ಹೇಳಿದ್ದು 10,100 ಬೆಡ್ ಅಂತ, ನೀಡಿದ್ದು 5 ಸಾವಿರ ಬೆಡ್‍..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.24- ಕೊರೋನಾ ಸೋಂಕಿತರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಬೆಡ್‍ಗಳಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್‍ಗಳು ಸಿಗುತ್ತಿಲ್ಲ. ಸೋಂಕಿತರ ಚಿಕಿತ್ಸೆಗಾಗಿ ಬೆಂಗಳೂರು ಹೊರ ವಲಯದ ಮಾದಾವರದ ಬಿಐಇಸಿಯಲ್ಲಿ ಸಿದ್ಧವಾಗಿರುವುದು ಕೇವಲ ಒಂದು ಸಾವಿರ ಬೆಡ್‍ಗಳು ಮಾತ್ರ.

ಇಲ್ಲಿ 10,100 ಬೆಡ್‍ಗಳ ಬೃಹತ್ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ಹೇಳಲಾಗಿತ್ತು. ಆದರೆ ಈವರೆಗೆ ಕೇವಲ 5 ಸಾವಿರ ಬೆಡ್‍ಗಳನ್ನು ಮಾತ್ರ ಕಲ್ಪಿಸಲಾಗಿದೆ. ಆದರೆ ಚಿಕಿತ್ಸೆಗೆ ಲಭ್ಯವಿರುವುದು 1 ಸಾವಿರ ಬೆಡ್‍ಗಳು ಮಾತ್ರ ಎಂದು ಸ್ವತಃ ಬಿಬಿಎಂಪಿ ಆಯುಕ್ತರೇ ಟ್ವೀಟ್ ಮಾಡಿದ್ದಾರೆ.

ಇತ್ತ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಚಿಕಿತ್ಸೆಗಾಗಿ ಜನ ಪರದಾಡುತ್ತಿದ್ದಾರೆ. 10,100 ಬೆಡ್‍ಗಳ ಬೃಹತ್ ಪ್ರಮಾಣದ ಚಿಕಿತ್ಸಾ ಸೌಲಭ್ಯವನ್ನು ಕಲ್ಪಿಸಲಾಗಿದೆ ಎಂದು ಹೇಳಲಾಗಿತ್ತು. ಆದರೆ ಈ ವ್ಯವಸ್ಥೆ ಜನರಿಗೆ ಸಿಗುವುದು ಯಾವಾಗ? ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ.

ಈಗಾಗಲೇ ದಿನದಿಂದ ದಿನಕ್ಕೆ ಸಾಯುವವರ ಸಂಖ್ಯೆಯೂ ಕೂಡ ಹೆಚ್ಚಾಗುತ್ತಿದೆ. ಖಾಸಗಿ ಆಸ್ಪತ್ರೆಗಳವರು ಸೋಂಕಿತರಿಗೆ ಸರಿಯಾದ ಚಿಕಿತ್ಸೆ ನೀಡಲು ಮೀನಾಮೇಷ ಎಣಿಸುತ್ತಿದ್ದಾರೆ.

ಖಾಸಗಿ ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ಸಿಗದೆ ಜನ ಪರದಾಡುತ್ತಿದ್ದಾರೆ. ಸಿಲಿಕಾನ್ ಸಿಟಿಯಲ್ಲಿ ಕೊರೋನಾ ರಣಕೇಕೆ ಮುಂದುವರೆದಿದೆ. ಕೊರೋನಾ ನಿಯಂತ್ರಿಸಲು ಸರ್ಕಾರ ಹರಸಾಹಸ ಪಡುತ್ತಿದೆ.

ಈ ಎಲ್ಲದರ ನಡುವೆ ಬಿಐಇಸಿಯಲ್ಲಿ ಎಲ್ಲ ಸೌಲಭ್ಯಗಳನ್ನೊಳಗೊಂಡು ಯಾವಾಗ ಪ್ರಾರಂಭವಾಗುತ್ತದೆ ಎಂದು ಜನ ಎದುರು ನೋಡುತ್ತಿದ್ದಾರೆ.

Facebook Comments

Sri Raghav

Admin