ಶಾಕಿಂಗ್ : ದೇಶದಲ್ಲಿ ನಿನ್ನೆ ಒಂದೇ ದಿನ ಕೊರೋನಾಗೆ 2,796 ಮಂದಿ ಬಲಿ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಡಿ.5- ಆಘಾತಕಾರಿ ಬೆಳವಣಿಗೆಯಲ್ಲಿ ಕೋವಿಡ್ ಸೋಂಕಿನಿಂದ ಸಾವಿನ ಪ್ರಕರಣಗಳು ತೀವ್ರವಾಗಿ ಏರಿಕೆಯಾಗಿದ್ದು, ನಿನ್ನೆ ಒಂದೇ ದಿನ 2,796 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ದೇಶದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ನಿಯಂತ್ರಣದಲ್ಲಿವೆ ಎಂದು ಸಮಾಧಾನಪಟ್ಟುಕೊಳ್ಳುತ್ತಿರುವ ನಡುವೆಯೇ ಸಾವಿನ ಸಂಖ್ಯೆ ಐದು ಪಟ್ಟು ಹೆಚ್ಚಾಗಿರುವುದು ಹಲವು ಆತಂಕಗಳನ್ನು ಸೃಷ್ಟಿಸಿವೆ. ಅದರಲ್ಲೂ ಬಿಹಾರದಲ್ಲಿ ಅತಿಹೆಚ್ಚು ಸಾವುಗಳು ಸಂಭವಿಸಿವೆ. ನೆರೆ ರಾಜ್ಯ ಕೇರಳದಲ್ಲೂ ಆತಂಕಕಾರಿ ಎನ್ನುವಷ್ಟು ಜೀವಹಾನಿಯಾಗಿದೆ.

ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು ಬೆಳಗ್ಗೆ 8 ಗಂಟೆ ವೇಳೆಗೆ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ ಸಾವಿನ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ. ಈ ಮೊದಲು ಪ್ರತಿದಿನ 400ರಿಂದ 500 ಮಂದಿ ಸಾವನ್ನಪ್ಪುತ್ತಿದ್ದ ವರದಿಗಳಿದ್ದವು. ಯಾವುದೇ ಮುನ್ಸೂಚನೆ ನೀಡದೆ ದಿಢೀರ್ ಸಾವಿನ ಪ್ರಕರಣ ಹೆಚ್ಚಾಗಿರುವುದು ಹಲವು ಅನುಮಾನಗಳನ್ನು ಹುಟ್ಟಿಸಿದೆ.

ದೇಶದಲ್ಲಿ ಓಮೈಕ್ರಾನ್ ಕಾಣಿಸಿಕೊಂಡು ಮೂರು ದಿನಗಳಾಗಿವೆ. ಅಲ್ಲಲ್ಲೇ ಸೋಂಕಿನ ಪ್ರಕರಣಗಳು ವರದಿಯಾಗುತ್ತಿವೆ. ರೂಪಾಂತರಿ ಓಮೈಕ್ರಾನ್‍ನಿಂದ ಸಾವಿನ ಪ್ರಮಾಣ ಹೆಚ್ಚುವುದಿಲ್ಲ ಎಂಬ ಮಾಹಿತಿ ಇದ್ದರೂ ಕೂಡ ನಿನ್ನೆ ಆರೋಗ್ಯ ಇಲಾಖೆಯ ವರದಿ ಬೆಚ್ಚಿ ಬೀಳುವಂತೆ ಮಾಡಿದೆ.

ಕಳೆದ ಮೇ ತಿಂಗಳಿನಲ್ಲಿ 2ನೇ ಅಲೆಯಿಂದಾಗಿ ಸೋಂಕಿನ ಪ್ರಮಾಣ ತೀವ್ರವಾಗಿದ್ದ ವೇಳೆ ದಿನವೊಂದಕ್ಕೆ 4,200ರವರೆಗೂ ಸಾವಿನ ಪ್ರಕರಣಗಳು ವರದಿಯಾಗಿದ್ದವು. ಜೂನ್‍ನಲ್ಲಿ ಸಾವಿನ ಸಂಖ್ಯೆ ಇಳಿಕೆಯಾಗಿತ್ತು. ಜೂ.16ರಂದು ಮತ್ತೆ ಏರಿಕೆಯಾಗಿ 2300 ಮಂದಿ ಜೀವ ಕಳೆದುಕೊಂಡಿದ್ದರು.
ಬಳಿಕ ಸೋಂಕು ಹಾಗೂ ಸಾವಿನ ಪ್ರಕರಣಗಳು ನಿಯಂತ್ರಣದಲ್ಲಿತ್ತಾದರೂ ಅಕ್ಟೋಬರ್ ವೇಳೆಗೆ ಮತ್ತೆ ಹೆಚ್ಚಾಯಿತು. ಅ.28ರಂದು 805 ಮಂದಿ ಸಾವನ್ನಪ್ಪಿದ್ದು, ಇತ್ತೀಚಿನ ದಿನಗಳಲ್ಲಿ ಅತಿಹೆಚ್ಚಿನ ಸಾವಿನ ಪ್ರಮಾಣ ಎಂದು ಉಲ್ಲೇಖಿಸಲಾಗಿದೆ. ನ.12ರಂದು 555 ಮಂದಿ, 17ರಂದು 470 ಮಂದಿ 18ರಂದು 451 ಮಂದಿ ಸಾವನ್ನಪ್ಪಿದ್ದರು.

ಮೊನ್ನೆಯವರೆಗೂ ಕೋವಿಡ್ ಸಾವಿನ ಪ್ರಕರಣಗಳು 500ರೊಳಗೆ ಸೀಮಿತವಾಗಿದ್ದವು. ಆದರೆ ನಿನ್ನೆ ದಿಢೀರ್ ಏರಿಕೆಯಾಗಿದೆ. ದೇಶದಲ್ಲಿ ಒಟ್ಟು ಸಾವಿನ ಸಂಖ್ಯೆ 4,73,326ರಷ್ಟಿದ್ದು, ನಿನ್ನೆಯ ಸಾವಿನ ಪ್ರಕರಣಗಳಿಂದ ಒಟ್ಟು ಪ್ರಮಾಣ ಶೇ.1.37ರಷ್ಟಾಗಿದೆ. ಬಿಹಾರದಲ್ಲಿ ಅತಿಹೆಚ್ಚು ಸಾವುಗಳಾಗಿದ್ದು, 2026 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಕೇರಳದಲ್ಲಿ 315, ಮಹಾರಾಷ್ಟ್ರದಲ್ಲಿ 15 ಮಂದಿಯ ಜೀವಹಾನಿಯಾಗಿದೆ.
ಒಟ್ಟು ಸೋಂಕಿತ ಸಂಖ್ಯೆ 8,895ರಷ್ಟಿದ್ದು, ದೇಶದಲ್ಲಿ ಸೋಂಕಿತರ ಪ್ರಮಾಣ 3,46,33,255ರಷ್ಟಾಗಿದೆ.

61 ದಿನಗಳಿಂದಲೂ ಸೋಂಕಿನ ಪ್ರಮಾಣದ 50 ಸಾವಿರದೊಳಗೆ ನಿಯಂತ್ರಣದಲ್ಲಿದೆ. ಸಕ್ರಿಯ ಪ್ರಕರಣಗಳು 99,115ರಷ್ಟಿದೆ. ಶೇ.98.35ರಷ್ಟು ಮಂದಿ ಚಿಕಿತ್ಸೆ ಪಡೆದು ಕೊರೊನಾದಿಂದ ಗುಣಮುಖರಾಗಿದ್ದಾರೆ.

Facebook Comments