಗಗಳಲ್ಲಿ ಭಾರತದ ಮೆಟ್ರೋ ಟ್ರೈನ್‍ಗಳು ಚಲಿಸಲು ಆಸ್ಟ್ರೇಲಿಯಾ ಉತ್ಸುಕವಾಗಿದೆ. ಈ ಬಗ್ಗೆ ಆಸ್ಟ್ರೇಲಿಯಾ ಸರ್ಕಾದಿಂದ ಪ್ರಸ್ತಾವನೆಯೊಂದನ್ನು ಸ್ವೀಕರಿಸಲಾಗಿದೆ ಎಂದು ರೈಲ್ವೆ ಸಚಿವರು ತಿಳಿಸಿದರು.

ಅತ್ಯಾಧುನಿಕ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ವಿಶ್ವದ ಪ್ರಮುಖ ದೇಶಗಳಲ್ಲಿ ಆಸ್ಟ್ರೇಲಿಯಾ ಸಹ ಒಂದು. ಈಗ ಆ ದೇಶದಿಂದ ಭಾರತೀಯ ಮೆಟ್ರೋ ರೈಲುಗಳಿಗೆ ಬೇಡಿಕೆ ಬಂದಿರುವುದು ಹೆಮ್ಮೆ ಮತ್ತು ಸಂತಸದ ಸಂಗತಿ. ಇದು ಮೇಕ್ ಇನ್ ಇಂಡಿಯಾ ಅಭಿಯಾನ ಲೋಕಪ್ರಿಯತೆಯನ್ನು ಸೂಚಿಸುತ್ತದೆ ಎಂದು ಪಿಯೂಷ್ ಗೊಯೆಲ್ ಟ್ವೀಟ್‍ನಲ್ಲಿ ತಿಳಿಸಿದ್ದಾರೆ.

ಈ ಪ್ರಸ್ತಾವನೆ ಇನ್ನು ಪ್ರಥಮ ಹಂತದಲ್ಲಿದೆ. ಎರಡೂ ದೇಶಗಳ ನಡುವೆ ಮಾತುಕತೆ ಮತ್ತು ಒಪ್ಪಂದದ ಬಳಿಕ ಈ ಯೋಜನೆ ಸಾಕಾರಗೊಳ್ಳಲಿದೆ ಎಂದು ರೇಲ್ವೆ ಸಚಿವರು ತಿಳಿಸಿದ್ದಾರೆ.

Facebook Comments