ಇನ್ವೆಸ್ಟ್ ಕರ್ನಾಟಕ ಹುಬ್ಬಳ್ಳಿ-2020 ಹೂಡಿಕೆದಾರರ ಸಮಾವೇಶಕ್ಕೆ ಸಕಲ ಸಿದ್ಧತೆ

ಈ ಸುದ್ದಿಯನ್ನು ಶೇರ್ ಮಾಡಿ

ಹುಬ್ಬಳ್ಳಿ,ಫೆ.9- ಒಂದೆಡೆ ಆರ್ಥಿಕತೆ ಮಂದಗತಿ ಚಲನೆ, ಇನ್ನೊಂದೆಡೆ ಕೇಂದ್ರ ಬಜೆಟ್‍ನಲ್ಲಿ ಅದರ ಸುಧಾರಣೆಗೆ ಕೈಗೊಂಡ ಕ್ರಮಗಳ ಮಧ್ಯೆ ರಾಜ್ಯ ಸರ್ಕಾರ ಹಮ್ಮಿಕೊಂಡಿರುವ ಇನ್ವೆಸ್ಟ್ ಕರ್ನಾಟಕ ಹೂಡಿಕೆದಾರರ ಸಮಾವೇಶ ಹಲವು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ಕೈಗಾರಿಕಾ ಇಲಾಖೆ ಮುಂದಾಳತ್ವದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಅದರಲ್ಲೂ ರಾಜ್ಯದ ದ್ವಿತೀಯ ಸ್ತರದ (ಟೂ ಟೈರ್) ನಗರಗಳಲ್ಲಿ ಔದ್ಯಮಿಕ ಬೆಳವಣಿಗೆಯ ಭರ ವಸೆ ಮೂಡಿಸಿರುವ ಇನ್ವೆಸ್ಟ್ ಕರ್ನಾ ಟಕ ಹುಬ್ಬಳ್ಳಿ ಸಮ್ಮೇಳನಕ್ಕೆ ಭರದ ಸಿದ್ಧತೆಗಳು ನಡೆದಿವೆ.

ನಗರದ ಡೆನಿಸನ್ಸ್ ಹೋಟೆಲ್‍ನಲ್ಲಿ ಫೆ. 14ರಂದು ಹಮ್ಮಿಕೊಳ್ಳಲಾಗಿರುವ ಹೂಡಿಕೆದಾರರ ಸಮಾವೇಶದಲ್ಲಿ ದೇಶ ವಿದೇಶಗಳಿಂದ ನೂರಾರು ಕಂಪನಿಗಳ ಪ್ರತಿನಿಧಿಗಳು, ಸ್ಥಳೀಯ ಉದ್ಯಮಿಗಳು, ಔದ್ಯೋಗಿಕ ಸಂಘ- ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಳ್ಳುತ್ತಿದ್ದಾರೆ. ಹುಬ್ಬಳ್ಳಿ- ಧಾರವಾಡ, ಬೆಳಗಾವಿ, ಕೊಪ್ಪಳ, ದಾವಣಗೆರೆ ಸೇರಿ ಒಂಬತ್ತು ಜಿಲ್ಲೆಗಳಲ್ಲಿ ಉದ್ಯಮ ಸ್ಥಾಪನೆಯ ಉದ್ದೇಶದಿಂದ ಹೂಡಿಕೆದಾರರ ಸಮಾವೇಶ ನಡೆಯಲಿದ್ದು, ಈ ಭಾಗದಲ್ಲಿ ಕೈಗಾರಿಕೆ ಆರಂಭಕ್ಕೆ ಇರುವ ಎಲ್ಲ ಅವಕಾಶಗಳ ಬಗ್ಗೆ ಅಲ್ಲಿ ಮನವರಿಕೆ ಮಾಡಿಕೊಡಲಾಗುತ್ತದೆ.

ಎಫ್‍ಐಸಿಸಿಐ, ಸಿಸಿಐ ಸಹಯೋಗದೊಂದಿಗೆ ರಾಜ್ಯ ಸರ್ಕಾರ ಈಗಾಗಲೇ ಮುಂಬೈ, ಹೈದರಾಬಾದ್ ಮುಂತಾದೆಡೆ ರೋಡ್ ಶೋ ನಡೆಸಿ ಹೂಡಿಕೆದಾರರ ಗಮನ ಸೆಳೆದಿದೆ. ಲಖನೌ, ಗುವಾಹಟಿಯಲ್ಲೂ ಬಂಡವಾಳದಾರರಿಗೆ ಮಾಹಿತಿ ನೀಡಲಾಗಿದೆ. ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಇನ್ವೆಸ್ಟ್ ಕರ್ನಾಟಕದಲ್ಲಿ ಪಾಲ್ಗೊಳ್ಳುವಂತೆ ಉದ್ಯಮಪತಿಗಳಿಗೆ ಮನವಿ ಮಾಡಿ ಬಂದಿದ್ದಾರೆ.

ಆನ್‍ಲೈನ್‍ನಲ್ಲಿ ನೋಂದಣಿಗೂ ಅವಕಾಶ ನೀಡಿದ್ದರಿಂದ ಈಗಾಗಲೇ ನೂರಾರು ಕಂಪನಿಗಳ ಪ್ರತಿನಿಧಿಗಳು ಸಮಾವೇಶದಲ್ಲಿ ಪಾಲ್ಗೊಳ್ಳಲು ಆಸಕ್ತಿ ವ್ಯಕ್ತಪಡಿಸಿದ್ದಾರೆ. ಬಹುರಾಷ್ಟ್ರೀಯ ಕಂಪನಿಗಳು, ದೇಶದ ಉದ್ಯಮಪತಿಗಳು, ಸ್ಥಳೀಯ ಉದ್ಯಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾ ಗಲಿದ್ದಾರೆ. ಫೆ. 14ರಂದು ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೆ ವಿಶೇಷವಾಗಿ ಪೇಪರ್ ಪ್ರಜೆಂಟೇಶನ್ ನಡೆಯಲಿದೆ.

ಮಧ್ಯಾಹ್ನ ಏನಿಲ್ಲವೆಂದರೂ ಕನಿಷ್ಠ 10 ಕಂಪನಿಗಳು ಎಂಒಯು ಮಾಡಿಕೊಳ್ಳುವ ನಿರೀಕ್ಷೆ ಇದೆ. ಎಷ್ಟೇ ಕಂಪನಿಗಳು ಬಂದರೂ ಅವಕಾಶ ಮಾಡಿಕೊಡಲಾಗುತ್ತದೆ. ಅದಕ್ಕಾಗಿ ಸರ್ಕಾರ ರೂಪಿಸಿರುವ ಚೌಕಟ್ಟಿನಲ್ಲಿ ಏನೆಲ್ಲ ಸೌಲಭ್ಯ ಬೇಕೋ ಅದನ್ನು ಮಾಡಿಕೊಡಲು ಬದ್ಧವಾಗಿದ್ದೇವೆ ಎಂಬ ಭರವಸೆ ಸರ್ಕಾರದ್ದು ಎಂದು ಧಾರವಾಡ ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕ ಮೋಹನ ಭರಮಕ್ಕನವರ ತಿಳಿಸಿದ್ದಾರೆ.

ಏನೇನು ಸೌಲಭ್ಯ ಇವೆ?
ಧಾರವಾಡ ಜಿಲ್ಲೆಯಲ್ಲಿ ಪ್ರಸ್ತುತ 1700 ಎಕರೆ ಭೂಮಿ ತಕ್ಷಣಕ್ಕೆ ಉದ್ಯಮ ಆರಂಭಿಸಲು ಲಭ್ಯವಿದೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬೇಕಿದ್ದರೆ ಕೊಡುವುದಕ್ಕೆ ಸುಮಾರು 4500 ಎಕರೆ ಗುರುತು ಮಾಡಿ ಇಡಲಾಗಿದ್ದು, ಅಗತ್ಯ ಬಿದ್ದರೆ ಒಂದೆರಡು ತಿಂಗಳಲ್ಲಿ ಸ್ವಾಧೀನ ಪ್ರಕ್ರಿಯೆ ಮುಗಿಸಿ ಕೊಡಬಹುದಾಗಿದೆ. ಅಂದರೆ ಕೈಗಾರಿಕೆಗಾಗಿಯೇ ಅಂದಾಜು 6000 ಎಕರೆ ಜಮೀನು ಧಾರವಾಡ ಜಿಲ್ಲೆಯಲ್ಲಿ ಸಿದ್ಧವಾಗಿದೆ. ಅದೇ ರೀತಿ ಬೆಳಗಾವಿಯ ಕಣಗಲಾ, ಕಿತ್ತೂರ ಬಳಿ ಹಾಗೂ ಬೇರೆ ಬೇರೆ ಜಿಲ್ಲೆಗಳಲ್ಲಿಯೂ ಜಮೀನು ಮೀಸಲಿಡಲಾಗಿದೆ.

ಮುಮ್ಮಿಗಟ್ಟಿ ಬಳಿ ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿ 518 ಎಕರೆ ಅಭಿವೃದ್ಧಿ ಪಡಿಸಿದ ಜಮೀನು ಇದ್ದು, ಇದರ ಮಧ್ಯೆ ಆರು ಪಥ ಹಾಗೂ ಸರ್ವೀಸ್ ರಸ್ತೆ ಸೇರಿ ಎಂಟು ಪಥದ ಬೃಹತ್ ಮಾರ್ಗ ನಿರ್ಮಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ನಾಲ್ಕರಿಂದ ಐಐಟಿ ವರೆಗೆ ಸುಮಾರು 2.5 ಕಿ.ಮೀ. ರಸ್ತೆ ಇದಾಗಿದೆ. ಇದಲ್ಲದೇ ಹಲವು ಸೌಲಭ್ಯಗಳ ಭರವಸೆ ನೀಡಿ ಹೂಡಿಕೆದಾರರನ್ನು ಆಹ್ವಾನಿಸಲಾಗಿದೆ.

Facebook Comments