ವಿಶ್ವಕಪ್ ನಲ್ಲಿ ಗಾಯದ ಸಮಸ್ಯೆಗೆ ಬೆಲೆ ತೆತ್ತ ಪ್ರಮುಖ ತಂಡಗಳು..!

ಈ ಸುದ್ದಿಯನ್ನು ಶೇರ್ ಮಾಡಿ

ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಲ್ಗೊಂಡಿರುವ ಬಹುತೇಕ ತಂಡಗಳ ಪ್ರಮುಖ ಆಟಗಾರರು ಗಾಯದ ಸಮಸ್ಯೆಯಿಂದ ಬಳಲುತ್ತಿರುವುದು ಪ್ರಬಲ ತಂಡಗಳ ಭವಿಷ್ಯವನ್ನೇ ಬುಡಮೇಲು ಮಾಡಿದೆ. ಭಾರತ ತಂಡದ ಶಿಖರ್‍ಧವನ್ ಟೂರ್ನಿಯಿಂದಲೇ ಹೊರ ಬಿದ್ದಿದ್ದರೆ, ಭುವನೇಶ್ವರ್‍ಕುಮಾರ್ ಗಾಯಗೊಂಡು ಕೆಲವು ಪಂದ್ಯಗಳಿಂದ ಹೊರಗುಳಿದಿದ್ದು, ಇನ್ನು ಅವರ ಲಭ್ಯತೆ ಬಗ್ಗೆ ಅನುಮಾನಗಳು ಮೂಡಿವೆ.

ಈ ಹಿನ್ನೆಲೆಯಲ್ಲಿ ಆರ್‍ಸಿಬಿ ಪರ ಆಡಿದ್ದ ನವ್‍ದೀಪ್ ಸೈನಿಯನ್ನು ಬದಲಿ ಆಟಗಾರನಾಗಿ ಸ್ಥಾನ ಕಲ್ಪಿಸುವ ಅವಕಾಶಗಳಿದ್ದು ಈಗಾಗಲೇ ಸೈನಿ ನೆಟ್ ಅಭ್ಯಾಸದಲ್ಲಿ ತೊಡಗಿಕೊಂಡಿದ್ದಾರೆ.  ಭಾರತದ ಆಲ್‍ರೌಂಡರ್ ವಿಜಯಶಂಕರ್ ಕೂಡ ಅಭ್ಯಾಸದ ಸಮಯದಲ್ಲಿ ವೇಗಿ ಖಲೀಲ್‍ಅಹಮದ್‍ರ ಬೌಲಿಂಗ್‍ನಲ್ಲಿ ಕಾಲಿನ ಹೆಬ್ಬೆರಳಿಗೆ ಗಾಯಮಾಡಿಕೊಂಡಿದ್ದರು.

ಗಾಯಗೊಂಡ ಹರಿಣಗಳು: ದಕ್ಷಿಣ ಆಫ್ರಿಕಾದ ಭರವಸೆಯ ಆಟಗಾರ ಆಸೀಮ್ ಆಮ್ಲಾ ಕೂಡ ಗಾಯಾಳುವಾಗಿ ಒಂದೆರಡು ಪಂದ್ಯಗಳಿಂದ ಹೊರಗುಳಿದಿದ್ದು ಹರಿಣಗಳ ಸೆಮೀಸ್ ಆಸೆಯೇ ಕಮರಿ ಹೋಗುವಂತೆ ಮಾಡಿತ್ತು. ರಬಾಡ ಕೂಡ ಗಾಯಗೊಂಡು ಒಂದು ಪಂದ್ಯದಿಂದ ಹೊರಬಿದ್ದಿದ್ದರು. ಐಪಿಎಲ್‍ನಲ್ಲಿ ಆರ್‍ಸಿಬಿ ಪರ ಆಡಿದ್ದ ದಕ್ಷಿಣ ಆಫ್ರಿಕಾದ ವೇಗಿ ಡೇನ್‍ಸ್ಟೇನ್ ಭುಜದ ನೋವಿನಿಂದ ಬಳಲಿದ್ದರಿಂದ ಹರಿಣಗಳು ಪ್ರಮುಖ ಬೌಲರ್ ಅನ್ನೇ ಕಳೆದುಕೊಳ್ಳಬೇಕಾಯಿತು.

ಇಂಗ್ಲೆಂಡ್‍ಗೂ ಕಾಡಿದ ಸಮಸ್ಯೆ: ಅತಿಥೇಯ ಇಂಗ್ಲೆಂಡ್‍ಗೂ ಕೂಡ ಗಾಯದ ಸಮಸ್ಯೆ ಕಾಡಿದೆ. ಆರಂಭಿಕ ಆಟಗಾರ ಜೇಸನ್‍ರಾಯ್ ಉತ್ತಮ ಫಾರ್ಮ್‍ನಲ್ಲಿರುವಾಗಲೇ ಗಾಯಗೊಂಡಿದ್ದರಿಂದ ಆ ತಂಡವು ಉತ್ತಮ ಆರಂಭ ದೊರೆಯದೆ ಶ್ರೀಲಂಕಾ ವಿರುದ್ಧ ಹೀನಾಯ ಸೋಲು ಕಂಡಿದೆ.

ಜಸನ್‍ರಾಯ್ ಇಂದು ಸಂಪೂರ್ಣವಾಗಿ ಚೇತರಿಸಿಕೊಳ್ಳದಿರುವುದರಿಂದ ಇಂದು ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಿಂದಲೂ ಹೊರಬಿದ್ದಿದ್ದು ಜೂನ್ 30 ರಂದು ಭಾರತ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಕೂಡಿಕೊಳ್ಳಬಹುದು ಎಂದು ಅಂದಾಜಿಸಲಾಗಿದೆ.

ವಿಶ್ವಕಪ್‍ನ ಆರಂಭಕ್ಕೂ ಮುನ್ನವೇ ಭುಜದ ನೋವಿನಿಂದ ಬಳಲಿದ್ದ ಸ್ಯಾಮ್ ಬಿಲ್ಲಿಂಗ್ಸ್‍ರನ್ನು ಇಂಗ್ಲೆಂಡ್ ತಂಡವು ಆಯ್ಕೆ ಮಾಡಿಕೊಂಡಿರಲಿಲ್ಲ. ಅಭ್ಯಾಸದ ಪಂದ್ಯಗಳಲ್ಲೂ ಕೂಡ ಇಂಗ್ಲೆಂಡ್‍ನ ನಾಯಕ ಇಯಾನ್ ಮಾರ್ಗನ್ ಹಾಗೂ ವೇಗಿ ಮಾರ್ಕ್ ವುಡ್À ಕೂಡ ಗಾಯಗೊಂಡಿದ್ದರಿಂದ ವುಡ್ ವಿಶ್ವಕಪ್ ಅಭಿಯಾನ ಆರಂಭಿಸಿದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದರು.

ಸಿಂಹಳೀಯರಿಗೂ ಕಾಟ: ಶ್ರೀಲಂಕಾದ ಯುವ ಅಲೌಂಡರ್ ಆವಿಷ್ಕಾ ಫರ್ನಾಂಡೋ ದಕ್ಷಿಣ ಆಫ್ರಿಕಾದ ವಿರುದ್ಧ ನಡೆದ ಅಭ್ಯಾಸ ಪಂದ್ಯದಲ್ಲಿ ಮೊಣಕೈಗೆ ಗಾಯಮಾಡಿಕೊಂಡಿದ್ದರಿಂದ ನ್ಯೂಜಿಲೆಂಡ್ ವಿರುದ್ಧದ ಮೊದಲ ಮೊದಲ ಪಂದ್ಯ ಸೇರಿದಂತೆ ಕೆಲವು ಪಂದ್ಯಗಳಿಂದ ಹೊರಗುಳಿದಿದ್ದರು, ಇಂಗ್ಲೆಂಡ್ ವಿರುದ್ಧ ವ 49 ರನ್ ಗಳಿಸಿದ್ದ ಫರ್ನಾಂಡೋ ಗಾಯಗೊಳ್ಳದಿದ್ದರೆ ಆ ತಂಡವು ಒಂದೆರಡು ಪಂದ್ಯಗಳನ್ನು ಗೆಲ್ಲಬಹುದಾಗಿತ್ತು.

ಬೆಂಚ್ ಕಾದ ಸ್ಟೋನಿಸ್: ಭಾರತ ವಿರುದ್ಧದ ಪಂದ್ಯದ ವೇಳೆ ಫೀಲ್ಡಿಂಗ್ ಮಾಡುವಾಗ ಆಸ್ಟ್ರೇಲಿಯಾದ ಅಲ್‍ರೌಂಡರ್ ಮಾಕ್ರ್ಯೂಸ್ ಸ್ಟೋನಿಸ್ ಗಾಯಗೊಂಡಿದ್ದರಿಂದ ಪಾಕಿಸ್ತಾನ ಹಾಗೂ ಶ್ರೀಲಂಕಾ ವಿರುದ್ಧದ ಪಂದ್ಯಗಳಲ್ಲಿ ಪೆವಿಲಿಯನ್‍ಗೆ ಸೀಮಿತವಾಗಿ ಬೆಂಚ್ ಕಾಯುವಂತಾಯಿತು.

ಕಮರಿದ ವಿಂಡೀಸ್ ಸೆಮೀಸ್ ಆಸೆ: ಸೆಮಿಫೈನಲ್‍ನ ಕನಸನ್ನು ಜೀವಂತವಾಗಿರಿಸಿಕೊಂಡಿರುವ ಕೆರಿಬಿಯನ್ ನಾಡಿನ ಅಲ್‍ರೌಂಡರ್ ಆ್ಯಂಡ್ರೂರಸಲ್ ಕೂಡ ಹಿಮ್ಮಡಿ ನೋವಿನಿಂದ ಬಳಲುತ್ತಿದ್ದು ಬಹುತೇಕ ವಿಶ್ವಕಪ್ ಪಂದ್ಯಗಳಿಂದ ಹೊರಬಿದ್ದಿದ್ದಿರುವುದರ ಜೊತೆಗೆ ವಿಂಡೀಸ್‍ನ ಸೆಮಿಫೈನಲ್ ಕನಸು ಕೂಡ ಕಮರಿಹೋಗುವಂತೆ ಮಾಡಿದೆ.

ಐಪಿಎಲ್‍ನಲ್ಲಿ ಅದ್ಭುತ ಪ್ರದರ್ಶನ ತೋರಿಸಿದ್ದರಿಂದ ವಿಂಡೀಸ್ ರಸಲ್‍ರನ್ನು ವಿಶ್ವಕಪ್‍ನಲ್ಲಿ ಸ್ಥಾನ ನೀಡಿತ್ತು, ರಸಲ್ ಆಡಿದ 4 ಪಂದ್ಯಗಳಿಂದ 5 ವಿಕೆಟ್‍ಗಳನ್ನು ಕಬಳಿಸಿದ್ದಾರೆ ವಿಂಡೀಸ್ ಪಾಯಿಂಟ್ಸ್ ಪಟ್ಟಿಯಲ್ಲಿ 8ನೆ ಸ್ಥಾನದಲ್ಲಿದ್ದು ಭಾರತ, ಆಫ್ಘಾನಿಸ್ಥಾನ, ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಗೆಲ್ಲುವ ಮೂಲಕ ಸೆಮಿಫೈನಲ್‍ನತ್ತ ಹೆಜ್ಜೆ ಇಡಬೇಕಾಗಿರುವಾಗಲೇ ರಸಲ್ ಗಾಯಾಳುವಾಗಿರುವುದು ಆ ತಂಡವನ್ನು ಕಾಡಲಿದೆ.

ರಸಲ್ ಗಾಯಗೊಂಡಿರುವುದರಿಂದ ಅವರ ಸ್ಥಾನವನ್ನು ಯುವ ಆಟಗಾರ ಸುನೀಲ್ ಆ್ಯಂಬರೀಶ್ ತುಂಬಲಿದ್ದಾರೆ.  ವಿಶ್ವಕಪ್‍ನಲ್ಲಿ ತಂಡಗಳು ಸೆಮೀಸ್‍ನತ್ತ ಹೆಜ್ಜೆ ಹಾಕುತ್ತಿದ್ದು ಇನ್ನಾದರೂ ಗಾಯದ ಸಮಸ್ಯೆಯಿಂದ ಭಾರೀ ಬೆಲೆ ತೆತ್ತದಿರಲಿ.

-ಜಯ ಪ್ರಕಾಶ್ 

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ