ಕನಕಪುರದಲ್ಲಿ ಇಂದಿರಾ ಕ್ಯಾಂಟೀನ್‍ಗೆ ಡಿಕೆ ಬ್ರದರ್ಸ್ ಚಾಲನೆ

ಈ ಸುದ್ದಿಯನ್ನು ಶೇರ್ ಮಾಡಿ

DK-Brothd-shivakumar-kanaka
ಕನಕಪುರ, ಆ.23- ರಾಜ್ಯದ ಮಹತ್ವಾಕಾಂಕ್ಷೆ ಯೋಜನೆಯಾದ ಇಂದಿರಾ ಕ್ಯಾಂಟೀನ್ ಹಾಗೂ ಕನಕಪುರ ಹೃದಯ ಭಾಗದಲ್ಲಿ ಜೀರ್ಣೋದ್ಧಾರಗೊಂಡಿರುವ ನಾರಾಯಣಪ್ಪ ಕೆರೆ (ಕನಕ ಕಾವೇರಿಉದ್ಯಾನವನ)ಯನ್ನು ಸಚಿವ ಡಿ.ಕೆ.ಶಿವಕುಮಾರ್ ಇಂದು ಲೋಕಾರ್ಪಣೆಗೊಳಿಸಿದರು. ನಂತರ ಮಾತನಾಡಿದ ಅವರು, ಗ್ರಾಮೀಣ ಭಾಗದ ಜನರು ಹಾಗೂ ಇತರೆ ಕಾರ್ಮಿಕ ವರ್ಗದವರು ಸೇರಿದಂತೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ತಾಲ್ಲೂಕು ಮಟ್ಟದಲ್ಲಿ ಇಂದಿರಾ ಕ್ಯಾಂಟೀನ್ ಅನ್ನು ತೆರೆಯಲಾಗಿದೆ.

ನಾವು ಚೆನ್ನೈಗೆ ಭೇಟಿ ನೀಡಿದ ವೇಳೆ ಅಲ್ಲಿನ ಅಮ್ಮ ಕ್ಯಾಂಟೀನ್‍ಗೆ ತೆರಳಿ ಊಟ ಮಾಡಿದ್ದೆವು. ನಂತರ ಈ ಬಗ್ಗೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚೆ ನಡೆಸಿದ್ದೆವು. ನಂತರದಲ್ಲಿ ರಾಜ್ಯದಲ್ಲೂ ಈ ಯೋಜನೆ ಕಾರ್ಯಗತ ಗೊಂಡಿದೆ. ಇದೀಗ ತಾಲ್ಲೂಕು ಮಟ್ಟದಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಲಾಗುತ್ತಿದೆ ಎಂದು ತಿಳಿಸಿದರು. ಕನಕಪುರದ ಹೃದಯ ಭಾಗದಿಂದ ನಾರಾಯಣಪ್ಪ ಕೆರೆಯನ್ನು ಜೀರ್ಣೋದ್ಧಾರಗೊಳಿಸಿ ನೀರು ಹರಿಸಿ ಅದಕ್ಕೆ ಕನಕ ಕಾವೇರಿ ಎಂಬ ಹೆಸರಿಡಲಾಗಿದ್ದು , ಸುಮಾರು 3 ಕಿ.ಮೀ ವ್ಯಾಪ್ತಿಯಲ್ಲಿ ಬೆಂಗಳೂರಿನ ಜಯನಗರದಲ್ಲಿರುವ ಉದ್ಯಾನವನದ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ.

ಬೆಂಗಳೂರಿಗೆ ಸಮೀಪದಲ್ಲಿರುವ ಕನಕಪುರ ಯಾವುದಕ್ಕೂ ಕಡಿಮೆ ಇಲ್ಲದಂತೆ ಅಭಿವೃದ್ಧಿಗೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಯೋಜನೆ ರೂಪಿಸಿ ಅಭಿವೃದ್ಧಿ ಗೊಳಿಸಲಾಗುತ್ತಿದೆ ಎಂದರು. ರೈತರ ಸಾಲ ಮನ್ನಾ ಮಾಡಲು ಹಣ ಇಲ್ಲ ಎಂದು ಹೇಳುತ್ತಿರುವ ನಡುವೆ ಸಂತ್ರಸ್ತರಿಗೆ ಯಾವ ರೀತಿಯ ನೆರವು ನೀಡಲಾಗುತ್ತಿದೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ಇದೀಗ ತಾನೆ ಮಳೆ ನಿಂತಿದೆ. 15 ದಿನಗಳ ಕಾಲ ಪ್ರವಾಹ ಸ್ಥಳದಲ್ಲಿ ಅಧಿಕಾರಿಗಳು ಸರ್ವೆ ನಡೆಸಲಿದ್ದಾರೆ. ಅವರು ನೀಡಿದ ವರದಿ ಆಧರಿಸಿ ಪರ್ಯಾಯ ವ್ಯವಸ್ಥೆ ಬಗ್ಗೆ ಸಿದ್ಧತೆ ನಡೆಸಲಾಗುವುದು. ಸಂತ್ರಸ್ತರ ನೆರವಿಗೆ ಸರ್ಕಾರ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದರು.

ಭರ್ತಿಯಾಗಿರುವ ಅಣೆಕಟ್ಟೆಗಳ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ನೀಡದಂತೆ ಕಟ್ಟುನಿಟ್ಟಿನ ಕ್ರಮ ವಹಿಸಲಾಗುತ್ತಿದೆ. ಅಣೆಕಟ್ಟುಗಳ ವೀಕ್ಷಣೆಗೆ ಬರುವವರಿಗೆ ಯಾವುದೇ ಅನಾಹುತ ಸಂಭವಿಸಬಾರದೆಂಬ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು. ಈ ವೇಳೆ ಸಂಸದ ಡಿ.ಕೆ.ಸುರೇಶ್, ವಿಧಾನ ಪರಿಷತ್ ಸದಸ್ಯ ರವಿ, ನಗರಸಭಾ ಮಾಜಿ ಅಧ್ಯಕ್ಷರಾದ ಆರ್.ಕೃಷ್ಣಮೂರ್ತಿ, ದಿಲೀಪ್, ಎಂ.ಮಂಜುನಾಥ್, ಜಗನ್ನಾಥ್, ವಕೀಲ ರಾಮಚಂದ್ರ , ನಗರಸಭಾ ಆಯುಕ್ತರಾದ ರಮಾಮಣಿ ಮತ್ತಿತರರು ಇದ್ದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin