ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಹೆಚ್ಚುವರಿ ರೈಲು ಸಂಚಾರ ಆರಂಭ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.8- ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಮತ್ತು ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ಅನುಕೂಲವಾಗಲು ಇಂದಿನಿಂದ ನೈರುತ್ಯ ರೈಲ್ವೆ ಏಪ್ರಿಲ್ 14ರ ವರೆಗೆ ಹೆಚ್ಚುವರಿ ರೈಲು ಸಂಚಾರ ನಡೆಸಲಿದೆ. ಸಾರಿಗೆ ನೌಕರರ ಮುಷ್ಕರದಿಂದಾಗಿ ಯುಗಾದಿ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರಿಗೆ ತೊಂದರೆಯಾಗದಂತೆ ಹೆಚ್ಚುವರಿ ರೈಲು ಸಂಚಾರ ಸೇವೆ ವ್ಯವಸ್ಥೆ ಮಾಡಲಾಗಿದೆ. ನಿನ್ನೆ ನೈಋತ್ಯ ರೈಲ್ವೆಯಿಂದ ಕೆಲವು ರೈಲುಗಳನ್ನು ಹೆಚ್ಚುವರಿಯಾಗಿ ವ್ಯವಸ್ಥೆ ಮಾಡಲಾಗಿದೆ. ಇಂದು ಮತ್ತೆ 18 ಹೆಚ್ಚುವರಿ ರೈಲುಗಳ ವ್ಯವಸ್ಥೆ ಮಾಡಲಾಗಿದೆ.

ಯುಗಾದಿ ಸಮಯದಲ್ಲಿ ಒಂದು ಊರಿನಿಂದ ಇನ್ನೊಂದು ಊರಿಗೆ ಪ್ರಯಾಣ ಮಾಡುವವರ ಸಂಖ್ಯೆ ಅಧಿಕವಾಗಿರುತ್ತದೆ. ಅಲ್ಲದೆ, ಈಗ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರು ವೇತನ ಹೆಚ್ಚಳಕ್ಕೆ ಆಗ್ರಹಿಸಿ ಮುಷ್ಕರ ನಡೆಸುತ್ತಿದ್ದಾರೆ. ಇದರಿಂದ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ನೈರುತ್ಯ ರೈಲ್ವೆ ಈ ಕ್ರಮ ಕೈಗೊಂಡಿದೆ.

ಹುಬ್ಬಳ್ಳಿ-ಯಶವಂತಪುರ, ಯಶವಂತಪುರ – ವಿಜಯಪುರ, ಯಶವಂತಪುರ-ಬೆಳಗಾವಿ, ಬೆಳಗಾವಿ-ಯಶವಂತಪುರ, ಮೈಸೂರು-ಬೀದರ್, ಬೀದರ್ – ಮೈಸೂರು, ಯಶವಂತಪುರ – ಬೀದರ್, ಬೀದರ್ – ಯಶವಂತಪುರ, ಸಂಗೊಳ್ಳಿ ರಾಯಣ್ಣ ನಿಲ್ದಾಣ-ಮೈಸೂರು, ಮೈಸೂರು – ಸಂಗೊಳ್ಳಿ ರಾಯಣ್ಣ ನಿಲ್ದಾಣ, ಯಶವಂತಪುರ – ಮೈಸೂರು, ಮೈಸೂರು – ಯಶವಂತಪುರ, ಯಶವಂತಪುರ – ಶಿವಮೊಗ್ಗ, ಶಿವಮೊಗ್ಗ – ಸಂಗೊಳ್ಳಿ ರಾಯಣ್ಣ ನಿಲ್ದಾಣ, ಯಶವಂತಪುರ – ಕಾರವಾರ, ಕಾರವಾರ – ಯಶವಂತಪುರ ಮಾರ್ಗದಲ್ಲಿ ಹೆಚ್ಚುವರಿ ರೈಲುಗಳ ವ್ಯವಸ್ಥೆ ಕಲ್ಪಿಸಲಾಗಿದೆ. ನೈಋತ್ಯ ರೈಲ್ವೆಯಿಂದ ಒಟ್ಟು 18 ಹೆಚ್ಚುವರಿ ರೈಲುಗಳ ಸೇವೆ ನೀಡಲಾಗಿದೆ. ರೈಲುಗಳ ಹೆಚ್ಚುವರಿ ಸೇವೆಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ರೈಲು ಸೇವೆ ನೀಡಲಾಗಿದೆ.

ಆರನೆ ವೇತನ ಆಯೋಗದ ಜಾರಿಗೆ ಆಗ್ರಹಿಸಿ ಕಳೆದ ನಾಲ್ಕು ತಿಂಗಳಲ್ಲಿ ಎರಡನೇ ಬಾರಿಗೆ ಸಾರಿಗೆ ನೌಕರರು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ನಿನ್ನೆಯಿಂದ ಮುಷ್ಕರ ಆರಂಭವಾಗಿದ್ದು, ಎರಡನೆ ದಿನವಾದ ಇಂದು ಕೂಡ ಮುಷ್ಕರ ಮುಂದುವರೆದಿದೆ. ಸಾರಿಗೆ ನೌಕರರ ಮುಷ್ಕರದಿಂದ ಸರ್ಕಾರ ಖಾಸಗಿ ಬಸ್ ಮೊರೆ ಹೋಗಿದೆ.

Facebook Comments