ಮೇಲುಕೋಟೆ ಅಭಿವೃದ್ಧಿಗೆ ಮುಂದಾದ ಇನ್‍ಫೋಸಿಸ್ ಫೌಂಡೇಷನ್

ಈ ಸುದ್ದಿಯನ್ನು ಶೇರ್ ಮಾಡಿ

Sudha-Murthy--01

ಮೇಲುಕೋಟೆ, ಡಿ.3- ಸರ್ಕಾರದ ಸಹಕಾರದಲ್ಲಿ ಇನ್‍ಫೋಸಿಸ್ ಫೌಂಡೇಷನ್ ಮೇಲುಕೋಟೆಯ ಪಾರಂಪರಿಕ ತಾಣಗಳನ್ನು ಸಂರಕ್ಷಿಸಲು ಸಂಕಲ್ಪ ಮಾಡಿದೆ ಎಂದು ಫೌಂಡೇಷನ್ ಅಧ್ಯಕ್ಷೆ ಸುಧಾಮೂರ್ತಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಸುಂದರ ಸಂಸ್ಕøತಿ, ಪರಂಪರೆ ಹೊಂದಿದ ಕ್ಷೇತ್ರ. ಸಮಗ್ರವಾಗಿ ಅಭಿವೃದ್ಧಿ ಆಗಬೇಕು.

ಇಲ್ಲಿನ ಪಂಚ ಕಲ್ಯಾಣಿ ಸೇರಿದಂತೆ ಪಾರಂಪರಿಕ ಶೈಲಿಯ ಎಲ್ಲಾ ಕೊಳಗಳು, ಮಂಟಪಗಳನ್ನು ಜೀರ್ಣೋದ್ಧಾರಗೊಳಿಸಿ ನಿರಂತರ ನಿರ್ವಹಣೆಗೆ ವ್ಯವಸ್ಥೆ ಮಾಡಲಾಗುತ್ತದೆ. ಮೈಸೂರು ದಸರಾ ವೇಳೆ ಮುಖ್ಯಮಂತ್ರಿಗಳೊಡನೆ ಚರ್ಚೆ ಮಾಡಿದ್ದೇನೆ. ಅವರ ಒಪ್ಪಿಗೆಯ ನಂತರವೇ ಮುಂದಿನ ಯೋಜನೆ ರೂಪಿಸಿದ್ದೇವೆ. ಸರ್ಕಾರ ಮತ್ತು ಫೌಂಡೇಷನ್ ನಡುವೆ ಒಪ್ಪಂದ ಆಗಬೇಕು. ನಂತರ ಸ್ಮಾರಕಗಳ ರಕ್ಷಣೆ ಹಾಗೂ ಭಕ್ತರಿಗೆ ಅನುಕೂಲವಾಗುವ ಕಾಮಗಾರಿ ಆರಂಭಿಸಲಾಗುತ್ತದೆ.

ನಾವು ನಿರ್ವಹಿಸುವ ಕೆಲಸಗಳಿಗೆ ಅನುದಾನದ ಮಿತಿ ನಿಗದಿ ಮಾಡಿಲ್ಲ. ಆದರೆ ಸರ್ಕಾರದ ಸಹಕಾರದಲ್ಲಿ ಪೂರ್ಣ ಪ್ರಮಾಣದ ಅಭಿವೃದ್ಧಿಗೆ ಕೈ ಜೋಡಿಸುತ್ತೇವೆ ಎಂದರು. ಮೇಲುಕೋಟೆಯ ಕಲ್ಯಾಣಿ ಸಮುಚ್ಛಯಕ್ಕೆ ಭೇಟಿ ನೀಡಿದ ಸುಧಾಮೂರ್ತಿ ಮತ್ತೊಮ್ಮೆ ಅಶುಚಿತ್ವ ದರ್ಶನ ಕಂಡು ಅಸಮಾಧಾನ ವ್ಯಕ್ತಪಡಿಸಿದರು. ಭುವನೇಶ್ವರಿ ಮಂಟಪ, ಏಕಶಿಲಾ ಗಣಪ, ಕಲ್ಯಾಣಿಗೆ ನೀರುವ ಬರಲು ಮಾಡಿರುವ ಕಾಲುವೆ, ಅಕ್ಕ-ತಂಗಿಯ ಕೊಳ ವೀಕ್ಷಿಸಿದರು.

ತಕ್ಷಣ ಕಾರ್ಯಾರಂಭ : ಕಲ್ಯಾಣಿಯ ಅಶುಚಿತ್ವ ಕಂಡು ತೀವ್ರ ಬೇಸರ ವ್ಯಕ್ತಪಡಿಸಿದ ಸುಧಾಮೂರ್ತಿ ಕಲ್ಯಾಣಿ ಆವರಣದಲ್ಲಿರುವ ಪೆಟ್ಟಿಗೆ ಅಂಗಡಿಗಳನ್ನು ಸ್ಥಳಾಂತರ ಮಾಡಿಕೊಟ್ಟರೆ ಸರ್ಕಾರದ ಒಪ್ಪಂದ ಪತ್ರ ಬರುವ ಮುನ್ನ ತಕ್ಷಣ ಕಾಂಪೌಂಡ್ ನಿರ್ಮಿಸುವ ಕಾರ್ಯಕ್ಕೆ ಚಾಲನೆ ನೀಡುತ್ತೇವೆ. ಗಣಪನ ಸನ್ನಿಧಿಯಿಂದ ಕಲ್ಯಾಣಿಗೆ ಸಂಪರ್ಕ ಕಲ್ಪಿಸುವ ಕಾಲುವೆಗಳನ್ನು ಸ್ವಚ್ಚಗೊಳಿಸಿ ದುರಸ್ತಿ ಮಾಡುತ್ತೇವೆ ಎಂದರು.  ಇದೇ ವೇಳೆ ಅಕ್ಕ-ತಂಗಿಯ ಕೊಳದಲ್ಲಿ ಉತ್ತಮವಾಗಿ ಸ್ವಚ್ಛತಾ ಕಾರ್ಯ ಮಾಡಿದ್ದ ಜೊತೆ ಫೋಟೋ ತೆಗೆಸಿಕೊಂಡು ಸ್ವಚ್ಛತಾ ಕಾರ್ಯ ಶ್ಲಾಘಿಸಿದರು.

ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ಮೇಲುಕೋಟೆಯ ಅಭಿವೃದ್ಧಿಗೆ ಇನ್‍ಫೋಸಿಸ್ ಕೈಗೊಳ್ಳುವ ಎಲ್ಲಾ ಅಭಿವೃದ್ಧಿ ಕಾಮಗಾರಿಗಳಿಗೆ ಸರ್ಕಾರ ಜಿಲ್ಲಾಡಳಿತ ಸಂಪೂರ್ಣ ಸಹಕಾರ ನೀಡುತ್ತದೆ. ತಿರುಪತಿಗೆ ಸಮಾನ ಮಹತ್ವ ಹೊಂದಿರುವ ಕ್ಷೇತ್ರವನ್ನು ಮಾದರಿ ಧಾರ್ಮಿಕ ಕ್ಷೇತ್ರವಾಗಿ ಪರಿವರ್ತಿಸಲಾಗುತ್ತದೆ. ವಿವಿಧ ಇಲಾಖೆಗಳ ವತಿಯಿಂದಲೂ ಅಭಿವೃದ್ಧಿ ಕಾಮಗಾರಿಗಳು ಆರಂಭವಾಗಲಿದೆ ಎಂದರು.

ಪ್ರವಾಸೋದ್ಯಮ ಇಲಾಖೆ ಸಚಿವ ಸಾ.ರಾ.ಮಹೇಶ್ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಪ್ರವಾಸೋಧ್ಯಮ ಇಲಾಖೆ ಮತ್ತು ಪ್ರಾಚ್ಯ ವಸ್ತು ಇಲಾಖೆಯ ಹೆಚ್ಚಿನ ಅನುದಾನಗಳನ್ನು ಮೇಲುಕೋಟೆಯ ಅಭಿವೃದ್ಧಿಗೆ ಮೀಸಲಿಡಲಾಗುತ್ತದೆ. ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಿ ಉದ್ಯೋಗ ಸೃಷ್ಟಿ ಮಾಡಲಾಗುತ್ತದೆ. ದೇವಾಲಯ, ಸ್ಮಾರಕಗಳ ಸುತ್ತಲ ಪರಿಸರವನ್ನು ಮುಜರಾಯಿ, ರಾಜ್ಯ ಪ್ರಾಚ್ಯ ವಸ್ತು ಇಲಾಖೆಯ ಅಧಿಕಾರಿಗಳು ಸ್ವಚ್ಚವಾಗಿಟ್ಟುಕೊಳ್ಳಲು ಮುಂದಾಗಬೇಕು. ಇಲ್ಲದಿದ್ದರೆ ಕಠಿಣ ಕ್ರಮ ಜರುಗಿಸಬೇಕಾಗುತ್ತದೆ ಎಂದೂ ಎಚ್ಚರಿಸಿದರು.  ಜಿಲ್ಲಾಧಿಕಾರಿ ಮಂಜುಶ್ರೀ, ಜಿಪಂ ಮುಖ್ಯ ಕಾರ್ಯದರ್ಶಿ ಯಾಲಕ್ಕೀಗೌಡ, ಪ್ರಾಚ್ಯ ವಸ್ತು ಇಲಾಖೆಯ ಆಯುಕ್ತ ವೆಂಕಟೇಶ್, ಉಪ ವಿಭಾಗಾಧಿಕಾರಿ ಶೈಲಜಾ, ತಹಸೀಲ್ದಾರ್ ಹನುಮಂತರಾಯಪ್ಪ, ದೇವಾಲಯದ ಕಾರ್ಯ ನಿರ್ವಾಹಕ ಅಧಿಕಾರಿ ನಂಜೇಗೌಡ ಇದ್ದರು.

Facebook Comments

Sri Raghav

Admin