ಉತ್ತರ ಭಾರತದಲ್ಲಿ ಸಿಲುಕಿರುವ ಕನ್ನಡಿಗರನ್ನು ರಾಜ್ಯಕ್ಕೆ ಕರೆತರಲು ರೇಲ್ವೆ ಇಲಾಖೆ ಒಪ್ಪಿಗೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ : ಲಾಕ್ಡೌನಿಂದಾಗಿ ಉತ್ತರ ಭಾರತದಲ್ಲಿ ಸಿಕ್ಕಿಹಾಕಿಕೊಂಡಿರುವ ಕನ್ನಡಿಗರು ತಮ್ಮ ರಾಜ್ಯಕ್ಕೆ ಮರಳುವುದಕ್ಕಾಗಿ ಸಿಕ್ಕಿಹಾಕಿಕೊಂಡಿರುವ ರೈಲೊಂದನ್ನು ಓಡಿಸಲು ರೇಲ್ವೆ ಇಲಾಖೆಯು ಒಪ್ಪಿಗೆ ನೀಡಿದೆ.

ಪತ್ರಿಕಾ ಹೇಳಿಕೆಯೊಂದರಲ್ಲಿ ಈ ವಿಷಯ ತಿಳಿಸಿರುವ ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಡಿ ವಿ ಸದಾನಂದ ಗೌಡ ಅವರು ಈ ದಿಸೆಯಲ್ಲಿ ರೇಲ್ವೆ ಸಚಿವ ಪಿಯುಶ್‌ ಗೋಯಲ್‌ ಅವರೊಂದಿಗೆ ತಾವು ನಡೆಸಿದ ಮಾತುಕತೆ ಯಶಸ್ವಿಯಾಗಿದೆ, ಒಂದೆರಡು ದಿನದಲ್ಲಿ ದೆಹಲಿಯಿಂದ ಬೆಂಗಳೂರಿಗೆ ವಿಶೇಷ ರೈಲು ಸಂಚರಿಸಲಿದೆ ಎಂದಿದ್ದಾರೆ.

ದೆಹಲಿಯ ಹೊರತಾಗಿ ಹರಿಯಾಣ, ಪಂಜಾಬ್‌ ಮತ್ತಿತರ ಸಮೀಪದ ಸ್ಥಳಗಳಿಂದಲೂ ರಾಜ್ಯಕ್ಕೆ ವಾಪಸ್‌ ಆಗಲು ಅಲ್ಲಿರುವ ಕನ್ನಡಿಗರು ಕಾತರರಾಗಿದ್ದಾರೆ. ಆ ರಾಜ್ಯಗಳ ಅಧಿಕಾರಿಗಳ ಜೊತೆ ಮಾತನಾಡಿ ಅಲ್ಲಿರುವ ಕನ್ನಡಿಗರನ್ನು ಕೂಡಲೇ ದೆಹಲಿಗೆ ಕರೆಸಿಕೊಂಡು ಅವರನ್ನೂ ಇದೇ ರೈಲಿನಲ್ಲಿ ಕರ್ನಾಟಕಕ್ಕೆ ಕಳುಹಿಸಿಕೊಡಲು ಅಗತ್ಯ ವ್ಯವಸ್ಥೆ ಮಾಡುವಂತೆ ದೆಹಲಿಯಲ್ಲಿರುವ ರಾಜ್ಯದ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಸಚಿವರು ಹೇಳಿದ್ದಾರೆ.

ಹಾಗೆಯೇ ಅರಬೀ ದೇಶಗಳಲ್ಲಿರುವ ಕನ್ನಡಿಗರು ಸ್ವದೇಶಕ್ಕೆ ಮರಳಲು ಎರಡು ವಿಮಾನಗಳ ವ್ಯವಸ್ಥೆಯಾಗಿದೆ. ಇದೇ 12ನೇ ತಾರೀಖು ಯುಏಇನಿಂದ ಮಂಗಳೂರಿಗೆ ವಿಮಾನ ಸಂಚರಿಸುವುದನ್ನು ವಿದೇಶಾಂಗ ಸಚಿವರು ತಮಗೆ ಖಚಿತಪಡಿಸಿದ್ದಾರೆ. ಇನ್ನೊಂದು ವಿಮಾನ ಬೆಂಗಳೂರಿಗೆ ಬರಲಿದ್ದು ಅದರ ವೇಳಾಪಟ್ಟಿಯಿನ್ನೂ ಪ್ರಕಟವಾಗಬೇಕಿದೆ ಎಂದು ತಿಳಿಸಿದ್ದಾರೆ.

ಹಾಗೆಯೇ, ದೆಹಲಿ ಮತ್ತಿತರ ಸ್ಥಳಗಳಿಂದ ತಮ್ಮ ಸ್ವಂತ ವಾಹನ ವ್ಯವಸ್ಥೆ ಮಾಡಿಕೊಂಡು ಕರ್ನಾಟಕಕ್ಕೆ ಮರಳಲು ಇಚ್ಛಿಸಿದ ಅನೇಕ ದೆಹಲಿವಾಸಿ ಕನ್ನಡಿಗರು ಹಾಗೂ ಯಾತ್ರಾರ್ಥಿಳಿಗೂ ಅಗತ್ಯ ಪರವಾನಿಗೆಯನ್ನು ಕೊಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ನಡುವೆ, ವಿಶೇಷ ವಿಮಾನದ ವ್ಯವಸ್ಥೆ ಕಲ್ಪಿಸಿದ್ದಕ್ಕಾಗಿ ಅರಬೀ ದೇಶಗಳಲ್ಲಿರುವ ಕನ್ನಡಿಗರು ಸಚಿವ ಸದಾನಂದ ಗೌಡರಿಗೆ ಧನ್ಯವಾದ ಹೇಳಿದ್ದಾರೆ. ಮಧ್ಯಪ್ರಾಚ್ಯ ದೇಶಗಳಲ್ಲಿ ಸಿಕ್ಕಿಹಾಕಿಕೊಂಡಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆತರಲು ಹಲವು ವಿಮಾನಗಳ ವ್ಯವಸ್ಥೆ ಮಾಡಲಾಗಿತ್ತು.

ಆದರೆ ಮೊದಲ ಪಟ್ಟಿಯಲ್ಲಿ ದುಬೈನಿಂದ ಕರ್ನಾಟಕಕ್ಕೆ ಯಾವುದೇ ವಿಮಾನ ನಿಗದಿಯಾಗಿರಲಿಲ್ಲ. ಈ ವಿಚಾರವನ್ನು ಸದಾನಂದ ಗೌಡ ಅವರು ವಿದೇಶಾಂಗ ಸಚಿವರ ಜೊತೆ ಪ್ರಸ್ತಾಪಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Facebook Comments

Sri Raghav

Admin