ಶಿವಮೊಗ್ಗದಲ್ಲಿ ಕೈಗಾರಿಕೆಗಳ ಸ್ಥಾಪನೆ : ಮೂಲಭೂತ ಸೌಕರ್ಯಗಳಿಗೆ ಆಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.19- ರಾಜ್ಯದ ವಿವಿಧ ಭಾಗಗಳಲ್ಲಿರುವಂತೆ ಶಿವಮೊಗ್ಗ ಜಿಲ್ಲೆಯಲ್ಲೂ ಕೂಡ ಕೈಗಾರಿಕೆ ಮೂಲ ಸೌಕರ್ಯ ಕೊರತೆಯಿಂದ ಬಳಲುತ್ತಿದ್ದು, ಉತ್ಪಾದನೆಯಲ್ಲಿ ಬೆಳವಣಿಗೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ಮುಂದಾಗಬೇಕು ಎಂದು ಕಾಸಿಯಾ ಅಧ್ಯಕ್ಷ ಕೆ.ಬಿ.ಅರಸಪ್ಪ ಹೇಳಿದ್ದಾರೆ.

ಎಂಎಸ್‍ಎಂಇಗಳು ಎದುರಿಸುತ್ತಿ ರುವ ಸಮಸ್ಯೆಗಳನ್ನು ನೇರವಾಗಿ ಅರ್ಥ ಮಾಡಿಕೊಳ್ಳುವ ಹಾಗೂ ರಾಜ್ಯದ ವಿವಿಧ ಭಾಗಗಳಲ್ಲಿ ಉತ್ಪಾದನೆಯನ್ನು ಉತ್ತೇಜಿಸುವ ಉದ್ದೇಶದಿಂದ ಜಿಲ್ಲೆಗಳು ಹಾಗೂ ವಿವಿಧ ಪ್ರದೇಶಗಳಿಗೆ ಕಾಸಿಯಾ ಭೇಟಿ ನೀಡುತ್ತಿರುವುದರ ಅಂಗವಾಗಿ ಇಂದು ಶಿವಮೊಗ್ಗಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ದೀರ್ಘಕಾಲೀನ ಹಿತಾಸಕ್ತಿ ಕೊರತೆಗಳನ್ನು ಸರಿಪಡಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಮಾಚೇನಹಳ್ಳಿ ಕೈಗಾರಿಕೆಗಳ ಸಂಘವು ಈಗಾಗಲೇ ಸರ್ಕಾರದೊಂದಿಗೆ ಚರ್ಚಿಸಿದೆ. ರೀಕ್ಲೇಮ್ಡ್ ಸಿಲಿಕಾನ್ ಬಳಸಿಕೊಂಡು ಪೌಂಡ್ರಿ ಕ್ಲಸ್ಟರ್ ಸ್ಥಾಪಿಸುತ್ತಿರುವ ಸಂಘಕ್ಕೆ ರಾಜ್ಯದಿಂದ ಎಲ್ಲ ರೀತಿಯ ಬೆಂಬಲ ಅಗತ್ಯವಿದೆ. 20 ಕೋಟಿ ರೂ.ಗಳ ಕ್ಲಸ್ಟರ್ ಸ್ಥಾಪನೆ ಪ್ರಸ್ತಾವನೆಯನ್ನು ಎಂಸಿಎಇ ಸಚಿವಾಲಯಕ್ಕೆ ಕೆಎಸ್‍ಟಿಯು ಮೂಲಕ ಧನ ಸಹಾಯಕ್ಕೆ ಅರ್ಜಿ ಸಲ್ಲಿಸಲಾಗುತ್ತಿದ್ದು, ರಾಜ್ಯಸರ್ಕಾರ ಅಗತ್ಯವಾದ ಮೇಲಾಧಾರ ಮತ್ತು ಬೆಂಬಲ ನೀಡಬೇಕು. ಘನತ್ಯಾಜ್ಯವನ್ನು ಗೊತ್ತುಪಡಿಸಿದ ಕ್ವಾರಿಗೆ ಸಾಗಿಸಲು ಮಾಚೇನಹಳ್ಳಿ ನಿದಿಗೆಯಿಂದ 100 ಅಡಿ ರಸ್ತೆಯನ್ನು ಅಭಿವೃದ್ಧಿಪಡಿಸಬೇಕಿದೆ.

ಹೆಚ್ಚಿನ ಹೂಡಿಕೆಗಳಿಗೆ ಸಹಾಯ ಮಾಡಲು ಮತ್ತು ರಫ್ತುಗಳ ಬೆಳವಣಿಗೆಗೆ ವಾತಾವರಣವನ್ನು ಸ್ಪರ್ಧಾತ್ಮಕವಾಗಿಸಲು ಈ ವಸಾಹತುಗಳನ್ನು ಮುಖ್ಯವಾಗಿ ಎಂಎಸ್‍ಎಂಇಗಳ ಕಾರ್ಮಿಕರಿಗೆ ವಸತಿ ಮತ್ತು ಇತರ ಅಗತ್ಯವಾದ ಸೌಲಭ್ಯಗಳೊಂದಿಗೆ ಟೌನ್‍ಶಿಪ್ ಅಭಿವೃದ್ಧಿಪಡಿಸಬೇಕಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಒಟ್ಟಾರೆ ಅಭಿವೃದ್ಧಿಗೆ ವಸಾಹತುಗಳಲ್ಲಿ ಉತ್ಪಾದನೆಯನ್ನು ಬೆಂಬಲಿಸಲು ಆನ್ಸಿಲರಿ ಘಟಕಗಳ ಅಭಿವೃದ್ಧಿಗೆ 140 ಎಕರೆ ಬಳಕೆಯಾಗದ ವಿವಾದಿತ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬೇಕು. ಕಾರ್ಮಿಕರಿಗೆ ವಸತಿ ಸೌಲಭ್ಯ ಒದಗಿಸಲು ರಾಜ್ಯ ಸರ್ಕಾರ ಧನ ಸಹಾಯ ಒದಗಿಸಬೇಕು. ಶಿವಮೊಗ್ಗದಲ್ಲಿ  ಸ್ಟಾರ್ಟ್ ಅಪ್ ಮತ್ತು ಹೊಸ ಉದ್ಯಮಿಗಳಿಗೆ ಯಾವುದೇ ಕೈಗಾರಿಕಾ ಭೂಮಿ ಲಭ್ಯವಿರುವುದಿಲ್ಲ.

ಸರ್ಕಾರವು ಹೊಸ ಕೈಗಾರಿಕೆಗಳೊಂದಿಗೆ ಉದ್ದೇಶಿತ ಹೊಸ ವಿಮಾನ ನಿಲ್ದಾಣ ಸಮೀಪವಿರುವ ಸೂಕ್ತವಾದ ಭೂಮಿಯನ್ನು ಕೆಐಎಡಿಬಿ ಮೂಲಕ ಗುರುತಿಸಿ ಅದನ್ನು ಅಭಿವೃದ್ಧಿ ಪಡಿಸಬೇಕು ಹಾಗೂ ಮಹಿಳಾ ಉದ್ಯಮಿಗಳಿಗೆ ಕನಿಷ್ಟ 50 ಎಕರೆ ಜಾಗ ಮೀಸಲಿಡಬೇಕು ಎಂದರು. ಎಂಎಸ್‍ಎಂಇಗಳ ಉತ್ಪನ್ನಗಳಿಗೆ ಮಾರುಕಟ್ಟೆ ಪುನರುಜ್ಜೀವಗೊಳಿಸುವ ಆವಶ್ಯಕತೆ ಇದೆ. ಸಂಘಟಿತ ಸರಕು ಸಂಗ್ರಹಣೆಯಿಂದ ಎಂಎಸ್‍ಎಂಇಗಳಿಗೆ ಹೆಚ್ಚಿನ ಸಹಾಯ ದೊರಕಲಿದೆ. ಸರ್ಕಾರದ ಸಹಾಯದಿಂದ ಸಮಸ್ಯೆಗಳನ್ನು ಪರಿಹರಿಸಲು ಕಾಸಿಯಾ ಸ್ಥಳೀಯ ಸಂಘ-ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತಿದೆ. ಕೋವಿಡ್ ಸಾಂಕ್ರಾಮಿಕ ವ್ಯಾಧಿಯಿಂದ ಉಂಟಾಗಿರುವ ಸಮಸ್ಯೆಗಳ ಪರಿಹಾರಕ್ಕೆ ಕಾಸಿಯಾ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೊಂದಿಗೆ ನಿರಂತರ ಮಾತುಕತೆ ನಡೆಸುತ್ತಿದೆ.

ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ನಿರ್ಣಾಯಕ ಆರೋಗ್ಯ ಮೂಲ ಸೌಕರ್ಯ ಮತ್ತು ನಗರ ವಸತಿ ಮತ್ತು ಕೊಳಗೇರಿ ಅಭಿವೃದ್ಧಿಗೆ ಹೆಚ್ಚಿನ ಹೂಡಿಕೆ ಮಾಡುವುದರಿಂದ ಸಾಕಷ್ಟು ಉದ್ಯೋಗ ಸೃಷ್ಟಿಯಾಗಿದೆ. ಉತ್ಪನ್ನಗಳು ಮತ್ತು ಸೇವೆಗಳಿಗೆ ಬೇಡಿಕೆಯನ್ನು ಹೆಚ್ಚಿಸಲು ಸಹಾಯವಾಗುತ್ತದೆ ಎಂದು ಹೇಳಿದರು.

ಬಿಕ್ಕಟ್ಟಿನ ಅವಧಿಯಲ್ಲಿ ಉದ್ಯಮಿಗಳಿಗೆ ವಿಶೇಷವಾಗಿ ವಿದ್ಯುತ್ ತೆರಿಗೆ ವಿಳಂಬ ಪಾವತಿ ಮೇಲಿನ ಬಡ್ಡಿ ಮನ್ನಾ ಮಾಡಬೇಕು. ವಿದ್ಯುತ್ ಬಿಲ್‍ಗಳ ಪಾವತಿಗಾಗಿ ವಿದ್ಯುತ್ ಸಂಪರ್ಕ ಕಡಿತಗೊಳಿಸಬಾರದು. ಎಲ್ಲ ವರ್ಗದ ಉದ್ಯಮಿಗಳಿಗೆ 2020 ರಿಂದ ಆರು ತಿಂಗಳ ಕಾಲ ನಿಗದಿತ ಮಾಸಿಕ ಶುಲ್ಕವನ್ನು ಮನ್ನಾ ಮಾಡಬೇಕೆಂದು ಅವರು ಒತ್ತಾಯಿಸಿದರು.

ಕಾಸಿಯಾ ವತಿಯಿಂದ ಎಂಎಸ್‍ಎಂಇ ಸಚಿವಾಲಯದೊಂದಿಗೆ ಖರೀದಿದಾರರು, ಮಾರಾಟಗಾರರ ಸಮಾವೇಶ ಆಯೋಜನೆ, ಮುಂಬರುವ 2021ರ ಮೇನಲ್ಲಿ ಅಂತಾರಾಷ್ಟ್ರೀಯ ಉಸ್ತು ಪ್ರದರ್ಶನದಲ್ಲಿ ಬೃಹತ್ ವ್ಯಾಪಾರ ಮೇಳ, ಬಂಡವಾಳ ಹೂಡಿಕೆ ಮತ್ತು ವ್ಯಾವಹಾರಿಕ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಿಸುವುದು, ಜಿಲ್ಲಾವಾರು ವಿಚಾರ ಸಂಕಿರಣ ಮತ್ತು ಕಾರ್ಯಾಗಾರಗಳನ್ನು ಏರ್ಪಡಿಸುವುದು ಸೇರಿದಂತೆ ಕಾಸಿಯಾ ವಿವಿಧ ಸರಣಿ ಕಾರ್ಯ ಕ್ರಮಗಳನ್ನು ಆಯೋಜಿಸುತ್ತಿದೆ ಎಂದು ಹೇಳಿದರು.

Facebook Comments