ಇಂದೋರ್ ಭಾರತದ ಅತ್ಯಂತ ಸ್ವಚ್ಛ ನಗರ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಆ.20-ಕೇಂದ್ರ ಸರ್ಕಾರದ ಸ್ವಚ್ಛ ಸರ್ವೇಕ್ಷಣ್-2020 ಪ್ರಶಸ್ತಿಗಳನ್ನು ಇಂದು ಘೋಷಿಸಲಾಗಿದ್ದು, ಮಧ್ಯಪ್ರದೇಶದ ಇಂದೋರ್ ನಗರಿ ಸತತ 4ನೇ ವರ್ಷ ದೇಶದ ಅತ್ಯಂತ ಸ್ವಚ್ಛನಗರಿ ಎಂಬ ಪ್ರಥಮ ಸ್ಥಾನವನ್ನು ಉಳಿಸಿಕೊಂಡಿದೆ.

ಗುಜರಾತ್‍ನ ಸೂರತ್ ಮತ್ತು ಮಹಾರಾಷ್ಟ್ರದ ನವಿಮುಂಬೈ ಅನುಕ್ರಮವಾಗಿ ದ್ವಿತೀಯ ಮತ್ತು ತೃತೀಯ ಅತ್ಯುತ್ತಮ ನಗರಗಳ ಸ್ಥಾನ ಪಡೆದಿವೆ.

ಉತ್ತರಪ್ರದೇಶದ ವಾರಣಾಸಿ(ಪ್ರಧಾನಿ ಮೋದಿ ಪ್ರತಿನಿಸುತ್ತಿರುವ ಲೋಕಸಭಾ ಕ್ಷೇತ್ರ) ನಗರವನ್ನು ಅತ್ಯುತ್ತಮ ಗಂಗಾನಗರ ಎಂಬ ಪ್ರಶಸ್ತಿಗೆ ಭಾಜನವಾಗಿದೆ.

ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವ ಹರ್ದೀಪ್ ಸಿಂಗ್‍ಪುರಿ ಇಂದು ಸ್ವ ಚ್ಛ ಸರ್ವೆಕ್ಷಣ್-2020 ಹೆಸರಿನಲ್ಲಿ ವಿವಿಧ ವರ್ಗಗಳ ಪ್ರಶಸ್ತಿಗಳನ್ನು ಘೋಷಿಸಿದರು.

# ಬೆಂಗಳೂರು ಮತ್ತು ಮೈಸೂರಿಗೂ ಸ್ಥಾನ :

ಕೇಂದ್ರ ಸರ್ಕಾರದ ಸ್ವಚ್ಛ ಸರ್ವೇಕ್ಷಣಾ ಅಭಿಯಾನದಲ್ಲಿ ಪ್ರಧಾನಮಂತ್ರಿಗಳ ಪ್ರಶಸ್ತಿ ಗಿಟ್ಟಿಸಿಕೊಳ್ಳುವಲ್ಲಿ ವಿಫಲವಾಗಿರುವ ಕರ್ನಾಟಕ, ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯ ಹಾಗೂ ಕಾರ್ಯದರ್ಶಿ ಪ್ರಶಸ್ತಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಮಧ್ಯಪ್ರದೇಶ, ಗುಜರಾತ್, ಮಹಾರಾಷ್ಟ್ರ, ಛತ್ತೀಸ್‍ಗಢ, ಜಾರ್ಖಂಡ್, ಪಂಜಾಬ್, ಉತ್ತರ ಪ್ರದೇಶ ಹಾಗೂ ಉತ್ತರಖಂಡದ 12 ನಗರಗಳು ಪ್ರಧಾನಮಂತ್ರಿಗಳ ಪ್ರಶಸ್ತಿ ಪಡೆದುಕೊಂಡಿವೆ.

ರಾಜ್ಯ ರಾಜಧಾನಿ ಬೆಂಗಳೂರು ಮತ್ತು ಮೈಸೂರು ನಗರಗಳು ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯದ ಪ್ರಶಸ್ತಿ ಪಡೆದುಕೊಂಡಿವೆ. ನಗರಾಭಿವೃದ್ಧಿ ಸಚಿವಾಲಯದ ಪ್ರಶಸ್ತಿ ಪಟ್ಟಿಯಲ್ಲಿ ಬೆಂಗಳೂರು 2ನೆ ಸ್ಥಾನ ಪಡೆದುಕೊಂಡಿದ್ದರೆ ಮೈಸೂರು 6ನೆ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ಉಳಿದಂತೆ ವಿವಿಧ ರಾಜ್ಯಗಳ 42 ನಗರಗಳು ಈ ಪ್ರಶಸ್ತಿಗೆ ಪಾತ್ರವಾಗಿವೆ. ರಾಜ್ಯದ ಹುಣಸೂರು, ಕಡೂರು, ಕೃಷ್ಣರಾಜನಗರಗಳ ತಾಲ್ಲೂಕು ಮುನ್ಸಿಪಲ್ ಕಾರ್ಪೊರೇಶನ್, ರಾಮನಗರ ಸಿಎಂಸಿ, ಹೊಳಲ್ಕೆರೆ ಜಾಲಿ ಪಟ್ಟಣಗಳು, ಸೆಕ್ರೇಟರಿ ಪ್ರಶಸ್ತಿಗೆ ಭಾಜನವಾಗಿವೆ.
ಕೇಂದ್ರ ಸರ್ಕಾರ ಕಳೆದ ಐದು ವರ್ಷಗಳಿಂದ ಸ್ವಚ್ಛ ಸರ್ವೇಕ್ಷಣಾ ಅಭಿಯಾನ ನಡೆಸಿಕೊಂಡು ಬರುತ್ತಿದ್ದು, ಈ ಅಭಿಯಾನದಲ್ಲಿ ಉತ್ತಮ ಸಾಧನೆ ತೋರುವ ರಾಜ್ಯಗಳು ಮತ್ತು ನಗರಗಳಿಗೆ ಪ್ರಶಸ್ತಿ ನೀಡುತ್ತ ಬಂದಿದೆ.

ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯದ ಮೈಸೂರು ಉತ್ತಮ ಸಾಧನೆ ತೋರಿತ್ತು. ಆದರೆ, ರಾಜ್ಯ ರಾಜಧಾನಿ ಬೆಂಗಳೂರು ಯಾವುದೇ ರ್ಯಾಂಕಿಂಗ್ ಪಡೆಯುವಲ್ಲಿ ವಿಫಲವಾಗಿತ್ತು.

ಆದರೆ, 5ನೆ ಆವೃತ್ತಿಯ ಸ್ವಚ್ಛ ಸರ್ವೇಕ್ಷಣಾ ಅಭಿಯಾನದಲ್ಲಿ ಬೆಂಗಳೂರು ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯ ಪ್ರಶಸ್ತಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಮಹಾರಾಷ್ಟ್ರದ ನವಿ ಮುಂಬೈ, ಸಾಸ್‍ವಾಡ್, ಕರಡ್, ಲೋನ್‍ವಾಲಾ ನಗರಗಳು ಪ್ರಧಾನಮಂತ್ರಿ ಪ್ರಶಸ್ತಿ ಪಡೆದುಕೊಂಡಿದ್ದರೆ ಮಧ್ಯಪ್ರದೇಶದ ಇಂದೋರ್, ಗುಜರಾತ್‍ನ ಸೂರತ್, ಛತ್ತೀಸ್‍ಗಢ, ಜಾರ್ಖಂಡ್, ಪಂಜಾಬ್‍ನ ಜಲಂಧರ್, ಉತ್ತರ ಪ್ರದೇಶದ ವಾರಣಾಸಿ ಮತ್ತು ಶಹಜಹಾನ್‍ಪುರಗಳು ಪ್ರಧಾನಮಂತ್ರಿ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿವೆ.

Facebook Comments

Sri Raghav

Admin