ಬಿಡುಗಡೆಯಾಗದ ಅನುದಾನ, ಇಂದಿರಾ ಕ್ಯಾಂಟಿನ್‍ಗಳಿಗೆ ಬೀಳುವುದೇ ಬೀಗ..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.8- ಬಡವರ ಹಸಿವು ನೀಗಿಸುವ ಉದ್ದೇಶದಿಂದ ಸಿದ್ದರಾಮಯ್ಯ ಸರ್ಕಾರ ಜಾರಿಗೆ ತಂದಿದ್ದ ಇಂದಿರಾ ಕ್ಯಾಂಟಿನ್‍ಗಳಿಗೆ ಬೀಗ ಜಡಿಯುವ ಕಾಲ ಸನ್ನಿಹಿತವಾಗಿದೆ. ಕಳೆದ ಏಪ್ರಿಲ್ 2020 ರಿಂದ ಈವರೆಗೂ ಇಂದಿರಾ ಕ್ಯಾಂಟಿನ್‍ಗಳಿಗೆ ಬಿಡುಗಡೆ ಮಾಡಬೇಕಾದ 22 ಕೋಟಿ ಅನುದಾನವನ್ನು ಬಿಬಿಎಂಪಿ ತಡೆ ಹಿಡಿದಿರುವುದರಿಂದ ಕೆಲವೇ ದಿನಗಳಲ್ಲಿ ಕ್ಯಾಂಟಿನ್‍ಗಳನ್ನು ರದ್ದುಗೊಳಿಸಲು ಗುತ್ತಿಗೆದಾರರು ತೀರ್ಮಾನಿಸಿದ್ದಾರೆ.

198 ವಾರ್ಡ್‍ಗಳಲ್ಲಿ ಸ್ಥಾಪಿಸಲಾಗಿದ್ದ ಇಂದಿರಾ ಕ್ಯಾಂಟಿನ್‍ಗಳು ಹಾಗೂ ಮೊಬೈಲ್ ಕ್ಯಾಂಟಿನ್‍ಗಳಲ್ಲಿ ಸಾರ್ವಜನಿಕರಿಗೆ 5ರೂ.ಗೆ ಬೆಳಗಿನ ತಿಂಡಿ ಹಾಗೂ 10ರೂ.ಗೆ ಮಧ್ಯಾಹ್ನ ಮತ್ತು ರಾತ್ರಿ ಊಟ ವಿತರಿಸಲಾಗುತ್ತಿತ್ತು. ಬಡವರಿಗೆ ಕಡಿಮೆ ದರದಲ್ಲಿ ಊಟ ಸಿಗುವಂತಾಗಬೇಕು ಎಂಬ ಉದ್ದೇಶದಿಂದ 2017 ಆಗಸ್ಟ್ 16ರಂದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದಿರಾ ಕ್ಯಾಂಟಿನ್ ಯೋಜನೆ ಆರಂಭಿಸಿದ್ದರು.

2018ರಲ್ಲಿ 24 ಮೊಬೈಲ್ ಕ್ಯಾಂಟಿನ್‍ಗಳಿಗೂ ಚಾಲನೆ ನೀಡಲಾಗಿತ್ತು. ಅಂದಿನಿಂದ ಇಂದಿನವರೆಗೂ ಲಕ್ಷಾಂತರ ಕಡುಬಡವರು ಹೊಟ್ಟೆ ತುಂಬ ಊಟ ಮಾಡುತ್ತಿದ್ದರು. ಅಂತಹ ಅನ್ನ ದಾಸೋಹ ಯೋಜನೆ ಈಗ ಅಂತ್ಯಗೊಳ್ಳುವ ಕಾಲ ಸನ್ನಿಹಿತವಾಗಿದ್ದು, ಅನುದಾನ ಬಿಡುಗಡೆ ಮಾಡದ ಬಿಬಿಎಂಪಿ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

# ಅನುದಾನ ಬಿಡುಗಡೆಗೆ ಆಗ್ರಹ:
ಬಡವರ ಅನ್ನದಾಸೋಹ ಎಂದೇ ಪ್ರಖ್ಯಾತಿಯಾಗಿದ್ದ ಇಂದಿರಾ ಕ್ಯಾಂಟಿನ್ ರದ್ದುಗೊಳ್ಳಲು ಅವಕಾಶ ನೀಡಬಾರದು. ಕಳೆದ 10 ತಿಂಗಳಿನಿಂದ ಬಾಕಿ ಇರುವ 22 ಕೋಟಿ ಅನುದಾನವನ್ನು ಈ ಕೂಡಲೇ ಬಿಡುಗಡೆ ಮಾಡಬೇಕು ಎಂದು ಬಿಬಿಎಂಪಿ ವಿರೋಧ ಪಕ್ಷದ ಮಾಜಿ ನಾಯಕ ಎ.ಎಚ್.ಬಸವರಾಜ್ ಅವರು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಹಾಗೂ ಆಡಳಿತಾಧಿಕಾರಿ ಗೌರವ್ ಗುಪ್ತ ಅವರಿಗೆ ಪತ್ರ ಬರೆದಿದ್ದಾರೆ.

ಬಡವರ ಹಸಿವು ನೀಗಿಸುತ್ತಿದ್ದ ಇಂದಿರಾ ಕ್ಯಾಂಟಿನ್ ರದ್ದಾದರೆ ಜನ ಶಾಪ ಹಾಕುತ್ತಾರೆ. ಇದು ಬಿಜೆಪಿ ಸರ್ಕಾರಕ್ಕೆ ಮುಜುಗರ ಉಂಟುಮಾಡಲಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಇಂದಿರಾ ಕ್ಯಾಂಟಿನ್ ರದ್ದುಗೊಳಿಸಬಾರದು. ಅನುದಾನ ಬಿಡುಗಡೆ ಮಾಡಿ ಬಡವರ ಅನ್ನದಾಸೋಹ ಎಂದಿನಂತೆ ನಡೆದುಕೊಂಡು ಹೋಗಲು ಸಹಕರಿಸಬೇಕು ಎಂದು ಅವರು ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.

Facebook Comments