ಬೆಳಗಾವಿ, ಮಂಗಳೂರಿನಲ್ಲಿ ಇನ್‍ಟೆಲ್ ಕಂಪೆನಿ ಘಟಕ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.3- ಬೆಳಗಾವಿ, ಮಂಗಳೂರಿನಲ್ಲಿ ಉತ್ಪಾದನಾ ಘಟಕ ಸ್ಥಾಪಿಸುವುದಾದರೆ ಸರ್ಕಾರದಿಂದ ಅಗತ್ಯವಿರುವ ಸಹಕಾರ ನೀಡಲು ಸಿದ್ಧವಿರುವುದಾಗಿ ಉಪ ಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥನಾರಾಯಣ್ ಇಂಟೆಲ್ ಸಂಸ್ಥೆಗೆ ಭರವಸೆ ನೀಡಿದ್ದಾರೆ.  ಇಂಟೆಲ್ ಸಂಸ್ಥೆಯ ಅಧಿಕಾರಿಗಳೊಂದಿಗೆ ವೀಡಿಯೋ ಕಾನ್ಫರೆ ನಡೆಸಿದ ಬಳಿಕ ಅವರು ಮಾತನಾಡಿದರು.

ಮಂಗಳೂರಿನಲ್ಲಿ ಬಂದರು ಇದೆ. ಬೆಳಗಾವಿಗೆ ಗೋವಾ ಬಂದರು ಸಮೀಪದಲ್ಲಿದೆ. ಈ ಎರಡೂ ಕಡೆಗಳಲ್ಲಿ ಉತ್ಪಾದನಾ ಘಟಕ ಸ್ಥಾಪನೆಗೆ ಅಗತ್ಯ ಸ್ಥಳಾವಕಾಶವೂ ಇದೆ. ಇಂಟೆಲ್ ಸಂಸ್ಥೆಯು ಈ ಅವಕಾಶವನ್ನು ಬಳಸಿಕೊಳ್ಳುವುದಾದರೆ, ಸರ್ಕಾರದ ಕಡೆಯಿಂದ ಎಲ್ಲ ಅಗತ್ಯ ಸಹಕಾರ ಒದಗಿಸಲಾಗುವುದು ಎಂದು ಭರವಸೆ ನೀಡಲಾಯಿತು ಎಂದು ಅವರು ಹೇಳಿದರು.

ಕೋವಿಡ್ ಪರಿಸ್ಥಿತಿ ನಿಯಂತ್ರಣಕ್ಕೆ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಇಂಟೆಲ್ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಸಂಕಷ್ಟದ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಇಂಟೆಲ್ ಇಂಡಿಯಾ ಬಿಸಿನೆಸ್ ಆಪರೇಷನ್ ನಿರ್ದೇಶಕ ಮಾನಸ್ ದಾಸ್ ಒಂದು ಕೋಟಿ ರೂ. ದೇಣಿಗೆ ನೀಡಿರುವುದು ಸಂತಸದ ವಿಷಯ. ಸರ್ಕಾರದ ಪರವಾಗಿ ಅವರಿಗೆ ಧನ್ಯವಾದ ತಿಳಿಸಿದರು.

ಇಂಟೆಲ್ ಭಾರತದ ಮುಖ್ಯಸ್ಥೆ ನಿವೃತ್ತಿ ರಾಯ, ಇಂಟೆಲ್ ಅಧಿಕಾರಿಗಳಾದ ಅನಂತನಾರಾಯಣ್, ಜಿತೇಂದ್ರ ಚಡ್ಡ, ಮಾನಸ್ ದಾಸ್, ಆನಂದ್ ದೇಶಪಾಂಡೆ, ಅಂಜಲಿ ರಾವ್, ವರ್ಟಿಕಲ್ ಸಲ್ಯೂಷನ್ ಗ್ರೂಪ್ ಉಪಾಧ್ಯಕ್ಷ ಕಿಶೋರ್ ರಾಮಿಶೆಟ್ಟಿ ಭಾಗವಹಿಸಿದ್ದರು.

Facebook Comments