18 ಉಗ್ರರು, 16 ಪಾಕ್ ಯೋಧರು ಹತ : ಭಾರತೀಯ ಸೇನೆ ಘೋಷಣೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಅ.23(ಪಿಟಿಐ)- ಗಡಿ ಮೂಲಕ ಭಾರತದೊಳಗೆ ನುಸುಳಿ ಭಾರೀ ವಿಧ್ವಂಸಕ ಕೃತ್ಯ ಎಸಗಲು ಸಜ್ಜಾಗಿದ್ದ ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಅಡಗು ತಾಣಗಳ ಮೇಲೆ ಭಾರತೀಯ ಸೇನೆ ನಡೆಸಿದ ಮಿನಿ ಸರ್ಜಿಕಲ್ ಸ್ಟ್ರೈಕ್‍ನಲ್ಲಿ 18 ಉಗ್ರರು ಮತ್ತು 16 ಪಾಕಿಸ್ತಾನಿ ಯೋಧರು ಹತರಾಗಿದ್ದಾರೆ ಎಂದು ಹಿರಿಯ ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪಿಒಕೆಯ ನೀಲಂ ಕಣಿವೆ, ಜುರಾ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ನಡೆದ ದಾಳಿಯಲ್ಲಿ ಜೈಷ್-ಇ-ಮೊಹಮದ್ (ಜೆಇಎಂ) ಉಗ್ರಗಾಮಿ ಸಂಘಟನೆಗಳ ಲಾಂಚ್ ಪ್ಯಾಡ್‍ಗಳು ಮತ್ತು ಅಡಗು ತಾಣಗಳು ಧ್ವಂಸವಾಗಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗಡಿಯಿಂದ ಅತ್ಯಾಧುನಿಕ 155 ಎಂ ಆರ್ಟಿಲರಿ ಗನ್ (ಪಿರಂಗಿಗಳ ಮೂಲಕ ನಡೆಸಲಾದ ನಿಖರ ದಾಳಿ ಯಲ್ಲಿ ಜೆಇಎಂನ ಭಯೋತ್ಪಾದಕರು ಮತ್ತು ಜಿಹಾದಿಗಳು ಸೇರಿದಂತೆ 18 ಮಂದಿ ಹತರಾಗಿದ್ದಾರೆ.

ಇದೇ ಸಂದರ್ಭದಲ್ಲಿ ಉಗ್ರ ರಿಗೆ ತರಬೇತಿ ನೀಡಲು ಅಲ್ಲಿ ನಿಯೋಜಿತರಾಗಿದ್ದ 16 ಪಾಕ್ ಯೋಧರು ಸಹ ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅ.19 ಮತ್ತು 20ರಂದು ನಡೆದ ಈ ಮಹತ್ವದ ಕಾರ್ಯಾಚರಣೆ ಬಗ್ಗೆ ಭೂ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರಿಗೆ ಸಂಪೂರ್ಣ ಮಾಹಿತಿ ಒದಗಿಸಿದ್ದಾರೆ.

60ಕ್ಕೂ ಹೆಚ್ಚು ಪಾಕ್ ಬೆಂಬಲಿತ ಉಗ್ರಗಾಮಿಗಳು ಗಡಿ ಮೂಲಕ ಭಾರತದೊಳಗೆ ನುಸುಳಿ ರಕ್ತಪಾತ ನಡೆಸಲು ಸಜ್ಜಾಗಿದ್ದಾರೆ ಎಂಬ ಖಚಿತ ಸುಳಿವಿನ ಮೇರೆಗೆ ಪಾಕ್ ಆಕ್ರಮಿತ ಕಾಶ್ಮೀರದ ಉಗ್ರರ ಅಡಗುತಾಣಗಳ ಮೇಲೆ ಅತ್ಯಾಧುನಿಕ ಆರ್ಟಿಲರಿ ಗನ್‍ಗಳು ಭೋರ್ಗರೆದು ಉಗ್ರಗಾಮಿಗಳ ಲಾಂಚ್ ಪ್ಯಾಡ್‍ಗಳು, ಅಲ್ಲಿ ದಾಸ್ತಾನು ಮಾಡಲಾಗಿದ್ದ ಅಪಾರ ಶಸ್ತ್ರಾಸ್ತ್ರಗಳು ಮತ್ತು ಮದ್ದು, ಗುಂಡುಗಳು ಧ್ವಂಸಗೊಂಡವು.

ಈ ಪ್ರದೇಶಗಳ ಬಹುತೇಕ ಎಲ್ಲಾ ಉಗ್ರರ ನೆಲೆಗಳು ನುಚ್ಚು ನೂರಾಗಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ತಮ್ಮ ಹೆಸರನ್ನು ಬಹಿರಂಗ ಗೊಳಿಸಲು ಇಚ್ಛಿಸದ ಮತ್ತೊಬ್ಬ ಹಿರಿಯ ಅಧಿಕಾರಿಗಳು ಈ ದಾಳಿಯಲ್ಲಿ ಇನ್ನೂ ಅಧಿಕ ಸಂಖ್ಯೆಯ ಭಯೋತ್ಪಾದಕರು ಮತ್ತು ಪಾಕ್ ಸೈನಿಕರು ಹತರಾಗಿದ್ದಾರೆ ಎಂದು ತಿಳಿಸಿದ್ದಾರೆ.

Facebook Comments