ದರ್ಶನ್ ಅವರ ರೌಡಿಗಳಿಂದ ನನಗೆ ಬೆದರಿಕೆ ಕರೆ ಬರುತ್ತಿವೆ : ಇಂದ್ರಜಿತ್ ಲಂಕೇಶ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.19- ನಟ ದರ್ಶನ್ ಅವರ ಹಿಂಬಾಲಕರಿಂದ ನನಗೆ ಬೆದರಿಕೆ ಕರೆಗಳು ಬರುತ್ತಿದ್ದು , ಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇನೆ ಎಂದು ನಿರ್ದೇಶಕ ಹಾಗೂ ಪತ್ರಕರ್ತ ಇಂದ್ರಜಿತ್ ಲಂಕೇಶ್ ಹೇಳಿದರು.  ದರ್ಶನ್ ಮತ್ತು ಇಂದ್ರಜಿತ್ ನಡುವಿನ ಸಂಘರ್ಷ ಮುಂದುವರೆದಿದ್ದು, ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಇಂದ್ರಜಿತ್ ಅವರು ದರ್ಶನ್ ಅವರ ಹಿಂಬಾಲಕರು ಕಳೆದ 24 ಗಂಟೆಯಿಂದ ಪ್ರತಿ 30 ಸೆಕೆಂಡ್‍ಗೆ ಕಾಲ್ ಮಾಡಿ , ಟ್ರೋಲ್ ಮಾಡಿ ಬೆದರಿಕೆ ಹಾಕುತ್ತಿದ್ದಾರೆ. ಈ ಬಗ್ಗೆ ಸೈಬರ್ ಕ್ರೈಂನಲ್ಲಿ ದೂರು ದಾಖಲಿಸುತ್ತೇನೆ.

ದೂರವಾಣಿ ಕರೆ, ವ್ಯಾಟ್ಸಾಪ್‍ನಿಂದ ಬೆದರಿಕೆ ಕರೆಗಳ ಜತೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದಾರೆ. ದರ್ಶನ್ ಅವರ ಬೆಂಬಲಿಗರು, ಅವರ ರೌಡಿಗಳು ಇದನ್ನೆಲ್ಲಾ ಮಾಡುತ್ತಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಮೊಬೈಲ್ ಅನ್ನು ಪ್ರದರ್ಶಿಸಿ ವಿವರಗಳನ್ನು ನೀಡಿದ ಅವರು, ಇದ್ಯಾವುದಕ್ಕೂ ನಾನು ಹೆದರುವುದಿಲ್ಲ. ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸಿದ್ದೇನೆ. ನಟ ದರ್ಶನ್ ಹಿಂಬಾಲಕರ ವಿರುದ್ಧ ದೂರು ಕೊಡುತ್ತೇನೆ ಎಂದು ತಿಳಿಸಿದರು.

ನಮ್ಮ ತಂದೆ ಲಂಕೇಶ್ ಅವರು ನಾಲ್ಕು ದಶಕಗಳ ಕಾಲ ಪತ್ರಿಕೋದ್ಯಮದಲ್ಲಿ ಇಂತಹ ಸಾಕಷ್ಟು ಬೆದರಿಕೆ ಕರೆಗಳನ್ನು ನೋಡಿದ್ದರು. ಕೊನೆಯ ಕ್ಷಣದವರೆಗೂ ಪೆನ್ ಅನ್ನು ಹಿಡಿದು ಹೋರಾಟ ನಡೆಸಿದ್ದರು. ನಾನು ಕೂಡ 25 ವರ್ಷಗಳ ಕಾಲ ಅವರೊಂದಿಗೆ ಕೆಲಸ ಮಾಡಿದ್ದೆ.

ಪತ್ರಿಕೋದ್ಯಮ ನಡೆಸುತ್ತಿದ್ದೇನೆ. ಇದ್ಯಾವುದಕ್ಕೂ ನನಗೆ ಮುಜುಗರವಾಗುವುದಿಲ್ಲ. ಇಂತಹ ಸಾಕಷ್ಟು ಘಟನೆಗಳನ್ನು ನೋಡಿದ್ದೇವೆ. ಈ ಎಲ್ಲವನ್ನೂ ನಾವು ಎದರಿಸುತ್ತೇವೆ ಎಂದು ಇಂದ್ರಜಿತ್ ಲಂಕೇಶ್ ಹೇಳಿದರು.

Facebook Comments