ಇಂದಿರಾ ಕ್ಯಾಂಟೀನ್‍ ತಿಂಡಿ-ಊಟದ ಬೆಲೆ ಏರಿಕೆ..!?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.29-ಇಂದಿರಾ ಕ್ಯಾಂಟೀನ್‍ನಲ್ಲಿ ರಿಯಾಯಿತಿ ದರದಲ್ಲಿ ನೀಡಲಾಗುತ್ತಿದ್ದ ಊಟ-ಉಪಹಾರದ ಬೆಲೆಯನ್ನು ಹೆಚ್ಚಳ ಮಾಡಲು ಬಿಬಿಎಂಪಿ ಚಿಂತನೆ ನಡೆಸಿದೆ.ಬಡವರು ಮತ್ತು ಮಧ್ಯಮ ವರ್ಗದ ಜನರಿಗೆ ಅಗ್ಗದ ದರದಲ್ಲಿ ಊಟ ಮತ್ತು ಉಪಹಾರ ದೊರೆಯಬೇಕೆಂಬ ಮಹತ್ವಾಕಾಂಕ್ಷೆ ಹಿನ್ನೆಲೆಯಲ್ಲಿ ಸ್ಥಾಪಿಸಿದ್ದ ಇಂದಿರಾ ಕ್ಯಾಂಟೀನ್‍ನಲ್ಲಿ ದರ ಏರಿಕೆ ಮಾಡಲು ಬಿಬಿಎಂಪಿ ಮುಂದಾಗಿದೆ.

10 ರೂ.ಗೆ ಸಿಗುತ್ತಿದ್ದ ಊಟ, 5 ರೂ.ಗೆ ಸಿಗುತ್ತಿದ್ದ ತಿಂಡಿ ಬೆಲೆಯನ್ನು ಏರಿಕೆ ಮಾಡಲು ತಯಾರಿ ನಡೆಸಿದೆ. ಈ ಮೂಲಕ ಬಡ ಜನರ ಮೇಲೆ ಬರೆ ಎಳೆಯಲು ಪ್ಲ್ಯಾನ್ ಮಾಡಿದೆ.ಬಿಬಿಎಂಪಿ ಮತ್ತು ಸರ್ಕಾರಕ್ಕೆ ಆಗುತ್ತಿರುವ ಆರ್ಥಿಕ ಹೊರೆ ಕಡಿಮೆ ಮಾಡಲು ದರ ಪರಿಷ್ಕರಣೆ ಮಾಡಲು ಮುಂದಾಗುತ್ತಿರುವುದಾಗಿ ಬಿಬಿಎಂಪಿ ಹೇಳಿದೆ. ಈ ಬಾರಿ ಇಂದಿರಾ ಕ್ಯಾಂಟೀನ್‍ಗೆ ಹೊಸದಾಗಿ ಟೆಂಡರ್ ಆಹ್ವಾನಿಸಿದ್ದು, ಹೊಸ ಗುತ್ತಿಗೆ ಜೊತೆಗೆ ಹೊಸ ದರ ಜಾರಿಗೆ ತರಲು ಚಿಂತನೆ ನಡೆಸಲಾಗಿದೆ.

ಇಂದಿರಾ ಕ್ಯಾಂಟೀನ್‍ಗೆ ಊಟ ಸರಬರಾಜು ಮಾಡುವ ಗುತ್ತಿಗೆ ಪಡೆದ ಸಂಸ್ಥೆ ಒಂದು ಊಟಕ್ಕೆ ಸದ್ಯ 32 ರೂ. ಚಾರ್ಜ್ ಮಾಡುತ್ತಿದೆ. ಈ ಪೈಕಿ ಸರ್ಕಾರ ಮತ್ತು ಬಿಬಿಎಂಪಿ22 ರೂ. ಸಬ್ಸಿಡಿ ನೀಡುತ್ತಿದ್ದು, ಗ್ರಾಹಕರು 10 ರೂ. ನೀಡುತ್ತಿದ್ದಾರೆ.  ಈಗ ಸರ್ಕಾರ ಸಬ್ಸಿಡಿ ಹೊರೆ ಇಳಿಸಲು 10 ರೂ. ಇದ್ದ ಊಟದ ಬೆಲೆಯನ್ನು 15 ರೂ.ಗಳಿಗೆ ಏರಿಕೆ ಮಾಡಲು ಯೋಜನೆ ರೂಪಿಸಿದೆ. 5 ರೂ.ಗಳಿದ್ದ ತಿಂಡಿ ಬೆಲೆಯನ್ನು 10 ರೂ.ಗಳಿಗೆ ಏರಿಕೆ ಮಾಡಲು ಪ್ಲ್ಯಾನ್ ಮಾಡಿದೆ.

ಇದರಿಂದ ಸರ್ಕಾರಕ್ಕೆ ಬಹುತೇಕ ಸಬ್ಸಿಡಿ ಹೊರೆ ಕಡಿಮೆಯಾಗಲಿದೆ. ಕಳೆದ ಒಂದು ವರ್ಷದಿಂದ ಇಂದಿರಾ ಕ್ಯಾಂಟೀನ್‍ಗೆ ಸರ್ಕಾರ ಅನುದಾನ ನೀಡಿಲ್ಲ. ಸಂಪೂರ್ಣವಾಗಿ ಬಿಬಿಎಂಪಿಯೇ ನಿರ್ವಹಣೆ ಮಾಡುತ್ತಿರುವುದರಿಂದ ಹೊರೆ ಯಾಗಿದೆ. ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ ಇಂದಿರಾ ಕ್ಯಾಂಟೀನ್‍ಗೆ ಅನುದಾನ ನಿಗದಿ ಮಾಡಿದರೆ ದರ ಏರಿಕೆಯಾಗುವ ಸಾಧ್ಯತೆ ಇಲ್ಲ. ಸರ್ಕಾರ ಅನುದಾನ ಒದಗಿಸದಿದ್ದರೆ ದರ ಏರಿಕೆ ಮಾಡುವುದು ಬಿಬಿಎಂಪಿಗೆ ಅನಿವಾರ್ಯವಾಗಲಿದೆ.

ಹಾಲಿ ದರ : ಊಟ 10 ರೂ., ಬೆಳಗಿನ ತಿಂಡಿ 5 ರೂ.
ಪರಿಷ್ಕøತ ದರ: (ಜಾರಿಗೆ ಬಂದಲ್ಲಿ) ಊಟ 15 ರೂ., ಬೆಳಗಿನ ತಿಂಡಿ 10 ರೂ. ಆಗಲಿದೆ.
ಕಾಂಗ್ರೆಸ್ ವಿರೋಧ: ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ಇಂದಿರಾ ಕ್ಯಾಂಟೀನ್ ಮುಚ್ಚಬೇಕೆಂದು ಯೋಜನೆ ರೂಪಿಸುತ್ತಲೇ ಇದೆ. ಬಡವರ ಬಗ್ಗೆ ಕಾಳಜಿ ಇದ್ದರೆ ಊಟದ ಗುಣಮಟ್ಟ ಹೆಚ್ಚಿಸಲಿ. ಅದನ್ನು ಬಿಟ್ಟು ಬಡವರ ತಿನ್ನುವ ಅನ್ನದ ದರವನ್ನು ಹೆಚ್ಚಿಸುವುದು ಎಷ್ಟರಮಟ್ಟಿಗೆ ಸರಿ ಎಂದು ಬಿಬಿಎಂಪಿ ಪ್ರತಿಪಕ್ಷದ ನಾಯಕ ಅಬ್ದುಲ್ ವಾಜೀದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಇಂದಿರಾ ಕ್ಯಾಂಟೀನ್ ಕೂಡ ಒಂದು. ಪ್ರತಿದಿನ ಒಂದು ಲಕ್ಷಕ್ಕೂ ಹೆಚ್ಚು ಜನ ಇಂದಿರಾ ಕ್ಯಾಂಟೀನ್‍ನಲ್ಲಿ ಊಟ ಮಾಡುತ್ತಾರೆ. ಬಿಜೆಪಿ ನಿರ್ಧಾರ ತೆಗೆದುಕೊಳ್ಳುವ ನಿರ್ಧಾರದಿಂದ ಅಷ್ಟೂ ಜನರಿಗೆ ಅನಾನುಕೂಲವಾಗುತ್ತದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿದೆ. ಇಂದಿರಾ ಕ್ಯಾಂಟೀನ್‍ಗೆ ಬಜೆಟ್‍ನಲ್ಲಿ ಹೆಚ್ಚಿನ ಅನುದಾನ ಒದಗಿಸಲಿ ಎಂದು ಹೇಳಿದರು.

ಬಡಜನತೆಯ ಮೇಲೆ ಬರೆ: ಬೆಂಗಳೂರಿನ ಬಡ ಕೂಲಿ ಕಾರ್ಮಿಕರ, ವಿದ್ಯಾರ್ಥಿಗಳ, ಮಹಿಳೆಯರ ಹಸಿವನ್ನು ತಣಿಸುವುದರಲ್ಲಿ ಯಾವುದೇ ಆಡಳಿತಾತ್ಮಕ ಕ್ರಮಗಳನ್ನು ತೆಗೆದುಕೊಳ್ಳದೆ ಇದು ಕೇವಲ ಬೆಂಗಳೂರು ಮಹಾನಗರ ಪಾಲಿಕೆಯ ಪಾಲಿಗೆ ಒಲ್ಲದ ಶಿಶುವಿನ ರೀತಿಯಲ್ಲಿ ಕಡೆಗಣಿಸುತ್ತಾ ಬರಲಾಗಿದೆ. ರಾಷ್ಟ್ರದ ಬಡಜನತೆಯ ಮಹತ್ವದ ಆಹಾರ ಭದ್ರತೆ ಕಾಯ್ದೆಯ ಈ ಯೋಜನೆಗಾಗಿ ಕರ್ನಾಟಕ ರಾಜ್ಯ ಸರ್ಕಾರವು ಪ್ರತಿ ವರ್ಷ ಕೊಡಮಾಡುವ 100 ಕೋಟಿ ರೂ.ಗಳನ್ನು 2 ವರ್ಷದಿಂದ ಕೊಡದೆ ಸತಾಯಿಸುತ್ತಾ ಬಂದಿದೆ. ಬಿಬಿಎಂಪಿಯೂ ಕೂಡ ಆರ್ಥಿಕ ಕೊರತೆ ಇದೆ ಎಂಬ ಸಬೂಬು ಹೇಳುತ್ತಿದೆ.

ಇಂದಿರಾ ಕ್ಯಾಂಟೀನ್‍ಗಳಲ್ಲಿ ಕಳಪೆ ಆಹಾರ ಗುಣಮಟ್ಟಕ್ಕೆ ಕುಸಿದಿರುವುದು ಆಳುವ ಸರ್ಕಾರಗಳಿಗೆ ಬಡ ಜನತೆಯ ಮೇಲಿನ ಅಸಡ್ಡೆ ಹಾಗೂ ನಿರಾಸಕ್ತಿಯನ್ನು ತೋರಿಸುತ್ತದೆ. ಇದರ ಜೊತೆಗೆ ಬೆಲೆ ಏರಿಕೆಗೆ ಮುಂದಾಗಿರುವುದು ಮತಿಹೀನ ಹಾಗೂ ಅಂದಾದುಂದಿ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಆಮ್ ಆದ್ಮಿ ಪಾರ್ಟಿ ಸಂಚಾಲಕ ಜಗದೀಶ್ ವಿ.ಸದಮ್ ಆರೋಪಿಸಿದ್ದಾರೆ.

Facebook Comments