ಪೌರ ಕಾರ್ಮಿಕರಗೆ ಇಂದಿರಾ ಕ್ಯಾಂಟೀನ್‍ನಲ್ಲಿ ‘ಹುಳಗಳ ಅನ್ನ ಭಾಗ್ಯ’

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.28- ಪೌರ ಕಾರ್ಮಿಕರಿಗೆ ಇಂದಿರಾ ಕ್ಯಾಂಟೀನ್‍ನಲ್ಲಿ ಸರಬರಾಜು ಮಾಡುವ ಊಟದಲ್ಲಿ ಹುಳ ಪತ್ತೆಯಾಗಿದೆ. ಪ್ರತಿ ನಿತ್ಯ ಪೌರ ಕಾರ್ಮಿಕರಿಗೆ ಇಂದಿರಾ ಕ್ಯಾಂಟೀನ್‍ನಿಂದ ಉಚಿತ ಊಟ ವಿತರಿಸಲಾಗುತ್ತಿದ್ದು , ಇಂದು ರಾಮಮೂರ್ತಿ ನಗರ ವಾರ್ಡ್‍ನ ಪೌರ ಕಾರ್ಮಿಕರಿಗೆ ವಿತರಿಸಲಾದ ಪಲಾವ್‍ನಲ್ಲಿ ಹುಳ ಪತ್ತೆಯಾಗಿದೆ.

ತಿನ್ನುವ ಅನ್ನದಲ್ಲಿ ಹುಳ ಪತ್ತೆಯಾಗಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಪೌರ ಕಾರ್ಮಿಕರು ಇಂತಹ ಊಟ ಮಾಡುವುದಕ್ಕಿಂತ ಸುಮ್ಮನಿರುವುದೇ ಲೇಸು ಎಂದಿದ್ದಾರೆ. ಇಂದು ಪಲಾವ್‍ನಲ್ಲಿ ಹುಳ ಪತ್ತೆಯಾಗಿದೆ. ಪ್ರತಿ ನಿತ್ಯ ನಮಗೆ ನೀಡುವ ಊಟದಲ್ಲಿ ಒಂದಿಲ್ಲೊಂದು ಸಮಸ್ಯೆ ಇದ್ದೇ ಇರುತ್ತದೆ.

ಒಂದು ದಿನ ಅನ್ನ ಅರ್ಧಂಬರ್ಧ ಬೆಂದಿದ್ದರೆ ಮತ್ತೊಂದು ದಿನ ಬೇರೆಯದೇ ಸಮಸ್ಯೆ ಇರುತ್ತದೆ ಎಂದಿದ್ದಾರೆ. ನಮ್ಮಲ್ಲಿ ಸರಬರಾಜಾಗುತ್ತಿರುವ ಊಟದಲ್ಲಿ ಸಮಸ್ಯೆ ಇರುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪೌರ ಕಾರ್ಮಿಕರು ದೂರಿದ್ದಾರೆ. ಪ್ರತಿ ನಿತ್ಯ ನಗರವನ್ನು ಶುಚಿಗೊಳಿಸುವ ಕಾಯಕದಲ್ಲಿ ನಾವು ತೊಡಗಿಸಿಕೊಂಡಿದ್ದೇವೆ.

ನಮ್ಮ ಆರೋಗ್ಯದ ಜತೆ ಈ ರೀತಿಯ ಚೆಲ್ಲಾಟವಾಡುವುದನ್ನು ನಿಲ್ಲಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಪೌರ ಕಾರ್ಮಿಕರಿಗೆ ಪ್ರತಿ ನಿತ್ಯ ಉಚಿತ ಊಟ ನೀಡುತ್ತೇವೆ ಎಂದು ಹುಳು ಹುಪ್ಪಟೆಗಳಿರುವ ಊಟ ನೀಡುವುದಕ್ಕಿಂತ ಈ ಯೋಜನೆಯನ್ನು ನಿಲ್ಲಿಸುವುದೇ ಸೂಕ್ತ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

Facebook Comments

Sri Raghav

Admin