ಅಧಃಪತನದತ್ತ ಕೈಗಾರಿಕಾ ವಲಯ, ಮೌನಕ್ಕೆ ಶರಣಾದ ಹಣಕಾಸು ಸಂಸ್ಥೆ..!

ಈ ಸುದ್ದಿಯನ್ನು ಶೇರ್ ಮಾಡಿ

ಸರ್ಕಾರದ ನಿರ್ಲಕ್ಷ್ಯ, ಕೈಗಾರಿಕೋದ್ಯಮಿಗಳ ನಿರಾಸಕ್ತಿ, ಕೈಗಾರಿಕಾ ಕ್ಷೇತ್ರದ ಸಂಘಟನೆಗಳವರ ನಿರ್ಲಕ್ಷ್ಯ ಧೋರಣೆಯಿಂದ ಅಧಃಪತನದತ್ತ ಸಾಗುತ್ತಿರುವ ಕೈಗಾರಿಕೋದ್ಯಮಗಳ ನೆರವಿಗೆ ರಾಜ್ಯ ಹಣಕಾಸು ಸಂಸ್ಥೆ ಮುಂದೆ ಬರಬೇಕಿದೆ.

ಕೈಗಾರಿಕೆಗಳು ಸೇರಿದಂತೆ ವಿವಿಧ ವಲಯಗಳ ಅಭಿವೃದ್ಧಿಗೆ ಹಣಕಾಸು ನೆರವು ನೀಡುವ ಕೆಎಸ್‍ಎಫ್‍ಸಿ ಸದ್ಯ ಕೋವಿಡ್-19 ಸಂಕಷ್ಟದಿಂದ ಆರ್ಥಿಕವಾಗಿ ಹಳ್ಳ ಹಿಡಿದಿರುವ ಕೈಗಾರಿಕೆಗಳ ನೆರವಿಗೆ ಹೊಸ ಯೋಜನೆಗಳನ್ನು ರೂಪಿಸಬೇಕು.

ಕರ್ನಾಟಕ ರಾಜ್ಯದಲ್ಲಿ ಕೈಗಾರಿಕೆಗಳು ನೆಲ ಕಚ್ಚುತ್ತಿವೆ. ಕೈಗಾರಿಕೋದ್ಯಮಿಗಳು ಹತಾಶರಾಗಿ ಉದ್ಯಮಗಳಿಂದ ವಿಮುಖರಾಗುತ್ತಿದ್ದಾರೆ. ಕೊರೊನಾ ಸಂಕಷ್ಟದ ಈ ಸಂದರ್ಭದಲ್ಲಿ ಕೈಗಾರಿಕೋದ್ಯಮಿಗಳ ನೆರವಿಗೆ ರಾಜ್ಯ ಹಣಕಾಸು ಸಂಸ್ಥೆ ದಾವಿಸಿ ಹೊಸ ಯೋಜನೆಗಳ ಮೂಲಕ ನೆರವಾದರೆ ಕೈಗಾರಿಕೋದ್ಯಮಿಗಳು ನೆಲೆ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ತಮ್ಮ ಕೈಗಾರಿಕೆಗಳನ್ನು ಮುಂದುವರೆಸಲು ಅನುಕೂಲವಾಗುತ್ತದೆ. ನಿರುದ್ಯೋಗ ನಿವಾರಣೆಯಾಗುತ್ತದೆ.

ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಕೆಎಸ್‍ಎಫ್‍ಸಿ ಈ ನಿಟ್ಟಿನಲ್ಲಿ ಚಿಂತನೆ ನಡೆಸುವುದು ಅಗತ್ಯ ಮತ್ತು ಅನಿವಾರ್ಯವಾಗಿದೆ. ಎಲ್ಲ ಕೈಗಾರಿಕೋದ್ಯಮಿಗಳಿಗೆ ನಿರಂತರ ನೆರವು ನೀಡುತ್ತ ಬಂದಿರುವ ರಾಜ್ಯ ಹಣಕಾಸು ಸಂಸ್ಥೆಯ ಮೇಲೆ ಬಹಳಷ್ಟು ಕೈಗಾರಿಕೋದ್ಯಮಿಗಳು ಅವಲಂಬಿತರಾಗಿದ್ದಾರೆ. ಕಳೆದ ಆರೇಳು ತಿಂಗಳಿನಿಂದ ಕೈಗಾರಿಕೋದ್ಯಮಿಗಳ ಸ್ಥಿತಿ ಶೋಚನೀಯವಾಗಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ಆದೇಶದಂತೆ ವಾಣಿಜ್ಯ ಬ್ಯಾಂಕ್‍ಗಳು ಸಂಕಷ್ಟದ ಸಂದರ್ಭದಲ್ಲಿ ಸಾಲ ಮತ್ತಿತರ ನೆರವುಗಳನ್ನು ನೀಡುತ್ತ ಬಂದಿವೆ. ಆದರೆ, ರಾಜ್ಯ ಹಣಕಾಸು ಸಂಸ್ಥೆ ಸಾಲ ಮುಂದೂಡಿಕೆ ಮಾಡಿರುವುದನ್ನು ಹೊರತುಪಡಿಸಿದರೆ ಯಾವುದೇ ಹೊಸ ಯೋಜನೆಗಳನ್ನು ರೂಪಿಸಿಲ್ಲ.

ವಾಣಿಜ್ಯ ಬ್ಯಾಂಕ್‍ಗಳವರು ಪ್ರತಿದಿನ ಹೊಸ ಹೊಸ ಯೋಜನೆಗಳನ್ನು ರೂಪಿಸಿ ಗ್ರಾಹಕರನ್ನು ಆಕರ್ಷಿಸಿ ವಿವಿಧ ಸಾಲ ಮಂಜೂರಾತಿ ಮಾಡುತ್ತವೆ. ಈ ಮೂಲಕ ಬ್ಯಾಂಕ್‍ಗಳ ಅಭಿವೃದ್ಧಿ ಗ್ರಾಹಕರಿಗೆ ಅನುಕೂಲ, ಕೈಗಾರಿಕೋದ್ಯಮಿಗಳಿಗೆ ಸಹಕಾರವಾಗುತ್ತ ಬಂದಿದೆ.

ಸಣ್ಣ ಸಣ್ಣ ಕೈಗಾರಿಕೆಗಳಿಂದ ಹಿಡಿದು ಬೃಹತ್ ಕೈಗಾರಿಕೆ ವರೆಗೆ ಹಣಕಾಸು ನೆರವು ನೀಡುವ ರಾಜ್ಯ ಹಣಕಾಸು ಸಂಸ್ಥೆಗೆ ಕೈಗಾರಿಕಾ ಕ್ಷೇತ್ರದಲ್ಲಿರುವ ಸಂಘಗಳು, ಅದರ ನೇತಾರರು ತೆರಳಿ ಮಾತುಕತೆ ನಡೆಸಿ ಆರ್ಥಿಕ ನೆರವಿಗೆ ಅನುಕೂಲ ಮಾಡಿಕೊಡಬೇಕಾದ ಹೊಣೆಗಾರಿಕೆ ಇದೆ. ಆದರೆ, ಕೈಗಾರಿಕಾ ವಲಯದಲ್ಲಿರುವ ಯಾವೊಂದು ಸಂಘಟನೆಗಳಾಗಲಿ ಇಂತಹ ಪ್ರಯತ್ನ ಮಾಡುತ್ತಿಲ್ಲ.

ಸಂದಿಗ್ಧ ಸಂದರ್ಭದಲ್ಲಿ ಕೆಎಸ್‍ಎಫ್‍ಸಿ ಮೂಲಕ ಹಣಕಾಸು ನೆರವು ನೀಡುವಂತಹ ಯಾವುದೇ ಹೊಸ ಯೋಜನೆಗಳನ್ನು ಸರ್ಕಾರವು ಕೂಡ ರೂಪಿಸಿಲ್ಲ. ಈ ಹಿಂದೆ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ನವ ಮಹಿಳಾ ಉದ್ಯಮಿಗಳಿಗೆ ಶೇ.4ರಷ್ಟು ಆರ್ಥಿಕ ನೆರವು ನೀಡುವ ಯೋಜನೆಯನ್ನು ಕೆಎಸ್‍ಎಫ್‍ಸಿ ರೂಪಿಸಿತ್ತು. ಇದನ್ನು ಶೇ.6ಕ್ಕೆ ಏರಿಸುವ ಚಿಂತನೆ ಇತ್ತು. ಆದರೆ, ಇದಾವುದೂ ಜಾರಿಯಾದಂತೆ ಕಂಡುಬರುತ್ತಿಲ್ಲ.

ಈ ಬಗ್ಗೆ ಕೈಗಾರಿಕಾ ವಲಯದ ದಿಗ್ಗಜರಿಗಾಗಲಿ, ಸಂಬಂಸಿದ ಸಚಿವರಿಗಾಗಲಿ ಯಾವುದೇ ಕಾಳಜಿ ಇದ್ದಂತಿಲ್ಲ. ಈಗಲಾದರೂ ರಾಜ್ಯ ಹಣಕಾಸು ಸಂಸ್ಥೆ (ಕೆಎಸ್‍ಎಫ್‍ಸಿ) ನೆರವಿಗೆ ಮುಂದಾಗಬೇಕು.

Facebook Comments

Sri Raghav

Admin