ಲಡಾಖ್‍ನಲ್ಲಿ ಲಡಾಯಿ ಹಿಂದಿನ ಅಸಲಿ ಕಾರಣವೇನು ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

ಗಾಲ್ವಾನ್(ಪೂರ್ವ ಲಡಾಕ್), ಜೂ.17- ಇಡೀ ವಿಶ್ವಾದ್ಯಂತ ಆತಂಕ ಸೃಷ್ಟಿಸಿರುವ ಇಂಡೋ-ಚೀನಾ ಗಡಿ ಸಂಘರ್ಷ ಮತ್ತು ರಕ್ತಪಾತಕ್ಕೆ ಕಾರಣವೇನು ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿರುವಾಗಲೇ ಪೂರ್ವ ಲಡಾಕ್‍ನ ಗಾಲ್ವಾನ್ ಕಣಿವೆಯಲ್ಲಿ ಮೊನ್ನೆ ರಾತ್ರಿ ನಡೆದ ಅಸಲಿ ಸಂಗತಿ ಬಯಲಾಗಿದೆ.

ಭಾರತ, ಚೀನಾ ಉನ್ನತ ಸೇನಾಧಿಕಾರಿಗಳ ಮಟ್ಟದ ಮಾತುಕತೆಯ ನಂತರ ಗಾಲ್ವಾನ್ ಕಣಿವೆಯ ಗಡಿ ಪ್ರದೇಶದಿಂದ ಹಿಂದಕ್ಕೆ ಸರಿಯುವುದಾಗಿ ಕಮ್ಯುನಿಸ್ಟ್ ದೇಶ ಭರವಸೆ ನೀಡಿತ್ತು.

ಬೆನ್ನಿಗೆ ಚೂರಿ ಹಾಕಿದ ಚೀನಾ: ಗಾಲ್ವಾನ್ ಕಣಿವೆಯಿಂದ ಚೀನಾ ಸೈನಿಕರು ಹಿಂದಕ್ಕೆ ಸರಿದಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲು ಭಾರತೀಯ ಸೇನಾ ಪಡೆಯ 15ನೆ ಬಿಹಾರ್ ರೆಜ್ಮೆಂಟ್‍ನ 50 ಯೋಧರು ಕಮಾಂಡಿಂಗ್ ಆಫೀಸರ್ ನೇತೃತ್ವದಲ್ಲಿ ಮೊನ್ನೆ ಸಂಜೆ ಆ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು.

ಆದರೆ ಸಭೆಯಲ್ಲಿ ಒಪ್ಪಿಕೊಂಡಂತೆ ಚೀನಾ ತನ್ನ ಸೇನೆಯನ್ನು ಹಿಂದಕ್ಕೆ ಕರೆಸಿಕೊಂಡಿಲ್ಲ. ಅಲ್ಲದೆ ಆ ಸ್ಥಳದಿಂದ ಒಂದಿಂಚೂ ಕೂಡ ಜಾಗ ಖಾಲಿ ಮಾಡಿರಲಿಲ್ಲ. ಚೀನಾದ ಈ ಉದ್ಧಟತನವನ್ನು ಭಾರತೀಯ ಯೋಧರು ಪ್ರಶ್ನಿಸಿದಾಗ ಚೀನಿ ಸೈನಿಕರು ಉದ್ಧಟತನ ತೋರಿ ಹಲ್ಲೆ ನಡೆಸಿದರು.

ಇದರಿಂದ ಕುಪಿತರಾದ ಭಾರತೀಯ ಯೋಧರು ಆ ಪ್ರದೇಶದಲ್ಲಿದ್ದ ಚೀನಿ ಸೇನಾ ಶಿಬಿರಗಳು ಮತ್ತು ಯುದ್ಧಾಸ್ತ್ರಗಳನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿ ಚೀನಾಗೆ ಎಚ್ಚರಿಕೆ ನೀಡಿದರು.

ನಂತರ ತಮ್ಮ ಸ್ಥಳಗಳಿಗೆ ಭಾರತದ 50 ಸೈನಿಕರು ಹಿಂತಿರುಗಿದರು. ಬಳಿಕ ಚೀನಾ 250ಕ್ಕೂ ಹೆಚ್ಚು ಯೋಧರೊಂದಿಗೆ ಹಠಾತ್ ದಾಳಿ ಮಾಡಿತ್ತು. ಹರಿತವಾದ ಕೋಲುಗಳು, ಮೊಳೆಗಳು ಇದ್ದ ದೊಣ್ಣೆಗಳು, ಕಬ್ಬಿಣದ ಸಲಾಕೆಗಳು ಮತ್ತು ಕಲ್ಲುಗಳಿಂದ ಭಾರತೀಯ ಯೋಧರ ಮೇಲೆ ಮುಗಿ ಬಿದ್ದರು.

ತಕ್ಷಣ ಎಚ್ಚೆತ್ತುಕೊಂಡ ಭಾರತೀಯ ಯೋಧರು ತೀವ್ರ ಪ್ರತಿರೋಧ ವ್ಯಕ್ತಪಡಿಸಿದಾಗ ಭಾರೀ ಕಾಳಗ ನಡೆಯಿತು. ಇದೇ ವೇಳೆ ಭಾರತದ ಹೆಚ್ಚುವರಿ ಯೋಧರು ಸ್ಥಳಕ್ಕೆ ಧಾವಿಸಿದರು. ಈ ಘರ್ಷಣೆಯಲ್ಲಿ ಭಾರತದ ಕರ್ನಲ್ ಸಂತೋಷ್‍ಕುಮಾರ್ ಸೇರಿದಂತೆ 20 ಯೋಧರು ಹುತಾತ್ಮರಾದರು.

ಭಾರತ ನಡೆಸಿದ ದಿಟ್ಟ ಪ್ರತಿ ದಾಳಿಯಲ್ಲಿ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್‍ಎ) 45ಕ್ಕೂ ಹೆಚ್ಚು ಯೋಧರು ಹತರಾದರು. ಈ ರಕ್ತಪಾತದಲ್ಲಿ ಎರಡೂ ಕಡೆಯ ಅನೇಕ ಯೋಧರಿಗೆ ಗಾಯಗಳಾಗಿದ್ದು , ಕೆಲವರ ಸ್ಥಿತಿ ಶೋಚನೀಯವಾಗಿದೆ.

ಈ ಸಂಘರ್ಷದ ವೇಳೆ ಚೀನಾದ ಸೇನಾಧಿಕಾರಿಗಳು ಭಾರತದ ಕೆಲ ಯೋಧರನ್ನು ವಶಕ್ಕೆ ತೆಗೆದುಕೊಂಡರು. ಆದರೆ ಭಾರತೀಯ ಸೇನಾ ಪಡೆ ಮತ್ತೆ ಭೀಕರ ದಾಳಿ ನಡೆಸುವ ಆತಂಕದಿಂದ ಅವರನ್ನು ಕೆಲ ಗಂಟೆಗಳ ಬಳಿಕ ಬಿಡುಗಡೆ ಮಾಡಿದರು.

# ಚೀನಾಗೆ ಖಡಕ್ ಎಚ್ಚರಿಕೆ:
ಭಾರತ ಸೇನಾ ಪಡೆ ದುರ್ಬಲವಲ್ಲ ಎಂಬುದನ್ನು ಚೀನಾಗೆ ದಿಟ್ಟ ದಾಳಿ ಮೂಲಕ ಸಾಬೀತು ಮಾಡಿರುವ ಭಾರತೀಯ ಸೇನಾ ಪಡೆ ಗಡಿ ದಾಟಿ ಬಂದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂಬುದನ್ನು ಮನವರಿಕೆ ಮಾಡಿಕೊಟ್ಟಿದೆ.

ಕಡಿಮೆ ಸಂಖ್ಯೆಯಲ್ಲಿದ್ದ ಭಾರತೀಯ ಯೋಧರ ದಾಳಿಯಿಂದ ಕೆಂಪು ರಾಷ್ಟ್ರದ ಚೀನಿ ಸೈನಿಕರು ಹೆದರಿ ಕಂಗಾಲಾಗಿದ್ದಾರೆ. ಇವೆಲ್ಲದರ ನಡುವೆ ಉಭಯ ದೇಶಗಳ ಉನ್ನತ ನಾಯಕರು ಪರಿಸ್ಥಿತಿ ಶಮನಗೊಳಿಸುವ ಮಾತುಕÉ ಮುಂದುವರೆಸಿದ್ದಾರೆ.

Facebook Comments