ಭಾರತದಲ್ಲಿ ಕ್ರೂರತೆಯ ಪರಾಕಾಷ್ಠೆಯಲ್ಲಿ ಕೊರೋನಾ..! 24 ಗಂಟೆಗಳಲ್ಲಿ 9,987 ಪಾಸಿಟಿವ್, 266 ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಮುಂಬೈ, ಜೂ. 9-ದೇಶದಲ್ಲಿ ವಿನಾಶಕಾರಿ ಕೊರೊನಾ ವೈರಸ್ ಹಾವಳಿ ಆತಂಕಕಾರಿ ಮಟ್ಟದಲ್ಲಿಯೇ ಮುಂದುವರಿದಿದ್ದು, ಭಾರೀ ಅಪಾಯಕಾರಿ ಸನ್ನಿವೇಶ ಎದುರಿಸುವಂತಾಗಿದೆ.  ಕಳೆದ 17 ದಿನಗಳಿಂದ ಪಾಸಿಟಿವ್ ಪ್ರಕರಣಗಳ ಸಂಖ್ಯೆ ದ್ವಿಗುಣಗೊಂಡಿದ್ದು, ದೇಶದ ಜನತೆ ಪ್ರಾಣ ಭೀತಿಯಿಂದ ಮತ್ತಷ್ಟು ಹೆದರಿ ಕಂಗಲಾಗಿದ್ದಾರೆ.

24 ತಾಸುಗಳ ಅವಧಿಯಲ್ಲಿ ಹೊಸ ದಾಖಲೆ ಮಟ್ಟದಲ್ಲಿ ಅಂದರೆ ಅತ್ಯಧಿಕ 9.987 ಮಂದಿಗೆ ಸೋಂಕು ತಗುಲಿದೆ. ಇದೇ ಅವಧಿಯಲ್ಲಿ 266 ರೋಗಿಗಳು ಬಲಿಯಾಗಿದ್ದಾರೆ. ಈವರೆಗೆ ಭಾರತದಲ್ಲಿ ಸೋಂಕಿತರ ಸಂಖ್ಯೆ 2.66 ಲಕ್ಷಕ್ಕೇರಿದ್ದು, ಒಟ್ಟು 7,466 ಮಂದಿ ಮೃತಪಟ್ಟಿದ್ದಾರೆ.

ಮತ್ತೊಂದು ಆಘಾತಕಾರಿ ಸಂಗತಿ ಎಂದರೆ ದೇಶದಲ್ಲಿ ಸತತ ಆರು ದಿನಗಳಿಂದ ಸೋಂಕಿತರ ಸಂಖ್ಯೆ 9,000+ ಪ್ರಮಾಣದಲ್ಲೇ ಮುಂದುವರಿದಿದೆ. ನಿನ್ನೆ ಒಂದೇ ದಿನ 9,987 (ಭಾನುವಾರ 9,983 (9,971, ಶನಿವಾರ 9,971, ಶುಕ್ರವಾರ 9,887, ಗುರುವಾರ 9,851 ಮತ್ತು ಬುಧವಾರ 9,304) ಸೋಂಕು ಕೇಸ್‍ಗಳು ವರದಿಯಾಗಿದೆ.

ಮತ್ತೊಂದು ಆಘಾತಕಾರಿ ವಿದ್ಯಮಾನವೆಂದರೆ ಇಡೀ ವಿಶ್ವದಲ್ಲಿ ಅತ್ಯಂತ ಹೆಚ್ಚು ಗಂಭೀರ ಸೋಂಕು ಪ್ರಕರಣಗಳು ಭಾರತದಲ್ಲಿ ವರದಿಯಾಗಿದೆ. ಅಮೆರಿಕ ಮೊದಲ ಸ್ಥಾನದಲ್ಲಿದ್ದು. 16,923 ರೋಗಿಗಳ ಸ್ಥಿತಿ ಶೋಚನೀಯವಾಗಿದ್ದರೆ, ಭಾರತದಲ್ಲಿ 8,944 ಜನರು ಆರೋಗ್ಯ ಗಂಭೀರವಾಗಿದೆ.

ಭಾರತದಲ್ಲಿ ಕೊರೊನಾ ಸೋಂಕು ಶರವೇಗದಲ್ಲಿ ಹೆಚ್ಚಾಗುತ್ತಿದ್ದು, ಪರಿಸ್ಥಿತಿ ಇದೇ ರೀತಿ ಮುಂದುವರಿದಿದ್ದೇ ಆದಲ್ಲಿ ಇನ್ನೆರಡು ದಿನಗಳಲ್ಲಿ ಭಾರತವು ಈಗಿರುವ ಐದನೇ ಸ್ಥಾನದಿಂದ ನಾಲ್ಕನೇ ಸ್ಥಾನಕ್ಕೇರಲಿದೆ. ಅಲ್ಲದೆ, ಇನ್ನು ಕೆಲವೇ ದಿನಗಳಲ್ಲಿ ಮೊದಲ ನಾಲ್ಕು ಸ್ಥಾನಗಳಲ್ಲಿರುವ ಅಮೆರಿಕ, ಬ್ರೆಜಿಲ್, ರಷ್ಯಾ ಮತ್ತು ಇಂಗ್ಲೆಂಡ್ ದೇಶಗಳನ್ನು ಹಿಂದಿಕ್ಕುವ ಆತಂಕವೂ ಇದೆ.

ಹೆಮ್ಮಾರಿ ನಿಗ್ರಹಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಘಟಿತ ಹೋರಾಟ ನಡೆಸುತ್ತಿದ್ದರೂ ಹೆಮ್ಮಾರಿಯ ಅಟ್ಟಹಾಸ ಮತ್ತಷ್ಟು ತೀವ್ರಗೊಂಡಿದ್ದು, ಜೂನ್ ತಿಂಗಳ ಏಳನೇ ದಿನವೂ ಆತಂಕಕಾರಿ ಮಟ್ಟದಲ್ಲಿ ನಿರಂತರವಾಗಿ ಸೋಂಕು ಮತ್ತು ಸಾವು ಹೆಚ್ಚಾಗುತ್ತಿದೆ. ನಾಳೆ ವೇಳೆಗೆ ದೇಶದಲ್ಲಿ ಸಾವಿನ ಪ್ರಮಾಣ 7,750 ಮತ್ತು ಸೋಂಕು ಬಾಧಿತರ ಸಂಖ್ಯೆ 2.76 ಲಕ್ಷ ತಲುಪುವ ಆತಂಕವಿದೆ.

ದೇಶದಲ್ಲಿ ಒಂದೇ ದಿನ 9,000ಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣ ಪತ್ತೆಯಾಗಿರುವುದು ಇದು ನಿರಂತರ ಆರನೇ ದಿನ. ಸತತ 17 ದಿವಸಗಳಿಂದ 6,000ಕ್ಕೂ ಹೆಚ್ಚು ಸೋಂಕು ಪ್ರಕರಣಗಳು ಪತ್ತೆಯಾಗಿದೆ. ಅಲ್ಲದೇ 7,000ಕ್ಕೂ ಅಧಿಕ ಪಾಸಿಟಿವ್ ಕೇಸ್‍ಗಳು ಪತ್ತೆಯಾದ 11 ದಿನವಾಗಿದ್ದು ದೇಶದ ಗಂಭೀರ ಸ್ಥಿತಿಗೆ ಸಾಕ್ಷಿಯಾಗಿದೆ. ಸಾಂಕ್ರಾಮಿಕ ರೋಗ ಉಲ್ಬಣಗೊಂಡ ನಂತರ ಸತತ ಒಂಭತ್ತನೆ ದಿನ 8,000ಕ್ಕೂ ಅಧಿಕ ಸೋಂಕು ಪ್ರಕರಣ ವರದಿಯಾಗಿದೆ.

ಸಾಂಕ್ರಾಮಿಕ ರೋಗ ಉಲ್ಬಣದಲ್ಲಿ ನಿರಂತರ 19 ದಿನದ ಭಾರೀ ಜಿಗಿತ ಇದಾಗಿದೆ. ಅಲ್ಲದೇ ಈ ಅವಧಿಯಲ್ಲಿ 14 ದಿವಸಗಳಿಂದಲೂ 6,500ಕ್ಕೂ ಹೆಚ್ಚು ಪಾಸಿಟಿವ್ ಕೇಸ್‍ಗಳು ದಾಖಲಾಗಿವೆ. ನಿನ್ನೆ ಒಂದೇ ದಿನ ದೇಶದ ವಿವಿಧ ರಾಜ್ಯಗಳಲ್ಲಿ ಒಟ್ಟು 266 ಮಂದಿ ಸಾವಿಗೀಡಾಗಿದ್ದು, ಒಟ್ಟಾರೆ ಮೃತ ಸಂಖ್ಯೆ 7,466ಕ್ಕೇರಿದೆ ಭಾರತದಲ್ಲಿ. ಸೋಂಕು ಪೀಡಿತರ ಸಂಖ್ಯೆ 2,66,598 ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

24 ಗಂಟೆಗಳಲ್ಲಿ ದೇಶದ ವಿವಿಧೆಡೆ ಸಂಭವಿಸಿದ 266 ಮರಣ ಪ್ರಕರಣಗಳಲ್ಲಿ ಮಹಾರಾಷ್ಟ್ರದಲ್ಲಿ 109, ದೆಹಲಿ 62, ಗುಜರಾತ್ 31 ತಮಿಳುನಾಡು 17, ಹರಿಯಾಣ 11, ಪಶ್ಚಿಮ ಬಂಗಾಳ 9, ಉತ್ತರಪ್ರದೇಶ ರಾಜಸ್ತಾನ 6, ಜಮ್ಮು-ಕಾಶ್ಮೀರ 4, ಕರ್ನಾಟಕ 3, ಮಧ್ಯಪ್ರದೇಶ ಮತ್ತು ಪಂಜಾಬ್ ತಲಾ 2 ಹಾಗೂ ಕೇರಳ ಮತ್ತು ಒಡಿಶಾ ತಲಾ ಒಂದು ಸಾವು ಪ್ರಕರಣ ವರದಿಯಾಗಿದೆ.

ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ ಸಹ ಹೆಚ್ಚಾಗುತ್ತಿದ್ದು, 1,29,917ಕ್ಕೇರಿದೆ. ಈವರೆಗೆ 1,29,214 ಮಂದಿ ಗುಣಮುಖರಾಗಿದ್ದಾರೆ. ದೇಶದಲ್ಲಿ ವೈರಾಣು ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆಯಲ್ಲಿ ಶೇ.48.47ರಷ್ಟು ವೃದ್ದಿ ಕಂಡುಬಂದಿರುವುದು ಹಾಗೂ ಸಕ್ರಿಯ/ಚೇತರಿಕೆ ಪ್ರಕರಣ ಸರಿಸಮಾನತವಾಗಿರುವುದು ಸಮಾಧಾನಕರ ಸಂಗತಿಯಾದರೂ, ಮತ್ತೊಂದಡೆ ಸೋಂಕು ಮತ್ತು ಸಾವು ಹೆಚ್ಚಾಗುತ್ತಿರುವುದು ಕಳವಳಕಾರಿಯಾಗಿದೆ.

ಇಂದು ಬೆಳಗ್ಗೆಯೂ ಕೆಲವು ರಾಜ್ಯಗಳಲ್ಲಿ ಸಾವು ಪ್ರಕರಣಗಳು ವರದಿಯಾಗಿದೆ. ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ರಾಜಸ್ತಾನ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ದೆಹಲಿ, ಕರ್ನಾಟಕ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಪಂಜಾಬ್, ಓಡಿಶಾ ಮತ್ತಿತರ ರಾಜ್ಯಗಳಲ್ಲಿ ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿವೆ.

ಜೂನ್ ಕೊನೆ ವಾರಗಳಲ್ಲಿ ಸೋಂಕು ಮತ್ತು ಸಾವಿನ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಲಿದೆ ಎಂಬ ವರದಿಗಳಿದ್ದು, ಅದಕ್ಕೆ ಮುನ್ಸೂಚನೆಯಾಗಿ ಮೊದಲ ವಾರದಲ್ಲೇ ಹೆಚ್ಚಿನ ಪ್ರಕರಣಗಳು ದಾಖಲಾಗುತ್ತಿರುವುದು ಆಘಾತಕಾರಿಯಾಗಿದೆ.

ಈ ಆಘಾತಕಾರಿ ಸನ್ನಿವೇಶದ ನಡುವೆಯೇ ಭಾರತವು ಸೋಂಕು ಪ್ರಮಾಣದಲ್ಲಿ ಸ್ಪೇನ್ ದೇಶವನ್ನು ಹಿಂದಿಕ್ಕಿ ಐದನೇ ಸ್ಥಾನಕ್ಕೇರಿದೆ. ಎರಡು ದಿನಗಳ ಹಿಂದಷ್ಟೇ ಭಾರತ ಆರನೇ ಸ್ಥಾನದಲ್ಲಿತ್ತು. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ನಾಲ್ಕನೇ ಸ್ಥಾನದಲ್ಲಿರುವ ಇಂಗ್ಲೆಂಡ್‍ನನ್ನು ಹಿಂದುಕ್ಕುವ ಕಾಲ ದೂರವಿಲ್ಲ.

Facebook Comments