ತುಮಕೂರು : ಇಂದಿರಾ ಕ್ಯಾಂಟೀನ್ ಅವ್ಯವಹಾರ ಕುರಿತು ಲೋಕಾಯುಕ್ತ ತನಿಖೆ..?

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಆ. 28-ನಗರದ ಇಂದಿರಾ ಕ್ಯಾಂಟೀನ್‍ಗಳಲ್ಲಿ ಈ ಹಿಂದೆ ನಡೆದಿದ್ದ ಅಕ್ರಮ, ಅವ್ಯವಹಾರದ ಬಗ್ಗೆ ಲೋಕಾಯುಕ್ತ ತನಿಖೆಗೆ ವಹಿಸುವ ಸಾಧ್ಯತೆಗಳಿವೆ.

2018-19ನೇ ಸಾಲಿನಲ್ಲಿ ನಡೆದಿದ್ದ ಇಂದಿರಾ ಕ್ಯಾಂಟೀನ್ ಅವ್ಯವಹಾರದ ಬಗ್ಗೆ ಈ ಸಂಜೆ ದಿನಪತ್ರಿಕೆಯಲ್ಲಿ ಸುದೀರ್ಘ ವರದಿ ಪ್ರಕಟಿಸಲಾಗಿತ್ತು. ಪತ್ರಿಕಾ ವರದಿ ಹಿನ್ನೆಲೆಯಲ್ಲಿ ಅಂದಿನ ಆಯುಕ್ತರು ಇದರ ತನಿಖೆಗಾಗಿ ಒಂದು ಸಮಿತಿಯನ್ನೂ ಸಹ ರಚಿಸಿದ್ದರು.

ಈ ಸಮಿತಿ ವರದಿ ನೀಡಿ ವರ್ಷಗಳು ಉರುಳಿದರೂ ಅದನ್ನು ಬಹಿರಂಗಪಡಿಸಲೇ ಇಲ್ಲ. ಸದರಿ ವರದಿಯನ್ನು ಬಹಿರಂಗ ಪಡಿಸುವಂತೆ ಕಳೆದ 5 ತಿಂಗಳ ಹಿಂದೆ 30ನೇ ವಾರ್ಡ್ ಪಾಲಿಕೆ ಸದಸ್ಯ ವಿಷ್ಣುವರ್ಧನ್ ಆಯುಕ್ತರಿಗೆ ಲಿಖಿತ ಮನವಿ ಸಲ್ಲಿಸಿದ್ದರು. ಆದರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ವರದಿಯೂ ಬಹಿರಂಗಗೊಳ್ಳಲಿಲ್ಲ.

ಆಗಸ್ಟ್ 25ರಂದು ಮಹಾನಗರ ಪಾಲಿಕೆಯ ವಿಶೇಷ ಸಾಮಾನ್ಯ ಸಭೆ ನಡೆಯಿತು. ಈ ಸಭೆಯಲ್ಲಿ ಸದರಿ ಇಂದಿರಾ ಕ್ಯಾಂಟೀನ್ ಅವ್ಯವಹಾರದ ಪ್ರಸ್ತಾಪಕ್ಕೆ ಸದಸ್ಯ ವಿಷ್ಣುವರ್ಧನ್ ಕೋರಿದ್ದರು.

ಈ ಹಿನ್ನೆಲೆಯಲ್ಲಿ ವಿಷಯದ ಚರ್ಚೆಗೆ ಬಂದಾಗ ಇಂದಿರಾ ಕ್ಯಾಂಟೀನ್ಗಿ ನಲ್ಲಿರುವ ಅವ್ಯವಹಾರ ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ಒಪ್ಪಿಸುವಂತೆ ಒತ್ತಾಯಿಸಿದರು. ಇದಕ್ಕೆ ಸದಸ್ಯ ಮಲ್ಲಿಕಾರ್ಜುನ್ ಸೇರಿದಂತೆ ಇತರೆ ಹಲವು ಸದಸ್ಯರು ದನಿಗೂಡಿಸಿದರು.

ಈ ಹಿನ್ನೆಲೆಯಲ್ಲಿ ಸದರಿ ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ಒಳಪಡಿಸಲು ನಿರ್ಧರಿಸಲಾಯಿತೆಂದು ತಿಳಿದು ಬಂದಿದೆ. ಅಲ್ಲದೆ, ಇಂದಿರಾ ಕ್ಯಾಂಟೀನ್ ಲೆಕ್ಕದ ನಿರ್ವಹಣೆ ನೋಡಿಕೊಳ್ಳುತ್ತಿದ್ದ ಪಾಲಿಕೆಯ ಆರೋಗ್ಯಾಕಾರಿಯನ್ನು ಅವರ ಮಾತೃ ಇಲಾಖೆಯಾದ ಪಶು ವೈದ್ಯ ಇಲಾಖೆಗೆ ವಾಪಸ್ ಕಳುಹಿಸಲು ಸಹ ನಿರ್ಧರಿಸಲಾಗಿದೆ.

ಇಂದಿರಾ ಕ್ಯಾಂಟೀನ್ ತಿಂಡಿ, ತಿನಿಸುಗಳ ನಿಗತ ಪ್ರಮಾಣದ ಅಂಕಿ- ಅಂಶಗಳನ್ನು ತೋರಿಸಿ ಭಾರೀ ಅವ್ಯವಹಾರ ನಡೆಸಲಾಗಿದೆ ಎಂಬ ಆರೋಪಗಳು ಕೇಳಿಬಂದಿದ್ದವು.

ಇಂದಿರಾ ಕ್ಯಾಂಟೀನ್‍ನಲ್ಲಿ ಒಂದು ತಿಂಡಿಗೆ 5ರೂ ನಿಗದಿಪಡಿಸಲಾಗಿದೆ. ಸರ್ಕಾರವು 6.95 ರೂ.ಗಳನ್ನು ನೀಡುತ್ತಿದೆ. ಒಟ್ಟು 1 ತಿಂಡಿಗೆ 11.95 ರೂ.ಗಳು ಖರ್ಚು ಬರುತ್ತದೆ. ಕ್ಯಾಂಟೀನ್‍ನಲ್ಲಿ ತಿಂಡಿ ತಿಂದ ಗ್ರಾಹಕರು 5 ರೂ. ನೀಡಿದರೆ ಉಳಿದ ಹಣವನ್ನು ಸರ್ಕಾರ ಪಾವತಿಸುತ್ತದೆ.

ಅದೇ ರೀತಿ 1 ಊಟಕ್ಕೆ 10 ರೂ. ನಿಗದಿಪಡಿಸಲಾಗಿದೆ. ಇದಕ್ಕೆ ತಗಲುವ ವಾಸ್ತವ ವೆಚ್ಚ 22.40 ರೂ.ಗಳು. ಸರ್ಕಾರವು 12.40 ರೂ.ಗಳನ್ನು ನೀಡುತ್ತಿದೆ. ಪ್ರತಿದಿನ ಕನಿಷ್ಠ 200 ತಿಂಡಿ, 300 ಊಟ ಹೆಚ್ಚು ಸೇರಿಸಿದರೆ ಸಾಕು. ಅಷ್ಟು ಪ್ರಮಾಣದ ಹಣ ಸರ್ಕಾರದ ಬೊಕ್ಕಸದಿಂದ ಬಂದು ಬೀಳುತ್ತದೆ. ಇವೆಲ್ಲವೂ ಒಳಗಿಂದೊಳಗೆ ನಡೆದಿರುವ ಮೋಸದಾಟಗಳು.

ಇದೀಗ ಮತ್ತೆ ಇಂದಿರಾ ಕ್ಯಾಂಟೀನ್ ಅವ್ಯವಹಾರ ಪಾಲಿಕೆ ಸಭೆಯಲ್ಲಿ ಪ್ರಸ್ತಾಪವಾಗಿರುವುದರಿಂದ ಲೋಕಾಯುಕ್ತ ತನಿಖೆ ನಡೆಸಲಾಗುವುದು ಎಂಬ ಮಾತುಗಳು ಕೇಳಿಬರುತ್ತಿವೆ.

Facebook Comments

Sri Raghav

Admin