ಕೀಟ ವಿಸ್ಮಯ ಲೋಕದಲ್ಲೊಂದು ಸುತ್ತು

ಈ ಸುದ್ದಿಯನ್ನು ಶೇರ್ ಮಾಡಿ

# ಚಂದ್ರಕಲಾ
ಕಾಳಿದಾಸನ ಶಾಕುಂತಲೆಯಲ್ಲಿ ಬರುವ ದುಂಬಿ ಅವರಿಬ್ಬರ ನಡುವಿನ ಪ್ರೇಮಾಂಕುರಕ್ಕೆ ಝೇಂಕಾರದ ಮೂಲಕ ಓಂಕಾರ ಹಾಡಿದರೆ ಅತ್ತ ಪಂಪ ಕವಿ ಮರಿದುಂಬಿಯಾಗಿ, ಮೇಣ್ ಕೋಗಿಲೆಯಾಗಿ ಪುಟ್ಟುವುದು ನಂದನದೊಳ್ ಬನವಾಸಿ ದೇಶದೊಳ್ ಎಂದೆನ್ನುತ್ತಾ ಬನವಾಸಿ ದೇಶದ ನಂದನದಲ್ಲಿ ಮರಿದುಂಬಿಯಾಗಿ ಅಥವಾ ಕೋಗಿಲೆಯಾಗಿಯಾದರೂ ಹುಟ್ಟಬೇಕೇಂಬ ಆಶಯ ವ್ಯಕ್ತಪಡಿಸುತ್ತಾನೆ.

ಇನ್ನು ನಮ್ಮ ವರಕವಿ ಬೇಂದ್ರೆಯವರು ಪಾತರಗಿತ್ತಿ ಪಕ್ಕ ನೋಡಿದೇನ ಅಕ್ಕಾ.. ಹಸಿರು ಹಚ್ಚಿ ಚುಚ್ಚಿ ಮೇಲಕ್ಕರಿಶಿಣ ಹಚ್ಚಿ ಅಂತ ಚಿಟ್ಟೆಯ ವರ್ಣನೆ ಮಾಡಿದ್ದಾರೆ. ನಿಸರ್ಗದೊಂದಿಗೆ ಹಾಸುಹೊಕ್ಕಾಗಿರುವ ದುಂಬಿ, ಪತಂಗ, ಚಿಟ್ಟೆ, ಜೇಡಗಳಂತಹ ಕೀಟಗಳ ಭಾವಯಾನವನ್ನು ನಮ್ಮ ಕವಿಗಳು ಮತ್ತು ಕಬ್ಬಿಗರು ತಮ್ಮ ಕವಿತೆ ಕಾವ್ಯಗಳಲ್ಲಿ ಕಟ್ಟಿಕೊಟ್ಟರೆ ಇಂದಿನ ಕೀಟ ವಿಜ್ಞಾನಿಗಳು, ಕೀಟ ಸಂಶೋಧಕರು ಅವುಗಳ ಸ್ಥೂಲ ಪರಿಚಯವನ್ನು ಕೀಟ ವಿಸ್ಮಯ ಎಂಬ ಕೀಟ ಪ್ರದರ್ಶನದ ಮೂಲಕ ಜನಸಾಮಾನ್ಯರಿಗೆ ಮಾಡಿಸಿದ್ದಾರೆ.

ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಕೀಟಶಾಸ್ತ್ರ ವಿಭಾಗವು 3 ದಿನಗಳ ಕಾಲ ಕೀಟ ವಿಸ್ಮಯ ಎಂಬ ಕೀಟ ಪ್ರದರ್ಶನವನ್ನು ಜಿಕೆವಿಕೆಯ ಡಾ.ಬಾಬು ರಾಜೇಂದ್ರ ಪ್ರಸಾದ್ ಅಂತರಾಷ್ಟ್ರೀಯ ಸಭಾಂಗಣದಲ್ಲಿ ಆಯೋಜಿಸುವ ಮೂಲಕ ಕೀಟಗಳ ಬಗ್ಗೆ ಪರಿಚಯ ಮಾದರಿಯ ಕೀಟಗಳು, ಅವುಗಳ ಪ್ರಭೇದಗಳು, ಜೀವನ ಚಕ್ರ, ಆಹಾರ ಕ್ರಮ, ಸಂವಹನ ಕ್ರಮ, ಗುಣಲಕ್ಷಣಗಳ ಸಮಗ್ರ ಮಾಹಿತಿ ಈ ಪ್ರದರ್ಶನದಲ್ಲಿ ಕಂಡು ಬಂದಿತ್ತು.

ಒಟ್ಟು ಮೂರು ಸಾವಿರ ರೀತಿಯ ಕೀಟಗಳ ಸಂಗ್ರಹಣೆ, ಛಾಯಾಚಿತ್ರ ಪ್ರದರ್ಶನ, ಸೊಳ್ಳೆ, ನೊಣ, ಜಿರಳೆ, ಚಿಟ್ಟೆಗಳ ಜೀವನಕ್ರಮದ ವಿವಿಧ ಹಂತಗಳ ನೈಜ ಸಂರಕ್ಷಣೆಯ ಮಾದರಿಗಳಲ್ಲದೆ ಕೃಷಿಗೆ ಹಾನಿ ಮಾಡುವ ಕೀಟಗಳು, ಬೆಳೆ ಸಂರಕ್ಷಿಸುವ ಕೀಟಗಳ ಪರಿಚಯ ಮಾಡಿಕೊಡಲಾಯಿತು. ಗೋಲಿನಾಥ್ ದುಂಬಿಯ ಆಕರ್ಷಕವಾದ ಮಾದರಿ. ಎಲ್ಲರ ಗಮನ ಸೆಳೆಯಿತು. ಇದು ಪ್ರಪಂಚದ ಅತ್ಯಂತ ಭಾರವಾದ ಕೀಟ. ದಕ್ಷಿಣ ಆಫ್ರೀಕಾದ ಉಷ್ಣವಲಯದ ಕಾಡುಗಳಲ್ಲಿ ಕಂಡುಬರುವ ವಿಸ್ಮಯಕಾರಿ ಕೀಟ ಇದು.

# ಕೀಟಗಳ ನಡುವೆ ಸಂವಹನ ಕ್ರಿಯೆ:
ಸಂವಹನಕ್ಕಾಗಿ ಕೀಟಗಳು ತಮ್ಮದೇ ಆದ ಶೈಲಿಯನ್ನು ರೂಢಿಸಿಕೊಂಡಿರುತ್ತವೆ. ಜೇನುಹುಳುಗಳು ನರ್ತನದ ಮೂಲಕ ಸಂವಹನ ನಡೆಸುವುದು ಕೌತುಕ. ತಮ್ಮ ಗೂಡಿನ ಇತರ ಹುಳುಗಳಿಗೆ ವೃತ್ತಾಕಾರವಾಗಿ ಸೂರ್ಯನ ದಿಕ್ಕನ್ನು ಅವಲಂಬಿಸಿ ನೃತ್ಯ ಮಾಡಿದರೆ ಆಹಾರವು ಅಲ್ಲೇ 100 ಮೀಟರ್ ಅಂತರದಲ್ಲಿದೆಯೆಂದೂ, ಹೊಟ್ಟೆ ಅಲುಗಾಡಿಸುತ್ತಾ ಮಾಡುವ ನರ್ತನವು 100 ಮೀಟರ್ ಗಿಂತಲೂ ದೂರದಲ್ಲಿ ಆಹಾರವಿದೆಯೆಂಬ ಅಂತರವನ್ನು ಸೂಚಿಸುತ್ತದೆ.

ಇದೇ ರೀತಿ ಮಿಡತೆ, ಜೀರುಂಡೆ, ಕ್ರಿಕೆಟ್ ಕೀಟಗಳು ಹೊರಡಿಸುವ ಶಬ್ಧವು ರೆಕ್ಕೆಯ ಮೂಲಕ ಹೊರಹೊಮ್ಮುವುದಾಗಿದ್ದು ತಮ್ಮ ಸಂಗಾತಿಗಳನ್ನು ಕರೆಯುವ ಸಂಕೇತವೂ ಆಗಿದೆ. ಬೇಂದ್ರೆಯವರು ಹೇಳುವಂತೆ ಇದು ಒಂದು ರೀತಿಯ ಸಂಗೀತವೂ ಹೌದು.ಮಿಂಚುಹುಳುಗಳ ಹೊಟ್ಟೆಯಲ್ಲಿ ಲ್ಯೂಸಿಫೆರಿನ್ ಎಂಬ ರಾಸಾಯನಿಕ ವಸ್ತುವಿನ ಆಮ್ಲೀಕರಣದಿಂದಾಗಿ ಬೆಳಕು ಹೊಮ್ಮುವುದಲ್ಲದೆ ಇದರಿಂದ ಆಹಾರ ಬೇಟೆಯನ್ನು ಆಕರ್ಷಿಸುತ್ತದೆ.

ಇನ್ನು ಹೆಣ್ಣು ಪತಂಗವು ಒಂದು ಕಡೆ ಕುಳಿತು ಸೆಕ್ಸ್ ಫೆರೋಮೇನ್ ಅಥವಾ ಲಿಂಗಾಕರ್ಷಕ ರಾಸಾಯನಿಕವನ್ನು ಬಿಡುಗಡೆಗೊಳಿಸುತ್ತದೆ. ಇತ್ತ ಪುರುಷ ಪತಂಗವು ತನ್ನ ಕುಡಿ ಮೀಸೆಗಳಿಂದ ಆ ರಾಸಾಯನಿಕವನ್ನು ಗ್ರಹಿಸಿ ಆ ದಿಕ್ಕಿನತ್ತ ಸಾಗುತ್ತದೆ.

# ಕೀಟಗಳು ಮತ್ತು ತಂತ್ರಜ್ಞಾನದ ಆವಿಷ್ಕಾರ:
ಕೀಟಗಳಿಂದ ಸ್ಫೂರ್ತಿ ಪಡೆದು ಅದರ ದೇಹ ರಚನೆ ಮತ್ತು ರೆಕ್ಕೆಗಳ ಆಧಾರಿತವಾಗಿ ವಿಮಾನ, ಹೆಲಿಕಾಪ್ಟರ್, ಡ್ರೋನ್ ಕ್ಯಾಮೆರಾ, ವಾಟರ್ ಸ್ಪೈಡರ್‍ನಿಂದ ಪ್ರೇರೇಪಿತವಾಗಿ ಸ್ಕಿಮ್ಮಿಂಗ್ ರೋಬೋಟ್ ಗಳ ಆವಿಷ್ಕಾರಗಳಾಗಿವೆ. ಖಾದ್ಯಗಳಾಗಿ ಕೀಟಗಳು: ಭಾರತದಲ್ಲಿ ಹಲವೆಡೆ ಕೆಲವು ನಿರ್ದಿಷ್ಟ ಹುಳುಗಳು ಅಂದರೆ ಗೆದ್ದಲುಹುಳುಗಳನ್ನು ಹುರಿದು ಉಪ್ಪು, ಖಾರ ಬೆರೆಸಿ ಆಹಾರವನ್ನಾಗಿ ಬಳಸಲಾಗುತ್ತದೆ.

ಇವು ಹೆಚ್ಚು ಪ್ರೋಟೀನ್ ಯುಕ್ತವಾಗಿದ್ದು ಆರೋಗ್ಯಕ್ಕೆ ಪೂರಕವಾದುದಾಗಿದೆ. ಅದರಲ್ಲೂ ರಾಣಿ ಗೆದ್ದಲು ಎಲ್ಲದಕ್ಕಿಂತ ಹೆಚ್ಚಿನ ಪ್ರೋಟೀನ್ ಅಂಶಗಳನ್ನು ಒಳಗೊಂಡಿರುತ್ತದೆ ಎನ್ನಲಾಗಿದೆ. ಇನ್ನು ಕರಾವಳಿಯ ಕಡೆ ಸಿಗುವ ಕೆಂಜಿಗ ಇರುವೆಗಳಿಂದ ಚಟ್ನಿ ತಯಾರಿಸಿಯೂ ಬಳಸಲಾಗುತ್ತದೆ.

ಅಪರಾಧ ನಡೆದ ಸ್ಥಳ, ಸುತ್ತಮುತ್ತಲ ಪ್ರದೇಶ ಮತ್ತು ದೇಹದ ಮೇಲಿನ ಕ್ರಿಮಿ-ಕೀಟಗಳ ಆಧಾರದ ಮೇಲೆ ಅಪರಾಧ ನಡೆದ ಕಾಲಮಾನ ಇತ್ಯಾದಿಗಳನ್ನು ಪತ್ತೆ ಹಚ್ಚಬಹುದು. ಈ ನಿಟ್ಟಿನಲ್ಲಿ ವಿಧಿವಿಜ್ಞಾನ ಪರೀಕ್ಷೆಯಲ್ಲಿ ಕೀಟಶಾಸ್ತ್ರವು ಅಪರಾಧದ ಪತ್ತೆಗೆ ಸಹಕಾರಿಯಾಗಿದೆ.

ಕೀಟಗಳ ಆಧಾರಿತವಾದ ರಾಶಿ ಚಕ್ರ:
ಕೀಟಗಳ ಆಧಾರಿತವಾದ ರಾಶಿಚಕ್ರವು ಪ್ರಾಚೀನ ಜ್ಯೋತಿಷ್ಯ ಪದ್ಧತಿಯಾಗಿದೆ. ಇದು ದಕ್ಷಿಣ ಅಮೆರಿಕಾದ ಆಂಡೀಸ್ ನಾಗರೀಕತೆಯಲ್ಲಿ ಆರಂಭಗೊಂಡಿದೆ. ರಾಶಿ ಚಕ್ರದ 12 ರಾಶಿಗಳಲ್ಲಿ ಒಂದೊಂದು ರಾಶಿಗೆ ಒಂದೊಂದು ಕೀಟವನ್ನು ಗುರುತಿಸಲಾಗಿದೆ. ಜನ್ಮ ದಿನಕ್ಕನುಗುಣವಾಗಿ ಮನುಷ್ಯನ ಗುಣ ಸ್ವಭಾವಗಳಿಗೆ ಒಂದೊಂದು ಕೀಟದ ಗುಣ ಲಕ್ಷಣಗಳನ್ನು ನೀಡಲಾಗಿದೆ. ದುಂಬಿ, ಮಿಡತೆ, ಚಿಟ್ಟೆ ಇತ್ಯಾದಿ. ಆಂಗ್ಲಭಾಷೆಯಲ್ಲಿ ಎಂಟೊಮೊ ಫೋಡಿಯಾಕ್ ಎಂದು ಕರೆಯಲಾಗುವ ಈ ಜ್ಯೋತಿಷ್ಯ ಶಾಸ್ತ್ರಕ್ಕೆ ದಕ್ಷಿಣ ಅಮೆರಿಕನ್ನರು ನೈವಸ್ಕು ಎಂದೆನ್ನುತ್ತಿದ್ದರು.

ಮಕ್ಕಳನ್ನು ಆಕರ್ಷಿಸುವಂತಹ ನೈಜವಾದ ಬಣ್ಣದ ಚಿಟ್ಟೆಗಳು, ಗಾಜಿನ ಮೇಲೆ ಒಡಮೂಡಿರುವ ವರ್ಣರಂಜಿತವಾದ ಚಿತ್ರಗಳು, ಮೈಕ್ರೋಸ್ಕೋಪ್ ನಲ್ಲಿ ಕೀಟ ವೀಕ್ಷಣೆ, ಗಾಜಿನ ಪೆಟ್ಟಿಗೆಗಳೊಳಗಿದ್ದ ಜಲವಾಸಿ ಕೀಟಗಳು, ಜೀವರಹಿತ ವಿವಿಧ ಕೀಟಗಳು, ಚಿತ್ರದ ಬಿಡಿ ಭಾಗಗಳನ್ನು ಜೋಡಿಸುವ ಕೌಶಲ್ಯಯುಕ್ತ ಆಟಗಳೆಲ್ಲವೂ ಚಿಣ್ಣರೊಂದಿಗೆ ಅವರ ಪೋಷಕರನ್ನೂ, ಮಕ್ಕಳ ಅಜ್ಜಿ ತಾತಂದಿರನ್ನೂ ಸಹ ಮಂತ್ರಮುಗ್ಧರನ್ನಾಗಿ ಮಾಡಿತ್ತು.  ಜನಸಾಮಾನ್ಯರಿಗೆ ನಿಸರ್ಗದ ನಿಯಮವನ್ನು ತಿಳಿಸುವುದಲ್ಲದೆ ಇದರೊಟ್ಟಿಗೆ ಮಕ್ಕಳು ಮತ್ತು ಯುವಕರಿಗೆ ಕೃಷಿಯೆಡೆಗೆ ಒಲವು ಮೂಡಿಸುವುದು ಕೀಟ ವಿಸ್ಮಯ ಪ್ರದರ್ಶನದ ಮುಖ್ಯ ಉದ್ದೇಶವಾಗಿತ್ತು.

Facebook Comments

Sri Raghav

Admin