ಶಾಕಿಂಗ್ : ಇಂದಿರಾ ಕ್ಯಾಂಟೀನ್ ಊಟ ಬಂದ್..?!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.4- ಇಂದಿರಾ ಕ್ಯಾಂಟೀನ್‍ಗೂ ಬಿಜೆಪಿಗೂ ಅದೇನು ವೈಷಮ್ಯವೋ ಗೊತ್ತಿಲ್ಲ. ಇಂದಿರಾ ಕ್ಯಾಂಟೀನ್ ಗುತ್ತಿಗೆ ಟೆಂಡರ್‍ನ್ನು ರದ್ದುಪಡಿಸಲು ಮುಂದಾಗಿರುವ ಬಿಬಿಎಂಪಿ ಈಗ ಮಹಾನಗರ ಪಾಲಿಕೆ ಕೌನ್ಸಿಲ್ ಸಭೆಗಳಿಗೆ ಸರಬರಾಜಾಗುತ್ತಿದ್ದ ಇಂದಿರಾ ಕ್ಯಾಂಟೀನ್ ಊಟೋಪಾಚಾರಗಳನ್ನು ನಿಲ್ಲಿಸಲು ಮುಂದಾಗಿದೆ.

ಬಿಬಿಎಂಪಿಯ ಕೌನ್ಸಿಲ್ ಸಭೆಗಳಿಗೆ ಇನ್ನು ಮುಂದೆ ಯಾವುದೇ ತಿಂಡಿ ಊಟಗಳನ್ನು ಪೂರೈಸಲಾಗದು ಎಂದು ಕೌನ್ಸಿಲ್ ಕಾರ್ಯದರ್ಶಿ ಮುಖಾಂತರ ಪತ್ರ ಮುಖೇನ ಮೇಯರ್ ಗೌತಮ್ ಕುಮಾರ್ ಅವರು ಮಾಹಿತಿ ನೀಡಿದ್ದಾರೆ.  ಇಂದಿರಾ ಕ್ಯಾಂಟೀನ್ ಉಸ್ತುವಾರಿ ಪಡೆದ ಸಂಸ್ಥೆಯವರು ಕಾಫಿ, ತಿಂಡಿ ಸರಬರಾಜು ಮಾಡುವುದಿಲ್ಲ ಎಂದು ತಿಳಿಸಿರುತ್ತಾರೆ ಎಂದು ಪತ್ರದಲ್ಲಿ ಬರೆಯಲಾಗಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಬಿಬಿಎಂಪಿ ವಿರೋಧ ಪಕ್ಷದ ನಾಯಕ ವಾಜೀದ್, ಗಂಗಾಂಬಿಕೆಯವರು ಮೇಯರ್ ಆಗಿದ್ದ ವೇಳೆ ಇಂದಿರಾ ಕ್ಯಾಂಟೀನ್‍ನಿಂದ ಊಟ ಸರಬರಾಜು ಮಾಡುವುದನ್ನು ಜಾರಿಗೆ ತರಲಾಗಿತ್ತು. ಈಗ ಇದನ್ನು ರದ್ದುಗೊಳಿಸಿ ಪಂಚಾತಾರ ಹೋಟೆಲ್‍ನಿಂದ ಊಟ ತರಿಸಲು ಹೊರಟ್ಟಿದ್ದಾರೆ.

ಆರ್ಥಿಕ ಹಿಂಜರಿತದಿಂದ ದೇಶ ತತ್ತರಿಸುತ್ತಿದೆ. ಎಲ್ಲವನ್ನೂ ಕಡಿತ ಮಾಡಲಾಗುತ್ತಿದೆ. ನಮ್ಮ ಬಿಬಿಎಂಪಿಯಲ್ಲಿ ಮಾತ್ರ ಪಂಚಾತಾರಾ ಹೋಟೆಲ್ ಊಟ ತರಿಸಲು ಮುಂದಾಗಿದ್ದಾರೆ.
ಶಫ್ ಟೆಕ್ ಬರೆದ ಪತ್ರದ ಹಿಂದೆ ಮೇಯರ್ ಕೈವಾಡವಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ಕೌನ್ಸಿಲ್ ಸಭೆಯಲ್ಲಿ ಪ್ರಶ್ನೆ ಮಾಡುತ್ತೇನೆ ಎಂದು ವಾಜೀದ್ ತಿಳಿಸಿದ್ದಾರೆ.

Facebook Comments