ಇದು ಹೆಸರಿಗಷ್ಟೇ ಇಂದಿರಾ ಕ್ಯಾಂಟೀನ್, ಇಲ್ಲಿ ಊಟ ಸಿಗೋದೇ ಅಪರೂಪ..!

ಈ ಸುದ್ದಿಯನ್ನು ಶೇರ್ ಮಾಡಿ

ಗೌರಿಬಿದನೂರು, ಜು.8-ಸಾರ್ವಜನಿಕರ (ಬಡವರ) ಹಸಿವನ್ನು ನೀಗಿಸುವ ಸಲುವಾಗಿ ಕಡಿಮೆ ದರದಲ್ಲಿ ತಿಂಡಿ ಊಟ ನೀಡಲು ಇಂದಿರಾ ಕ್ಯಾಂಟೀನ್ ತೆರೆದಿರುವುದು ಸರಿಯಷ್ಟೇ.. ಆದರೆ ಕ್ಯಾಂಟಿನಲ್ಲಿ ನಡೆಯುತ್ತಿರುವ ಅವ್ಯವಹಾರಗಳಿಂದ ಬಡವರಿಗೆ ತಿಂಡಿ ಮತ್ತು ಊಟ ಸಮರ್ಪಕವಾಗಿ ಸಿಗುತ್ತಿಲ್ಲ ಎನ್ನುವುದಕ್ಕೆ ಅದೆಷ್ಟೋ ಮಂದಿ ಊಟಕ್ಕೆ ಬಂದು ತಿಂಡಿ..ಊಟ.. ಮುಗಿದಿದೆ ಎಂಬ ಮಾತು ಕೇಳಿಕೊಂಡು ಹೋಗುವಂತಾಗಿದೆ..?

ಆರಂಭ ಶೂರತ್ವ ಎಂಬಂತಾಗಿದೆ ಇಂದಿರಾ ಕ್ಯಾಂಟೀನ್ ಪರಿಸ್ಥಿತಿ, ಪ್ರಾರಂಭದಲ್ಲಿ ರುಚಿಕರವಾದ ತಿಂಡಿ, ಊಟ ನೀಡುತ್ತಿದ್ದ ಕ್ಯಾಂಟೀನ್ ಇಂದು ಒಂದಲ್ಲಾ ಒಂದು ಸಮಸ್ಯೆಯನ್ನು ಹೇಳಿಕೊಂಡು ಬರುತ್ತಿದೆ.

ಇದೀಗ ದಿನಸಿ ಸರಬರಾಜಿನ ಸಮಸ್ಯೆ ಕಾಡುತ್ತಿದೆ. ಕ್ಯಾಂಟೀನ್ ಗುತ್ತಿಗೆ ಪಡೆದವರು ಪ್ರತಿ ಹದಿನೈದು ದಿನಗಳಿಗೊಮ್ಮ ದಿನಸಿ ಸರಬರಾಜು ಮಾಡುತ್ತಿದ್ದರು. ಕಳೆದೆರಡು ತಿಂಗಳಿಂದ ದಿನಸಿ ಸರಬರಾಜು ಆಗುತ್ತಿಲ್ಲ. ಇದರಿಂದ ಸಮರ್ಪಕವಾಗಿ ಗ್ರಾಹಕರಿಗೆ ತಿಂಡಿ ಊಟ ನೀಡಲಾಗುತ್ತಿಲ್ಲ ಎಂದು ಕ್ಯಾಂಟೀನ್ ವ್ಯವಸ್ಥಾಪಕ ತಿಳಿಸುತ್ತಾರೆ.

ಇಂತಹ ಪರಿಸ್ಥಿತಿಯಲ್ಲಿ ಕೇವಲ 20 ರಿಂದ 30 ಜನಗಳಿಗೆ ಒಂದಿಷ್ಟು ಮೊಸರನ್ನ ಮಾಡಿ ಬೆರಳೆಣಿಕೆ ಗ್ರಾಹಕರಿಗೆ ನೀಡಿ ನಂತರ ಊಟ ಮುಗಿದಿದೆ ಎಂದು ಹೇಳುವ ಉದ್ದೇಶವೇನು ಎಂಬುದು ಗ್ರಾಹಕರ ಪ್ರಶ್ನೆಯಾಗಿದೆ.

ಗೋಲ್‍ಮಾಲ್: ಕ್ಯಾಂಟೀನ್‍ನಲ್ಲಿ ವೇಳಾಪಟ್ಟಿ ಯಂತೆ ತಿಂಡಿ, ಊಟ ವಿತರಣೆ ಯಾಗುತ್ತಿಲ್ಲ. ವೇಳಾಪಟ್ಟಿಯಂತೆ ಪ್ರತಿ ದಿನ ಇಡ್ಲಿ ಕಡ್ಡಾಯ ಜತೆಗೆ ಪ್ರತಿ ದಿನ ಪುಳಿಯೋಗರೆ, ಖಾರಾ ಬಾತ್, ಪೆÇಂಗಲ್, ರವಾ ಕಿಚಡಿ, ಚಿತ್ರಾನ್ನ, ವಾಂಗೀಬಾತ್, ಕೇಸರಿಬಾತ್, ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ಅನ್ನ ಮತ್ತು ತರಕಾರಿ ಸಾಂಬಾರ್ ಜತೆಗೆ ಮೊಸರನ್ನ ಕಡ್ಡಾಯ.

ಇದರ ಜತೆಗೆ ದಿನ ಟೊಮ್ಯಾಟೋ ಬಾತ್, ಚಿತ್ರಾನ್ನ, ವಾಂಗೀಬಾತ್, ಮೆಂತ್ಯಾ ಪಲಾವ್, ಪುಳಿಯೋಗರೆ, ಪಲಾವ್ ಗ್ರಾಹಕರಿಗೆ ನೀಡಬೇಕು ಎಂದು ಸರ್ಕಾರ ಗುತ್ತಿಗೆದಾರರಿಗೆ ನೀಡಿರುವ ವೇಳಾಪಟ್ಟಿಯಲ್ಲಿ ಸ್ಪಷ್ಟವಾಗಿ ಸೂಚಿಸಿದೆ.

ಆದರೆ ಕ್ಯಾಂಟಿನ್‍ನವರು ಇವೆಲ್ಲವನ್ನೂ ಗಾಳಿಗೆ ತೂರಿ ಕೇವಲ ಸರಕಾರಕ್ಕೆ ಪ್ರತಿನಿತ್ಯ 1500 ಟೋಕನ್ ಲೆಕ್ಕ ನೀಡುವ ಗೋಲ್‍ಮಾಲ್ ನಡೆಯುತ್ತಿದೆ. ಆದರೆ ಪ್ರತಿ ನಿತ್ಯ ಕ್ಯಾಂಟೀನ್‍ನಲ್ಲಿ ತಯಾರು ಮಾಡುವ ತಿಂಡಿ ಅಡುಗೆ ಬೆರಳೆಣಿಕೆ ಮಂದಿಗೆ ಮಾತ್ರ ಸಿಗುತ್ತಿದೆ. ತಿಂಡಿ, ಊಟ ಸಿಗದೆ ವಾಪಸಾಗುತ್ತಿರುವ ಗ್ರಾಹಕರೇ ಪ್ರತ್ಯಕ್ಷ ಸಾಕ್ಷಿಯಾಗಿದ್ದಾರೆ.

ಇಂದಿರಾ ಕ್ಯಾಂಟೀನ್‍ನಲ್ಲಿ ಪ್ರತಿನಿತ್ಯ 500 ಮಂದಿಗೆ ತಿಂಡಿ, ಮದ್ಯಾಹ್ನ 500 ಮಂದಿಗೆ ಊಟ, ರಾತ್ರಿ 500 ಮಂದಿಗೆ ಊಟ ನೀಡಬೇಕು, ತಿಂಡಿಗೆ 5 ರೂ, ಊಟಕ್ಕೆ 10 ರೂ ಸರ್ಕಾರ ನಿಗದಿ ಮಾಡಿದ್ದು, ಸರ್ಕಾರದಿಂದ ಪ್ರತಿ ದಿನಕ್ಕೆ 1500 ಫಲಾನುಭವಿಗಳಿಗೆ ಆಹಾರ ಸರಬ ರಾಜಿಗಾಗಿ ಫಲಾನುಭವಿಯಿಂದ 12500 ರೂ. ಟೆಂಡರ್‍ದಾರರು ವಸೂಲಿ ಮಾಡುವವರು, ಉಳಿದ ಮೊತ್ತ 15 ಸಾವಿರ ಪ್ರತಿ ದಿನಕ್ಕೆ ಸಬ್ಸಿಡಿ ಮೊತ್ತವನ್ನು ಸರ್ಕಾರ ಪಾವತಿಸುತ್ತಿದೆ.

ಸರಕಾರ ನೀಡುವ ಸಬ್ಸಿಸಿ ಹಣಕ್ಕಾಗಿ ಇಂದಿರಾ ಕ್ಯಾಂಟಿನ್ ಗುತ್ತಿಗೆ ಪಡೆದವರು ಇಲ್ಲ ಸಲ್ಲದ ಕುಂಟು ನೆಪಗಳನ್ನು ಹೇಳಿಕೊಂಡು ಬಡವರ ಊಟದ ಸಬ್ಸಿಡಿ ಹಣವನ್ನು ಗುಳುಂ ಮಾಡುತ್ತಿದ್ದಾರೆ ಎಂಬ ಅನುಮಾನಕ್ಕೆ ಇಲ್ಲಿನ ಇಂದಿರಾ ಕ್ಯಾಂಟಿನ್ ಕಾರ್ಯವೈಖರಿ ಕಾರಣವಾಗಿದೆ.

ಸಂಬಂಧಪಟ್ಟವರು ಇಂದಿರಾ ಕ್ಯಾಂಟೀನ್ ಅವ್ಯವಹಾರದ ಬಗ್ಗೆ ಸಮಗ್ರ ತನಿಖೆ ನಡೆಸಿ ಬಡಪಾಯಿಗಳ ಹೊಟ್ಟೆ ಹೊಡೆಯುತ್ತಿರುವವರ ವಿರುದ್ದ ಕ್ರಮಕ್ಕೆ ಮುಂದಾಗಬೇಕಿದೆ ಎಂಬುದು ಗ್ರಾಹಕರು ಒತ್ತಾಯಿಸಿದ್ದಾರೆ.

ನಗರದ ಇಂದಿರಾ ಕ್ಯಾಂಟೀನ್ ಬಗ್ಗೆ ಗ್ರಾಹಕರಿಂದ ಸಾಕಷ್ಟು ದೂರುಗಳು ಕೇಳಿ ಬರುತ್ತಿದ್ದು, ಈ ಬಗ್ಗೆ ಪೌರಾಯುಕ್ತರಿಗೆ ಕ್ರಮ ತೆಗೆದುಕೊಳ್ಳುವಂತೆ ಸೂಚಿಸುತ್ತೇನೆ. ಬಡವರ ಹಸಿವನ್ನು ಬಂಡವಾಳ ಮಾಡಿ ಕೊಳ್ಳುವವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ನಗರಸಭೆ ಮಾಜಿ ಉಪಾಧ್ಯಕ್ಷ ಆರ್.ಪಿ.ಗೋಪಿನಾಥ್ ತಿಳಿಸಿದ್ದಾರೆ.

ಇಂದಿರಾ ಕ್ಯಾಂಟೀನ್ ನಲ್ಲಿ 500 ಜನಕ್ಕೆ ತಿಂಡಿ ಊಟ ಅಂತಾ ಬೋರ್ಡ್ ಹಾಕಿದ್ದಾರೆ, ಆದರೆ ಬೆಳಿಗ್ಗೆ ತಿಂಡೆ ಕೆಲವೇ ಹೊತ್ತಿಗೆ ಮುಗಿದು ಹೋಗಿದೆ ಎನ್ನುತ್ತಾರೆ. ರಾತ್ರಿ ಊಟಕ್ಕೂ ಅಷ್ಟೇ ಮುಗಿತು ಅಂತಾರೆ ಕ್ಯಾಂಟೀನ್ ಯಾವಾಗಲೂ ಖಾಲಿ ಖಾಲಿ ಇರುತ್ತೆ. ಅದ್ಯಾವಾಗ..ಅದ್ಯಾರು ತಿಂದು ಹೋಗ್ತಾರೋ ಗೊತ್ತಾಗೊಲ್ಲ? ಎಂದು ಗ್ರಾಹಕ ಜಿ.ಹೆಚ್. ವೆಂಕಟೇಶ್ ಅಳಲು ತೋಡಿಕೊಂಡಿದ್ದಾರೆ.

Facebook Comments