ಖಾಸಗಿ ಅನುದಾನರಹಿತ ಶಿಕ್ಷಕರಿಗೆ‌ ವಿಮೆ ಹಾಗೂ ವಿಶೇಷ ಪ್ಯಾಕೇಜ್ ಘೋಷಣೆಗೆ ಆಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು , ಜು.7- ಕೋವಿಡ್ -19ರಿಂದಾಗಿ ಸಂಕಷ್ಟ ಪರಿಸ್ಥಿತಿಗೆ ಒಳಗಾಗಿರುವ ಖಾಸಗಿ ಅನುದಾನರಹಿತ ಶಿಕ್ಷಕರಿಗೆ‌ ಆರೋಗ್ಯ ವಿಮೆ ಹಾಗೂ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಶಿಕ್ಷಕರ ಮತ್ತು ಆಡಳಿತ ಮಂಡಳಿಗಳ ಫೋರಂನ ಅಧ್ಯಕ್ಷ ಎ.ಪಿ.ರಂಗನಾಥ ಸರ್ಕಾರವನ್ನು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತೀವ್ರ ಸಂಕಷ್ಟ ಎದುರಿಸುತ್ತಿರುವ ಶಿಕ್ಷಕರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರು ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.

ಇತ್ತೀಚೆಗೆ ನಡೆದ ಎಸ್ಎಸ್ಎಲ್ಸಿ ಪರೀಕ್ಷೆ ಯಶಸ್ಸಿನ ಶ್ರೇಯಸ್ಸು ಶಿಕ್ಷಕರಿಗೆ ಸಲ್ಲಬೇಕು. ಗಣತಿ, ಕೋವಿಡ್ ಸೇರಿದಂತೆ ಅನೇಕ ಕೆಲಸಗಳನ್ನು ಶಿಕ್ಷಕರಿಂದಲೇ ಮಾಡಿಸುವ ಸರ್ಕಾರ, ಸಂಕಷ್ಟದಲ್ಲಿರುವ ಅವರಿಗೆ ಕೊಟ್ಟಿರುವುದಾದರೂ ಏನು ಎಂದು ಪ್ರಶ್ನಿಸಿದರು. ಕೋವಿಡ್ ನಿಂದಾಗಿ ಕೆಲವು ಖಾಸಗಿ ಆಡಳಿತ ಮಂಡಳಿಗಳು ಭಾಗಶಃ, ಮತ್ತೆ ಆಡಳಿತ ಮಂಡಳಿಗಳು ಅರ್ಧ ವೇತನ ನೀಡಿದ್ದರೆ, ಕೆಲವು ಆಡಳಿತ ಮಂಡಳಿಗಳು ವೇತನವನ್ನೇ ನೀಡಿಲ್ಲ.

ಕಳೆದ ನಾಲ್ಕು ತಿಂಗಳಿನಿಂದಲೂ ಅನುದಾನರಹಿತ ಶಿಕ್ಷಣ ಸಂಸ್ಥೆಗಳ ಶಿಕ್ಕಕರು ತೀವ್ರ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ಆರ್ ಟಿ ಇ ಶುಲ್ಕದ ಬಾಕಿ 1025 ಕೋಟಿ ರೂ ಇದ್ದು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು‌.

ರಾಜ್ಯ ಸರ್ಕಾರ ಶಿಕ್ಕಕರಿಗಾಗಿ ಯಾವುದೇ ಪ್ಯಾಕೇಜನ್ನು ಘೋಷಣೆ ಮಾಡಿಲ್ಲ. ಶಿಕ್ಷಕರ ನೆರವಿಗೆ ಸರ್ಕಾರ ಧಾವಿಸಬೇಕು. ಇಲ್ಲದಿದ್ದರೆ ಮೌಲ್ಯಮಾಪನ ಬಹಿಷ್ಕರಿಸುವ ಮಟ್ಟಕ್ಕೆ ಹೋಗಬಹುದು ಎಂದರು.

ಫೋರಂನ ಉಪಾಧ್ಯಕ್ಷ ಮುಕುಂದರಾಜ್ ಮಾತನಾಡಿ ಖಾಸಗಿ ಆಡಳಿತ ಮಂಡಳಿಗಳು ವೇತನ ನೀಡಲಾಗದ ಪರಿಸ್ಥಿತಿಗೆ ತಲುಪಿವೆ. ಕೋವಿಡ್ ಪರಿಸ್ಥಿತಿ ಸುಧಾರಿಸುವವರೆಗೂ ರಾಜ್ಯಸರ್ಕಾರ ಐದರಿಂದ ಹತ್ತು ಸಾವಿರ ರೂಪಾಯಿ ವಿಶೇಷ ಪ್ಯಾಕೇಜನ್ನು ಶಿಕ್ಷಕರಿಗೆ ಘೋಷಣೆ ಮಾಡಬೇಕು.

ಆಹಾರದ ಕೀಟಗಳನ್ನು ಕೇಳಲಾಗದ ಪರಿಸ್ಥಿತಿಯಲ್ಲಿರುವ ಕೆಲವರು ಜೀವನವೇ ಬೇಡ ಎಂಬ ಪರಿಸ್ಥಿತಿಗೆ ತಲುಪಿದ್ದಾರೆ. ಸರ್ಕಾರ ಸಂಕಷ್ಟದಲ್ಲಿರುವ ಶಿಕ್ಷಕರ ಕಡೆಗೆ ಗಮನ ಹರಿಸುವುದು ಅಗತ್ಯ ಎಂದರು.
ಸೂಡಿ ಸುರೇಶ್ ಅವರು ಮಾತನಾಡಿ ಸರ್ಕಾರ ಬಾಕಿ ಉಳಿಸಿಕೊಂಡಿರುವ ಆರ್ಟಿಇ ಶುಲ್ಕ ಪಾವತಿ ಮಾಡಬೇಕು.

ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕರಿಗೆ ಐದು ಲಕ್ಷ ರೂ ಜೀವ ವಿಮೆ ಮಾಡಿಸಬೇಕು. ಮೌಲ್ಯಮಾಪನಕ್ಕೆ ಆಗಮಿಸುವ ಶಿಕ್ಷಕರ ವೈದ್ಯಕೀಯ ವೆಚ್ಚವನ್ನು ಸರ್ಕಾರವೇ ಭರಿಸಬೇಕು ಎಂದರು. ಶಿಕ್ಷಕರ ಕ್ಷೇತ್ರದ ಪ್ರತಿನಿಧಿಗಳು ಸಂಕಷ್ಟದಲ್ಲಿದ್ದರೂ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.

Facebook Comments

Sri Raghav

Admin