Saturday, April 20, 2024
Homeರಾಷ್ಟ್ರೀಯಗೋವಾದಲ್ಲಿ ಮೊದಲ ಬಾರಿಗೆ ಬಿಜೆಪಿಯಿಂದ ಮಹಿಳಾ ಅಭ್ಯರ್ಥಿ ಕಣಕ್ಕೆ

ಗೋವಾದಲ್ಲಿ ಮೊದಲ ಬಾರಿಗೆ ಬಿಜೆಪಿಯಿಂದ ಮಹಿಳಾ ಅಭ್ಯರ್ಥಿ ಕಣಕ್ಕೆ

ಪಣಜಿ,ಮಾ.25- ಚಿಕ್ಕರಾಜ್ಯ ಗೋವಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿಯಿಂದ ಮಹಿಳಾ ಅಭ್ಯರ್ಥಿಯೊಬ್ಬರು ಕಣಕ್ಕಿಳಿಯುತ್ತಿದ್ದಾರೆ. ಡೆಂಪೊ ಇಂಡಸ್ಟ್ರೀಸ್‍ನ ಕಾರ್ಯ ನಿರ್ವಾಹಕ ನಿರ್ದೇಶಕಿ ಪಲ್ಲವಿ ಡೆಂಪೊ ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ.

ಗೋವಾದ ವಾಣಿಜ್ಯೋದ್ಯಮಿ ಹಾಗೂ ಶಿಕ್ಷಣತಜ್ಞೆಯೂ ಆಗಿರುವ ಪಲ್ಲವಿ ಡೆಂಪೊ ಅವರು ಪುಣೆಯ ಎಂಐಟಿಯಿಂದ ರಸಾಯನಶಾಸ್ತ್ರದಲ್ಲಿ ಪದವಿ ಮತ್ತು ವ್ಯವಹಾರ ನಿರ್ವಹಣೆಯಲ್ಲಿ (ಎಂಬಿಎ) ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸದ್ಯ 49 ವರ್ಷದ ಪಲ್ಲವಿ ಅವರು, ಡೆಂಪೊ ಇಂಡಸ್ಟ್ರೀಸ್‍ನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಹಾಗೂ ಮಾಧ್ಯಮ ಮತ್ತು ರಿಯಲ್ ಎಸ್ಟೇಟ್ ವಿಭಾಗವನ್ನು ನಿರ್ವಹಣೆ ಮಾಡುತ್ತಿದ್ದಾರೆ.

ಇಂಡೋ-ಜರ್ಮನ್ ಎಜುಕೇಶನಲ್ ಅಂಡ್ ಕಲ್ಚರಲ್ ಸೊಸೈಟಿಯ ಅಧ್ಯಕ್ಷರಾಗಿದ್ದಾರೆ, ಇದು ಜರ್ಮನಿ ಮತ್ತು ಗೋವಾ ನಡುವಿನ ಸಾಂಸ್ಕೃತಿಕ ಬಾಂಧವ್ಯವವನ್ನು ಮತ್ತಷ್ಟು ಇಮ್ಮಡಿಗೊಳಿಸುತ್ತಿದೆ. ಅಲ್ಲದೇ ಪಲ್ಲವಿ ಅವರು ಪ್ರಾರಂಭಿಸಿದ ಫ್ಯಾಷನ್ ಮತ್ತು ಜವಳಿ ವಸ್ತುಸಂಗ್ರಹಾಲಯವಾದ ಮೋಡಾ ಗೋವಾ ಫೌಂಡೇಶನ್‍ನ ಟ್ರಸ್ಟಿಯಾಗಿದ್ದಾರೆ.

ಜೊತೆಗೆ 2012ರಿಂದ 2016ರವರೆಗೆ ಗೋವಾ ವಿಶ್ವವಿದ್ಯಾಲಯದ ಸಂಯೋಜಿತ ಶೈಕ್ಷಣಿಕ ಮಂಡಳಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಗೋವಾ ಕ್ಯಾನ್ಸರ್ ಸೊಸೈಟಿಯ ವ್ಯವಸ್ಥಾಪಕ ಸಮಿತಿಯ ಭಾಗವಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಪಲ್ಲವಿ ಡೆಂಪೊಅವರ ಪತಿ ಶ್ರೀನಿವಾಸ್ ಡೆಂಪೊ ಗೋವಾ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ಮುಖ್ಯಸ್ಥರಾಗಿದ್ದಾರೆ. ಇದರೊಂದಿಗೆ ಡೆಂಪೊ ಕುಟುಂಬವು ಬಡ ಹೆಣ್ಣುಮಕ್ಕಳಿಗೆ ಗ್ರಾಮೀಣ ಶಾಲೆ ದತ್ತು ಕಾರ್ಯಕ್ರಮದಡಿ ಸರ್ಕಾರಿ ಪ್ರೌಢ ಶಾಲೆಗಳನ್ನು ದತ್ತು ಪಡೆದಿದೆ. ಈ ಮೂಲಕ ವೃತ್ತಿಪರ ತರಬೇತಿ ನೀಡುವ ಕೆಲಸ ಮಾಡುತ್ತಿದೆ.

ದಕ್ಷಿಣ ಗೋವಾ ಕ್ಷೇತ್ರದಲ್ಲಿ ಕಾಂಗ್ರೆಸ್‍ನಿಂದ ಫ್ರಾನ್ಸಿಸ್ಕೊ ಸರ್ದಿನ್ಹಾ ಪ್ರತಿನಿಧಿಸುತ್ತಿದ್ದಾರೆ. 1962 ರಿಂದ ಕಾಂಗ್ರೆಸ್ ಭದ್ರಕೋಟೆಯಾಗಿರುವ ಕ್ಷೇತ್ರದಲ್ಲಿ ಬಿಜೆಪಿ ಕೇವಲ ಎರಡು ಬಾರಿ (1999 ಮತ್ತು 2014 ರಲ್ಲಿ) ಗೆದ್ದಿದೆ. ಈ ಬಾರಿ ಪಲ್ಲವಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

RELATED ARTICLES

Latest News