ಇನ್‍ವೆಸ್ಟ್ ಕರ್ನಾಟಕಕ್ಕೆ ವಿಶ್ವದ ಪ್ರಮುಖ ಸಂಸ್ಥೆಗಳ ಮುಖ್ಯಸ್ಥರಿಗೆ ಆಹ್ವಾನ: ಜಗದೀಶ್‍ಶೆಟ್ಟರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.17- ಸ್ವಿಡ್ಜರ್ ಲ್ಯಾಂಡ್‍ನ ದಾವೂಸ್‍ನಲ್ಲಿ ನಡೆಯಲಿ ರುವ ವಿಶ್ವ ಆರ್ಥಿಕ ವೇದಿಕೆಯಲ್ಲಿ ಇನ್‍ವೆಸ್ಟ್ ಕರ್ನಾಟಕ-2020ರಲ್ಲಿ ಪಾಲ್ಗೊಳ್ಳುವಂತೆ ವಿಶ್ವದ ಪ್ರಮುಖ ಸಂಸ್ಥೆಗಳ ಮುಖ್ಯಸ್ಥರಿಗೆ ಆಹ್ವಾನ ನೀಡಲಾಗುವುದು ಎಂದು ಕೈಗಾರಿಕಾ ಸಚಿವ ಜಗದೀಶ್‍ಶೆಟ್ಟರ್ ಇಂದಿಲ್ಲಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನವೆಂಬರ್ 3 ಮತ್ತು 4 ರಂದು ನಡೆಯಲಿರುವ ಇನ್‍ವೆಸ್ಟ್ ಕರ್ನಾಟಕದ ಬಗ್ಗೆ ಮಾಹಿತಿ ನೀಡುತ್ತಾ,

ರಾಜ್ಯದಲ್ಲಿ ಬಂಡವಾಳ ಹೂಡುವುದಕ್ಕೆ ವಿಫುಲ ಅವಕಾಶ ಇರುವ ಬಗ್ಗೆ , ಹೂಡಿಕೆ ಬಗ್ಗೆ ಮಾಹಿತಿ ನೀಡಿ ಆಹ್ವಾನಿಸಲಾಗುವುದು, ಆಹ್ವಾನಿತ ಸಂಸ್ಥೆಗಳ ಬಂಡವಾಳ ಹೂಡಿಕೆ ಪ್ರಸ್ತಾವನೆಗೆ ಸಂಬಂಧಿಸಿದಂತೆ ಮುಂದಿನ ಕಾರ್ಯಸೂಚಿಯನ್ನು ತ್ವರಿತಗತಿಯಲ್ಲಿ ಅನುಷ್ಠನಗೊಳಿಸುವ ಉದ್ದೇಶದಿಂದ ಉದ್ಯಮಿಗಳ ನಿಯೋಗವನ್ನು ಆಹ್ವಾನಿಸಲು ಉದ್ದೇಶಿಸಲಾಗಿದೆ ಎಂದು ಜಗದೀಶ್‍ಶೆಟ್ಟರ್ ಹೇಳಿದರು.

ಜನವರಿ 21 ರಿಂದ 24ರವರೆಗೆ ದಾವೂಸ್‍ನಲ್ಲಿ ನಡೆಯಲಿರುವ 80ನೆ ವಿಶ್ವ ಆರ್ಥಿಕ ವೇದಿಕೆ ಕಾರ್ಯಕ್ರಮ ದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ರಾಜ್ಯದ ನಿಯೋಗವು ಪಾಲ್ಗೊಳ್ಳಲಿದೆ. ಮುಖ್ಯಮಂತ್ರಿಗಳೊಂದಿಗೆ 9 ಸಂಸ್ಥೆಗಳು ಭೇಟಿ ಮಾಡುವುದನ್ನು ಖಚಿತ ಪಡಿಸಿದ್ದು, ವಿಶ್ವದ ಪ್ರಮುಖ ಕಂಪನಿ ಮತ್ತು ಮುಖ್ಯಸ್ಥರಿಗೆ ಸುಮಾರು 200 ಪ್ರಸ್ತಾವನೆಯನ್ನು ಕಳುಹಿಸಲಾಗಿದೆ.

ನಾಲ್ಕು ದಿನಗಳ ನಡೆಯುವ ಸಮಾವೇಶದಲ್ಲಿ ರಾಜ್ಯದ ನಿಯೋಗವು ಅಂತರರಾಷ್ಟ್ರೀಯ ನಿಯೋಗದೊಂದಿಗೆ ಸಮಾಲೋಚನೆ ನಡೆಸಲು ನಿರ್ಧರಿಸಿದೆ ಎಂದು ಜಗದೀಶ್‍ಶೆಟ್ಟರ್ ಹೇಳಿದರು. ರಾಜ್ಯದ ಆರ್ಥಿಕ ಮತ್ತು ಬೆಳವಣಿಗೆಯ ಚಿತ್ರಣವನ್ನು ದಾವೂಸ್‍ನಲ್ಲಿ ನಡೆಯುವ ಸಮಾವೇಶದಲ್ಲಿ ಮನವರಿಕೆ ಮಾಡಿಕೊಟ್ಟು ಬಂಡವಾಳ ಹೂಡಿಕೆದಾರರನ್ನು ಆಹ್ವಾನಿಸಲಾಗು ವುದು ಎಂದು ಹೇಳಿದರು.

Facebook Comments