2ನೇ ಬಾರಿಗೆ ಸಿಸಿಬಿ ಮುಂದೆ ಹಾಜರಾದ ಇಂದ್ರಜಿತ್ ಲಂಕೇಶ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.3- ಕನ್ನಡ ಚಿತ್ರರಂಗ ಸಂಪೂರ್ಣ ಕಲುಷಿತವಾಗಿಲ್ಲ. ಕೇವಲ ಶೇ.5ರಷ್ಟು ಮಾತ್ರ ಕೊಳಕು ಇದೆ. ಇದನ್ನು ತೆಗೆದು ಹಾಕಬೇಕು ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿದರು. ಎರಡನೇ ಬಾರಿಗೆ ಸಿಸಿಬಿ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಚಿತ್ರರಂಗ ಶೇ.95ರಷ್ಟು ಶುದ್ಧವಾಗಿದೆ. ಉಳಿದ 5ರಷ್ಟು ಮಲೀನವನ್ನು ಮೊದಲು ತೆಗೆದು ಹಾಕಿದರೆ ಎಲ್ಲವೂ ಸರಿಹೋಗುತ್ತದೆ ಎಂದರು.

ಯುವ ನಟ-ನಟಿಯರಲ್ಲಿ ಡ್ರಗ್ಸ್ ಸೇವನೆ ಹೆಚ್ಚಿದೆ. ಇದರಿಂದ ಇಡೀ ಚಿತ್ರರಂಗಕ್ಕೆ ಕಳಂಕ ಬರುವುದು ಬೇಡ. ಇದನ್ನು ಮೊದಲು ಸರಿಪಡಿಸಲಿ ಎಂದು ಇಂದ್ರಜಿತ್ ಲಂಕೇಶ್ ಸಲಹೆ ನೀಡಿದರು. ಡ್ರಗ್ಸ್ ವಿಚಾರ ಬಂದ ಕೂಡಲೇ ಫಿಲ್ಮಂ ಛೇಂಬರ್‍ನವರು ನನ್ನನ್ನು ಕರೆದಿದ್ದರೆ ಅವರಿಗೇ ಮೊದಲು ಎಲ್ಲ ಮಾಹಿತಿಯನ್ನು ಕೊಡುತ್ತಿದ್ದೆ.

ಆದರೆ, ಅವರ್ಯಾರೂ ನನ್ನನ್ನು ಭೇಟಿ ಮಾಡಲಿಲ್ಲ. ನನ್ನನ್ನು ಕರೆಯಲೂ ಇಲ್ಲ. ಸಿಸಿಬಿಯವರು ಕರೆದರು ಅವರಿಗೆ ಎಲ್ಲ ಮಾಹಿತಿಯನ್ನು ನೀಡಿದ್ದೇನೆ. ಆ ಮಾಹಿತಿಗಳಿಗೆ ನಾನು ಈಗಲೂ ಬದ್ಧನಾಗಿದ್ದೇನೆ ಎಂದು ತಿಳಿಸಿದರು.

ಇಂದು ಸಿಸಿಬಿ ಅಧಿಕಾರಿಗಳನ್ನು ಭೇಟಿ ಮಾಡುತ್ತೇನೆ. ಅವರು ಕೇಳುವ ಮಾಹಿತಿಗಳು ನನ್ನಲ್ಲಿ ಇದ್ದರೆ ಎಲ್ಲವನ್ನೂ ಕೊಡುತ್ತೇನೆ. ಹಾರ್ಡ್‍ಡಿಸ್ಕ್‍ನಲ್ಲಿದ್ದ ಮಾಹಿತಿಯನ್ನು ಸಿಸಿಬಿ ಅಧಿಕಾರಿಗಳಿಗೆ ಈಗಾಗಲೇ ಕೊಟ್ಟಿದ್ದೇನೆ ಎಂದರು.

Facebook Comments