ಕೊರೊನಾ ಲಸಿಕೆ ಕುರಿತು ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸಚಿವ ಹರ್ಷವರ್ಧನ್..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಆ.21- ಡೆಡ್ಲಿ ಕೊರೊನಾ ವೈರಸ್ ನಿಗ್ರಹಿಸುವ ದೇಶದ ಮೊಟ್ಟ ಮೊದಲ ಲಸಿಕೆ ಈ ವರ್ಷಾಂತ್ಯದಲ್ಲಿ ಲಭ್ಯವಾಗಲಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷವರ್ಧನ್ ಹೇಳಿದ್ದಾರೆ.

ಭಾರತದಲ್ಲಿ ದಿನೇ ದಿನೇ ಕೋವಿಡ್-19 ವೈರಸ್ ಸೋಂಕು ಮತ್ತು ಸಾವು ಪ್ರಕರಣಗಳು ಆತಂಕಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಚಿವರ ಈ ಹೇಳಿಕೆ ಭಾರಿ ಪ್ರಾಮುಖ್ಯತೆ ಪಡೆದುಕೊಂಡಿದ್ದು, ಮಹಾಮಾರಿ ನಿಗ್ರಹಕ್ಕಾಗಿ ಪರಿಣಾಮಕಾರಿ ಲಸಿಕೆ ಮತ್ತು ಔಷಗಾಗಿ ಭಾರತೀಯರು ಎದುರು ನೋಡುತ್ತಿರುವಾಗಲೇ ಇದು ಆಶಾದಾಯಕ ಬೆಳವಣಿಗೆಯಾಗಿದೆ.

ದೇಶದ ಹಲವಾರು ಸಂಸ್ಥೆಗಳು ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಪರಿಣಾಮಕಾರಿ ಲಸಿಕೆ ಮತ್ತು ಔಷಗಳನ್ನು ಅಭಿವೃದ್ದಿಗೊಳಿಸುವಲ್ಲಿ ನಿರಂತರ ಕಾರ್ಯೋನ್ಮುಖವಾಗಿವೆ. ಮೊಟ್ಟ ಮೊದಲ ಲಸಿಕೆ ಈ ವರ್ಷಾಂತ್ಯದಲ್ಲಿ ದೇಶದ ಜನರಿಗೆ ಲಭ್ಯವಾಗಲಿದೆ.

ಮುಂದಿನ ವರ್ಷದ ಆರಂಭದಲ್ಲಿ ಮತ್ತಷ್ಟು ಲಸಿಕೆ ಮತ್ತು ಔಷಗಳು ಭಾರತೀಯರಿಗೆ ದೊರೆಯಲಿವೆ ಎಂದು ಹರ್ಷವರ್ಧನ್ ಹೇಳಿದರು.  ವಿಶೇಷ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಕೊರೊನಾ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ 3-ಟಿ ಸೂತ್ರವನ್ನು ಅಳವಡಿಸಿಕೊಂಡಿದೆ.

ಟೆಸ್ಟ್- ಟ್ರಾಕ್ -ಟ್ರೀಟ್(ಪರೀಕ್ಷೆ, ರೋಗಪತ್ತೆ, ಚಿಕಿತ್ಸೆ) ಈ ಮೂಲಕ ಪಿಡುಗನ್ನು ನಿಯಂತ್ರಿಸಲು ನಮ್ಮ ಸರ್ಕಾರ ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಹೇಳಿದರು. ಭಾರತದಲ್ಲಿ ದಿನೇ ದಿನೇ ಕೊರೊನಾ ಸೋಂಕು ಮತ್ತು ಸಾವಿನ ಪ್ರಮಾಣ ಹೆಚ್ಚಾಗುತ್ತಿರುವ ಸಂಗತಿಯನ್ನು ಒಪ್ಪಿಕೊಂಡ ಸಚಿವರು ಭಾರತವು ದೊಡ್ಡ ದೇಶ.

ಇಲ್ಲಿನ ಜನಸಂಖ್ಯೆ ಹೆಚ್ಚು ಭೌಗೋಳಿಕ ಮತ್ತು ಜನಸಂಖ್ಯೆಆಧಾರದ ಮೇಲೆ ಸೋಂಕು ಪ್ರಕರಣಗಳ ಹೆಚ್ಚಳ ಅನೇಕ ರಾಜ್ಯಗಳಲ್ಲಿ ಕಂಡುಬರುತ್ತಿದೆ ಎಂದು ಅವರು ವಿಶ್ಲೇಷಿಸಿದರು.

ಕೋವಿಡ್-19 ವೈರಸ್ ಹಾವಳಿ ಯಾವಾಗ ಕ್ಷೀಣಿಸುತ್ತದೆ ಎಂಬುದನ್ನು ಈಗಲೇ ಹೇಳಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದ ಅವರು, ವಿವಿಧ ರಾಜ್ಯಗಳಲ್ಲಿ ಹೆಚ್ಚಾಗುತ್ತಿರುವ ಸೋಂಕು ಮತ್ತು ಸಾವಿನ ವರದಿಗಳ ಆಧಾರದ ಮೇಲೆ ಕೇಂದ್ರ ಸರ್ಕಾರ ಕೊರೊನಾ ನಿಗ್ರಹಕ್ಕಾಗಿ ಮಹತ್ವದ ಯೋಜನೆಯೊಂದನ್ನು ರೂಪಿಸಿದೆ.

ಸೋಂಕನ್ನು ನಿಯಂತ್ರಿಸಲು ಲಸಿಕೆಯನ್ನು ಆದಷ್ಟು ಶೀಘ್ರ ಅಭಿವೃದ್ಧಿಗೊಳಿಸುವುದು ನಮ್ಮ ಗುರಿ. ಈ ವರ್ಷಾಂತ್ಯದಲ್ಲೇ ಕೊರೊನಾ ವಾಕ್ಸಿನ್ ಲಭಿಸಲಿದೆ ಎಂದು ಅವರು ಸ್ಪಷ್ಟಪಡಿಸಿದರು.

ಸಾಂಕ್ರಾಮಿಕ ರೋಗ ಮತ್ತು ಮರಣ ಪ್ರಮಾಣದ ನಡುವೆಯೂ ಚೇತರಿಸಿಕೊಳ್ಳುತ್ತಿರುವವರ ಸಂಖ್ಯೆ ನಿರಂತರವಾಗಿ ಹೆಚ್ಚಾಗುತ್ತಿದೆ. ಸಾವು ಪ್ರಕರಣಗಳಲ್ಲೂ ಕೊಂಚ ಮಟ್ಟಿಗೆ ಕಡಿಮೆಯಾಗಿದೆ ಎಂದು ಅವರು ತಿಳಿಸಿದರು.

ಪ್ರಧಾನಿ ನರೇಂದ್ರಮೋದಿ ಅವರು 74ನೇ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಮೂರು ಲಸಿಕೆಗಳು ಅತಿಶೀಘ್ರದಲ್ಲೇ ದೇಶದ ಜನರಿಗೆ ಲಭ್ಯವಾಗಲಿದೆ ಎಂದು ತಿಳಿಸಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.

ಈ ಮಧ್ಯೆ ರಷ್ಯಾ, ಇಂಗ್ಲೆಂಡ್, ಇಸ್ರೇಲ್ ಅನೇಕ ದೇಶಗಳಲ್ಲಿ ಕೊರೊನಾ ನಿಗ್ರಹ ಲಸಿಕೆಯನ್ನು ಭಾರತದಲ್ಲಿ ಮಾರುಕಟ್ಟೆ ಮಾಡಲು ಈ ರಾಷ್ಟ್ರಗಳ ಸಂಸ್ಥೆಗಳು ಉತ್ಸುಕವಾಗಿವೆ.

Facebook Comments

Sri Raghav

Admin