ಗಡಿಯಲ್ಲಿ ಸೇನೆ ಹಿಂಪಡೆಯುವ ಪ್ರಕ್ರಿಯೆಗೆ ಚಾಲನೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಫೆ.16- ಕಳೆದ ಹತ್ತು ತಿಂಗಳಿನಿಂದ ಭಾರತ-ಚೀನಾ ಗಡಿಯಲ್ಲಿ ಉಂಟಾಗಿದ್ದ ಉದ್ರಿಕ್ತ ಪರಿಸ್ಥಿತಿ ತಣ್ಣಗಾಗಿದ್ದು, ಎರಡೂ ದೇಶಗಳು ಜಮಾವಣೆಗೊಳಿಸಿದ್ದ ಸೇನಾ ಬಲವನ್ನು ಇಂದು ಹಿಂಪಡೆದಿವೆ. ಕಳೆದ ವರ್ಷ ಜೂನ್ ವೇಳೆಗೆ ಆರಂಭವಾಗಿದ್ದ ಚೀನಾ ಮತ್ತು ಭಾರತದ ನಡುವಿನ ಸಂಘರ್ಷ ದಿನೇ ದಿನೇ ಕಾವೇರಿತೊಡಗಿತ್ತು. ಎರಡು ದೇಶಗಳ ಸೈನಿಕರ ನಡುವೆ ದೈಹಿಕ ಬಲಾಬಲ ಸಂಘರ್ಷವಾಗಿದ್ದು, ಗಾಲ್ವಾನ್‍ನಲ್ಲಿ 20ಕ್ಕೂ ಹೆಚ್ಚು ಮಂದಿ ಭಾರತೀಯ ಯೋಧರ ಬಲಿದಾನವಾದ ವರದಿಯಾಗಿತ್ತು. ಚೀನಾ ಭಾಗದಲ್ಲೂ ಕೂಡ ಹಲವಾರು ಸೈನಿಕರು ಸಾವನ್ನಪ್ಪಿದ್ದರು.

ಅನಂತರ ಲಡಾಕ್ ಮತ್ತು ಸಿಕ್ಕಿಂ ರಾಜ್ಯಗಳ ಗಡಿ ಭಾಗದ ಮೂಲಕ ಚೀನಾ ಸೈನಿಕರು ಒಳ ನುಗ್ಗುವ ಪ್ರಯತ್ನ ಮಾಡಿದ್ದರು. ಅದಕ್ಕೆ ಭಾರತೀಯ ಯೋಧರು ಪ್ರತಿರೋಧ ವ್ಯಕ್ತಪಡಿಸಿದ್ದರಿಂದ ಬಲಾಬಲ ಪ್ರಯೋಗ ನಡೆದಿತ್ತು. ಈ ನಡುವೆ ಅರುಣಾಚಲಪ್ರದೇಶ ಗಡಿ ಭಾಗದಲ್ಲಿ ಚೀನಾ ಭಾರತದ ಗಡಿ ಭಾಗದ ಒಳಗೆ ಬಂದು 100ಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಿದ್ದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಚೀನಾ ಗಡಿಯಲ್ಲಿ ಸೈನಿಕರು, ಟ್ಯಾಂಕರ್ ಮತ್ತು ಯುದ್ಧ ಸಾಮಗ್ರಿಗಳನ್ನು ಜಮಾಣೆ ಮಾಡುತ್ತಿದ್ದಂತೆ ಅದಕ್ಕೆ ಎದುರಾಗಿ ಭಾರತ ಕೂಡ ಗಡಿಯಲ್ಲಿ ಸೇನಾ ಜಮಾವಣೆ ಮಾಡಿತ್ತು. ಲಕ್ಷಾಂತರ ಮಂದಿ ಯೋಧರು ಗಡಿಯಲ್ಲಿ ಎದುರುಬದುರು ನಿಂತು ಯಾವುದೇ ಕ್ಷಣದಲ್ಲಾದರೂ ಯುದ್ಧ ಆರಂಭವಾಗುವ ಲಕ್ಷಣಗಳು ಗೋಚರಿಸಿದ್ದವು. ಆದರೆ, ಎರಡು ಸರ್ಕಾರಗಳ ನಡುವೆ ಹಾಗೂ ಸೇನಾ ಮುಖ್ಯಸ್ಥರ ಜತೆ ನಡೆದ 11 ಸುತ್ತಿನ ರಾಜತಾಂತ್ರಿಕತೆ ಮಾತುಕತೆಯ ನಂತರ ಪರಿಸ್ಥಿತಿ ತಿಳಿಗೊಂಡಿದೆ.

ಇತ್ತೀಚೆಗೆ ಸಂಸತ್‍ನಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್‍ಸಿಂಗ್ ಅವರು ಗಡಿಯಲ್ಲಿ ಜಮಾವಣೆಗೊಂಡಿದ್ದ ಸೇನಾ ಬಲವನ್ನು ಹಿಂಪಡೆಯಲು ಎರಡು ಸರ್ಕಾರಗಳು ಒಪ್ಪಿಕೊಂಡಿವೆ ಎಂದು ಘೋಷಿಸಿದ್ದರು. ಅದರಂತೆ ಇಂದು ಸೇನೆ ಹಿಂಪಡೆಯುವ ಪ್ರಕ್ರಿಯೆ ಆರಂಭೊಂಡಿದ್ದು, ಅದರ ಫೋಟೋಗಳನ್ನು ಭಾರತೀಯ ಸೇನೆಯ ಉತ್ತರ ವಲಯದ ಕಮಾಂಡೆಂಟ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಫೋಟೋಗಳಲ್ಲಿ ಟ್ಯಾಂಕರ್‍ಗಳು ವಾಪಸ್ ಆಗುತ್ತಿರುವುದು, ಸೈನಿಕರು ನಡೆದು ಹೋಗುತ್ತಿರುವುದು, ಸೇನಾ ವಾಹನಗಳು ವಾಪಸ್ ಬರುತ್ತಿರುವ ದೃಶ್ಯಗಳು ಸ್ಪಷ್ಟವಾಗಿ ಕಾಣುತ್ತಿವೆ. ಗಡಿ ಭಾಗದಲ್ಲಿ ಸುರಕ್ಷೆಗಾಗಿ ನಿರ್ಮಿಸಲಗಿದ್ದ ತಾತ್ಕಾಲಿಕ ಹೊಂಡಗಳು ಹಾಗೂ ಇತರ ಯುದ್ಧೋನ್ಮಾದ ಸಲಕರಣೆಗಳು ಪಾಳು ಬಿದ್ದಿರುವುದು ಕಂಡು ಬಂದಿದೆ.

Facebook Comments