ಅದಮ್ಯಚೇತನಕ್ಕೆ ಇಂದಿರಾ ಕ್ಯಾಂಟೀನ್ ಗುತ್ತಿಗೆ..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಡಿ.30- ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಇಂದಿರಾ ಕ್ಯಾಂಟೀನ್ ನಿರ್ವಹಣಾ ಗುತ್ತಿಗೆಯನ್ನು ಅದಮ್ಯ ಚೇತನಕ್ಕೆ ನೀಡಲು ತೆರೆಮರೆಯ ಪ್ರಯತ್ನಗಳು ನಡೆಯುತ್ತಿವೆ.ಹಾಲಿ ನಿರ್ವಹಣೆ ಮಾಡುತ್ತಿರುವ ಚೆಫ್‍ಟಾಫ್ ರಿವಾರ್ಡ್ ಸಂಸ್ಥೆ ಗುತ್ತಿಗೆ ರದ್ದುಪಡಿಸಿ ತೇಜಸ್ವಿನಿ ಅನಂತಕುಮಾರ್ ಅವರ ಅದಮ್ಯಚೇತನಕ್ಕೆ ನೀಡಲು ಮೇಯರ್ ಸೇರಿದಂತೆ ಸರ್ಕಾರ ಪ್ರಯತ್ನ ನಡೆಸಿರುವುದು ತಿಳಿದುಬಂದಿದೆ.

ಪ್ರಸ್ತುತ ಗುತ್ತಿಗೆ ನಡೆಸುತ್ತಿರುವ ಸಂಸ್ಥೆಯ ಊಟದಲ್ಲಿ ಕಳಪೆ ಮತ್ತು ಅವ್ಯವಹಾರದ ಆರೋಪ ಕೇಳಿಬಂದಿದ್ದು, ಎಸಿಬಿ ತನಿಖೆ ನಡೆಸುತ್ತಿದೆ. ಅಲ್ಲದೆ ಖಾಸಗಿ ಸಂಸ್ಥೆಯೂ ಕೂಡ ತನಿಖೆ ನಡೆಸಿದ್ದು, ಖಾಸಗಿ ಸಂಸ್ಥೆ ನೀಡಿರುವ ವರದಿಯಲ್ಲಿ ಚೆಫ್‍ಟಾಫ್ ರಿವಾರ್ಡ್ ಸಂಸ್ಥೆ ಇಂದಿರಾ ಕ್ಯಾಂಟೀನ್‍ಗೆ ನೀಡುತ್ತಿರುವ ಊಟ ಸಮರ್ಪಕವಾಗಿದೆ ಮತ್ತು ಯಾವುದೇ ಕಳಪೆ ಇಲ್ಲ ಎಂದು ವರದಿ ನೀಡಿದೆ. ಎಸಿಬಿ ಇನ್ನು ತನಿಖೆ ನಡೆಸುತ್ತಿದೆ.

ಈ ಎಲ್ಲದರ ನಡುವೆ ಗುತ್ತಿಗೆಯನ್ನು ಅದಮ್ಯಚೇತನಕ್ಕೆ ನೀಡುವ ಪ್ರಯತ್ನಗಳು ಒಳಗೊಳಗೆ ನಡೆಯುತ್ತದೆ. ಈ ಹಿಂದೆ ಟೆಂಡರ್ ಕರೆದಾಗ ಚೆಫ್‍ಟಾಫ್, ರಿವಾರ್ಡ್ ಸಂಸ್ಥೆ ಮತ್ತು ಅದಮ್ಯಚೇತನ ಸಂಸ್ಥೆಗಳು ಟೆಂಡರ್ ಸಲ್ಲಿಸಿದ್ದವು.ಟೆಂಡರ್‍ನಲ್ಲಿ ಕಡಿಮೆ ದರವನ್ನು ಚೆಫ್‍ಟಾಫ್ ನಮೂದಿಸಿತ್ತು. ಹೀಗಾಗಿ ಆ ಸಂಸ್ಥೆಗೆ ಟೆಂಡರ್ ದೊರಕಿತ್ತು. ಆದಾಗ್ಯೂ ಕೂಡ ಈ ಟೆಂಡರ್‍ನ್ನು ರದ್ದುಪಡಿಸುವ ಪ್ರಯತ್ನಗಳು ನಡೆದಿವೆ ಎಂದು ತಿಳಿದುಬಂದಿದೆ.

ಬಿಬಿಎಂಪಿ ಆಯುಕ್ತರಾದ ಅನಿಲ್‍ಕುಮಾರ್ ಕೂಡ ಈ ಸಂಬಂಧ ಹೇಳಿಕೆ ನೀಡಿ, ಹಾಲಿ ಟೆಂಡರ್ ರದ್ದು ಮಾಡಿ ಅದಮ್ಯಚೇತನಕ್ಕೆ ನೀಡಲಾಗುವುದು ಎಂದು ತಿಳಿಸಿರುವುದು ಇದಕ್ಕೆ ಪುಷ್ಟಿ ನೀಡಿದಂತಾಗಿದೆ.ಮೇಯರ್ ಗೌತಮ್‍ಕುಮಾರ್ ಕೂಡ ಅದಮ್ಯಚೇತನಕ್ಕೆ ಗುತ್ತಿಗೆ ನೀಡುವ ಬಗ್ಗೆ ಒಲವು ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪಾಲಿಕೆ ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜೀದ್, ಟೆಂಡರ್ ಪಡೆದಿರುವ ಹಾಲಿ ಸಂಸ್ಥೆಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ.

ಈ ಸಂಸ್ಥೆಗಳ ಬಗ್ಗೆ ಬಿಜೆಪಿ ಸದಸ್ಯರು ಕೆಲವು ನಾಯಕರನ್ನು ಹೊರತುಪಡಿಸಿ ಯಾರೂ ಆರೋಪ ಮಾಡಿಲ್ಲ. ಸಂಸ್ಥೆಗಳ ಮೇಲೆ ಇದ್ದ ಆರೋಪಗಳ ಬಗ್ಗೆ ಎಸಿಬಿ ತನಿಖೆ ನಡೆಸುತ್ತಿದೆ. ವರದಿ ಬಂದ ಮೇಲೆ ರದ್ದುಗೊಳಿಸುವ ಬಗ್ಗೆ ಕ್ರಮ ಕೈಗೊಳ್ಳಲಿ. ಅದಕ್ಕೂ ಮುನ್ನವೇ ಟೆಂಡರ್ ರದ್ದುಗೊಳಿಸಿ ಮತ್ತೊಂದು ಸಂಸ್ಥೆಗೆ ಟೆಂಡರ್ ನೀಡಲು ಮುಂದಾಗಿರುವ ಕ್ರಮ ಖಂಡನೀಯ ಎಂದು ತಿಳಿಸಿದ್ದಾರೆ.

Facebook Comments

Sri Raghav

Admin