ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ ಭಾಗವಹಿಸಲು ಗೌಹಾಟಿ ಉದ್ಯಮಿಗಳಿಗೆ ಆಹ್ವಾನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆಬ್ರವರಿ 04, 2020: ಎಫ್‌ಎಂ‌ಸಿಜಿ ಕ್ಲಸ್ಟರ್‌ ನಿರ್ಮಾಣದ ಕುರಿತು ಮಾಹಿತಿ ಪಡೆಯಲು ಹಾಗೂ ಇನ್ವೆಸ್ಟ್‌ ಕರ್ನಾಟಕ ಹುಬ್ಬಳ್ಳಿ ಸಮಾವೇಶಕ್ಕೆ ಆಗಮಿಸುವಂತೆ ಗೌಹಾಟಿಯ ಎಫ್‌ಎಂಸಿಜಿ ವಲಯದ ಕೈಗಾರಿಕೋದ್ಯಮಿಗಳನ್ನು ಆಹ್ವಾನಿಸಲು ಇಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ಅವರು ಗೌಹಾಟಿಯ ಎಫ್‌ ಎಂ ಸಿ ಜಿ ವಲಯಕ್ಕೆ ಭೇಟಿ ನೀಡಿದರು.

ಹುಬ್ಬಳ್ಳಿ-ಧಾರವಾಡ ವಲಯದಲ್ಲಿ ಹೂಡಿಕೆ ಮಾಡುವಂತೆ ಹೂಡಿಕೆದಾರರು ಮತ್ತು ಉದ್ಯಮಿಗಳನ್ನು ಆಕರ್ಷಿಸುವ ನಿಟ್ಟಿನಲ್ಲಿ ಫೆಬ್ರವರಿ 14 ರಂದು ಹುಬ್ಬಳ್ಳಿಯಲ್ಲಿ ಇನ್ವೆಸ್ಟ್ ಕರ್ನಾಟಕ ಹುಬ್ಬಳ್ಳಿ ಸಮಾವೇಶ 2020 ಆಯೋಜಿಸಿದ್ದು, ಈ ಸಮಾವೇಶಕ್ಕೆ ಉದ್ಯಮಿಗಳನ್ನು ಆಹ್ವಾನಿಸಲು ಸಚಿವರು ಕೈಗಾರಿಕಾ ಇಲಾಖೆಯ ಅಧಿಕಾರಿಗಳ ತಂಡದೊಂದಿಗೆ ಇಂದು ಗೌಹಾಟಿಗೆ ಭೇಟಿ ನೀಡಿದ್ದರು.

ಫಿಕ್ಕಿಯ ಕರ್ನಾಟಕ ಚಾಪ್ಟರ್‌ ಹಾಗೂ ಇನ್‌ವೆಸ್ಟ್‌ ಕರ್ನಾಟಕ ಫೋರಂ ವತಿಯಿಂದ ಏರ್ಪಡಿಸಿದ್ದ ಹೂಡಿಕೆದಾರರು ಮತ್ತು ಉದ್ಯಮಿಗಳ ಸಭೆಯಲ್ಲಿ ಗೌಹಾಟಿ ಮ್ಯಾನೇಜ್ ಮೆಂಟ್ ಅಸೋಸಿಯೇಷನ್ ಸದಸ್ಯರು ಪಾಲ್ಗೊಂಡಿದ್ದರು. ಕರ್ನಾಟಕವನ್ನು ನಂಬರ್ ಒನ್ ಉದ್ಯಮ ಹೂಡಿಕೆದಾರರ ಸ್ನೇಹಿ ರಾಜ್ಯವನ್ನಾಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಂಕಣಬದ್ಧವಾಗಿದ್ದು, ಇದಕ್ಕೆ ಪೂರಕವಾದ ಹೊಸ ಕೈಗಾರಿಕಾ ನೀತಿಯನ್ನು ಜಾರಿಗೆ ತರಲಿದೆ. ರಾಜ್ಯದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಪೂರಕ ವಾತಾವರಣ ಇದೆ. ಅದರಲ್ಲೂ ಹುಬ್ಬಳ್ಳಿ-ಧಾರವಾಡ ಭಾಗದಲ್ಲಿ ಹೂಡಿಕೆಗೆ ವಿಫುಲ ಅವಕಾಶವಿದೆ. ಹುಬ್ಬಳ್ಳಿ ಧಾರವಾಡ ವಲಯದಲ್ಲಿ ಎಫ್‌ ಎಂ ಸಿ ಜಿ ಕ್ಲಸ್ಟರ್‌ ಸ್ಥಾಪನೆಗೆ ಸರಕಾರ ಎಲ್ಲಾ ರೀತಿಯ ತಯಾರಿಗಳನ್ನು ಮಾಡಿಕೊಂಡಿದೆ ಎಂದು ಕೈಗಾರಿಕೋದ್ಯಮಿಗಳಿಗೆ ವಿವರಣೆ ನೀಡಿದರು.

ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ನಮ್ಮ ಸರ್ಕಾರವು ಬಂಡವಾಳ ಹೂಡಿಕೆದಾರರು ಮತ್ತು ಉದ್ಯಮಿಗಳಿಗೆ ಉದ್ಯಮಗಳನ್ನು ಆರಂಭ ಮಾಡಲು ಮತ್ತು ಹೂಡಿಕೆ ಮಾಡಲು ಪೂರಕವಾದ ನೀತಿಗಳನ್ನು ಜಾರಿ ಮಾಡುತ್ತಿದ್ದು, ಅವರಿಗೆ ಅನುಕೂಲಕರವಾದ ಯೋಜನೆಗಳನ್ನು ಮಾಡಿಕೊಡುತ್ತಿದೆ. 2 ನೇ ಮತ್ತು 3 ನೇ ಹಂತದ ನಗರಗಳಲ್ಲಿಯೂ ಉದ್ಯಮಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಿದೆ. ಇದಕ್ಕೆ ಪೂರಕವಾಗಿ ಹುಬ್ಬಳ್ಳಿ – ಧಾರವಾಡ ವಲಯದಲ್ಲಿ ಉದ್ಯಮ ಕ್ಷೇತ್ರದ ಉತ್ತೇಜನಕ್ಕಾಗಿ ಇನ್ವೆಸ್ಟ್ ಕರ್ನಾಟಕ ಹುಬ್ಬಳ್ಳಿ ಸಮಾವೇಶವನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.

ಉತ್ತರ ಕರ್ನಾಟಕ ಭಾಗವೂ ಉದ್ಯಮ ಸ್ನೇಹಿ ಪ್ರದೇಶವಾಗಿದ್ದು, ಅಲ್ಲಿ ಉದ್ಯಮಗಳನ್ನು ಸ್ಥಾಪಿಸಲು ವಿಪುಲ ಅವಕಾಶಗಳನ್ನು ಕಲ್ಪಿಸಲು ಸರ್ಕಾರ ಬದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಸಮಾವೇಶದಲ್ಲಿ ಪಾಲ್ಗೊಂಡು ಅಲ್ಲಿನ ಅವಕಾಶಗಳನ್ನು ಪರಿಶೀಲಿಸಿ ಹೂಡಿಕೆ ಮಾಡುವಂತೆ ಶೆಟ್ಟರ್ ಗುವಾಹತಿಯ ಉದ್ಯಮಿಗಳಿಗೆ ಮನವಿ ಮಾಡಿದರು.

ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಉದ್ಯಮ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ಸಹಕಾರಿಯಾಗುವ ರೀತಿಯಲ್ಲಿ ನಮ್ಮ ಸರ್ಕಾರ ಹೊಸ ಕೈಗಾರಿಕಾ ನೀತಿಯನ್ನು ರೂಪಿಸಿದೆ. ಈ ಹೊಸ ನೀತಿಯು ಹುಬ್ಬಳ್ಳಿ-ಧಾರವಾಡ ವಲಯದಲ್ಲಿ ಹೂಡಿಕೆ ಮಾಡಲು ಎಲ್ಲಾ ರೀತಿಯ ಅನುಕೂಲಗಳನ್ನು ಉದ್ಯಮಿಗಳಿಗೆ ಕಲ್ಪಿಸಲಿದೆ ಎಂದು ಭರವಸೆ ನೀಡಿದರು.

ಬೆಂಗಳೂರಿನಲ್ಲಿ ಈ ವರ್ಷದ ನವೆಂಬರ್ 3 ರಿಂದ 5 ರವರೆಗೆ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಆಯೋಜಿಸಲಾಗಿದೆ. ಇದಕ್ಕೆ ಪೂರಕವಾಗಿ ಹುಬ್ಬಳ್ಳಿಯಲ್ಲಿ ಇನ್ವೆಸ್ಟ್ ಕರ್ನಾಟಕ ಹುಬ್ಬಳ್ಳಿ ಸಮಾವೇಶವನ್ನು ಆಯೋಜಿಸಲಾಗುತ್ತಿದೆ. ಇಂದು ಕರ್ನಾಟಕ 216 ಯುಎಸ್ ಬಿಲಿಯನ್ ಡಾಲರ್ ಆರ್ಥಿಕತೆ ಇರುವ ರಾಜ್ಯವಾಗಿದ್ದು, ವಾರ್ಷಿಕ ಶೇ.9.6 ರಷ್ಟು ಪ್ರಮಾಣದಲ್ಲಿ ಪ್ರಗತಿ ಹೊಂದುತ್ತಿದೆ. ಇಲ್ಲಿ ಬಂಡವಾಳ ಹೂಡಿಕೆಗೆ ವಿಪುಲ ಅವಕಾಶವಿದ್ದು, ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕ ಉತ್ಪಾದನಾ ವಾತಾವರಣವನ್ನು ಕಲ್ಪಿಸಲಾಗುತ್ತಿದೆ ಎಂದು ಶೆಟ್ಟರ್ ತಿಳಿಸಿದರು.

ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕವು ದೇಶದ ಮೂರನೇ ಅತ್ಯುತ್ತಮ ರಾಜ್ಯವಾಗಿದ್ದು, ಒಟ್ಟಾರೆ ರಫ್ತಿನಲ್ಲಿ (2018-19) ಎರಡನೇ ಸ್ಥಾನದಲ್ಲಿದೆ. ಪ್ರಮುಖವಾಗಿ ಕರ್ನಾಟಕ ಆಟೋಮೋಬೈಲ್, ಎಲೆಕ್ಟ್ರಿಕ್ ವಾಹನಗಳು, ಏರೋಸ್ಪೇಸ್ ಮತ್ತು ಡಿಫೆನ್ಸ್, ಇಂಜಿನಿಯರಿಂಗ್ ಮತ್ತು ಮಶಿನ್ ಟೂಲ್ಸ್, ಎಲೆಕ್ಟ್ರಾನಿಕ್ಸ್, ಜೈವಿಕ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನದ ಹಬ್ ಎಂದು ಜಗದ್ವಿಖ್ಯಾತಿಯನ್ನು ಗಳಿಸಿದೆ.

ದೇಶದ ಅತ್ಯುತ್ತಮ ಬಂಡವಾಳ ಹೂಡಿಕೆ ನಗರಗಳ ಪೈಕಿ ಬೆಂಗಳೂರು ನಾಲ್ಕನೇ ನಗರ ಎಂದು ವಿಶ್ವಬ್ಯಾಂಕ್ ಪರಿಗಣಿಸಿದ್ದು, ವ್ಯವಹಾರಗಳನ್ನು ಸರಳೀಕರಣಗೊಳಿಸಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದ ಜಗದೀಶ್ ಶೆಟ್ಟರ್ ಅವರು, ಈ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸುತ್ತಿರುವ ಹಿನ್ನೆಲೆಯಲ್ಲಿ ಹೂಡಿಕೆದಾರರು ಯಾವುದೇ ಅಳುಕಿಲ್ಲದೇ ಕರ್ನಾಟಕ ಅದರಲ್ಲೂ ಹುಬ್ಬಳ್ಳಿ-ಧಾರವಾಡ ವಲಯದಲ್ಲಿ ಹೂಡಿಕೆ ಮಾಡಬಹುದಾಗಿದೆ ಎಂದು ಆಹ್ವಾನಿಸಿದರು.

ಇದೇವೇಳೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರಾದ ಜಗದೀಶ್ ಶೆಟ್ಟರ್ ಅವರು ಗುವಾಹತಿಯಲ್ಲಿ ಉಜಾಲ ಘಟಕ, ಗೋದ್ರೇಜ್, ಮಾರ್ಗೋ ಸೇರಿದಂತೆ ಇನ್ನಿತರೆ ಕೈಗಾರಿಕಾ ಘಟಕಗಳಿಗೆ ಭೇಟಿ ನೀಡಿ ಕಾರ್ಯನಿರ್ವಹಣೆಯನ್ನು ಅವಲೋಕಿಸಿದರು. ಸಚಿವರ ಜೊತೆಯಲ್ಲಿ ಇನ್‌ವೆಸ್ಟ್‌ ಕರ್ನಾಟಕ ಫೋರಂ ನ ಸಿಓಓ ಶ್ರೀಮತಿ ಸ್ವರೂಪ ಟಿ.ಕೆ ಸೇರಿದಂತೆ ಹಲವು ಅಧಿಕಾರಿಗಳು ಪಾಲ್ಗೊಂಡಿದ್ದರು.

Facebook Comments

Sri Raghav

Admin