ಇನ್ವೆಸ್ಟ್ ಕರ್ನಾಟಕ ಸಮಾವೇಶದಿಂದ ಉತ್ತರ ಕರ್ನಾಟಕ ಭಾಗದಲ್ಲಿ ಉದ್ಯೋಗ ಸೃಷ್ಟಿ

ಈ ಸುದ್ದಿಯನ್ನು ಶೇರ್ ಮಾಡಿ

ಹುಬ್ಬಳ್ಳಿ,ಫೆ.14- ಉತ್ತರ ಕರ್ನಾಟಕ ಭಾಗದಲ್ಲಿ ಕೈಗಾರಿಕೆಗಳ ಪ್ರಗತಿಯ ಹೆಬ್ಬಾಗಿಲಾದ ಬಹುನಿರೀಕ್ಷಿತ ಇನ್ವೆಸ್ಟ್ ಕರ್ನಾಟಕ ಸಮಾವೇಶಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಚಾಲನೆ ನೀಡಿದರು. ರಾಜ್ಯದ ಹಾಗೂ ದೇಶದ ವಿವಿಧ 700ಕ್ಕೂ ಹೆಚ್ಚು ಉದ್ಯಮಿಗಳು ಪಾಲ್ಗೊಂಡಿದ್ದ ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕದಲ್ಲಿ ಉದ್ಯೋಗ ಅವಕಾಶ ಸೃಷ್ಟಿಸುವ ಹಿನ್ನೆಲೆಯಲ್ಲಿ ಹಮ್ಮಿಕೊಂಡಿರುವ ಹೂಡಿಕೆದಾರರ ಸಮಾವೇಶ ಇದಾಗಿದ್ದು ಹೊಸ ಭರವಸೆ ಹುಟ್ಟಿಸಿದೆ. ಪ್ರಾದೇಶಿಕ ಅಸಮಾನತೆ ನಿವಾರಣೆ ಮಾಡಲಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಈ ಸಂದರ್ಭದಲ್ಲಿ ಹೇಳಿದರು.

ಉದ್ಯಮಿಗಳು, ಕೈಗಾರಿಕೆಗಳನ್ನು ಸೆಳೆಯುವ ಪ್ರಯತ್ನ ಇದಾಗಿದೆ. ಡಾವೋಸ್ ಬೇಟಿಯ ನಂತರ ಹಲವು ಉದ್ಯಮಿಗಳು ರಾಜ್ಯದಲ್ಲಿ ಬಂಡವಾಳ ಹೂಡಲು ಮುಂದಾಗಿದ್ದಾರೆ. ಉತ್ತರ ಕರ್ನಾಟಕದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ನಮ್ಮ ಸರ್ಕಾರ ಹೆಚ್ಚಿನ ಆದ್ಯತೆ ನೀಡಲಿದೆ ಎಂದು ಅವರು ಹೇಳಿದರು.  ಇದಕ್ಕೂ ಮುನ್ನ ಮಾತನಾಡಿದ ಕೇಂದ್ರ ಸಂಸದೀಯ ವ್ಯವಹಾರ ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ್ ಜೋಷಿ, ಇನ್ವೆಸ್ಟ್ ಕರ್ನಾಟಕ ಕೇವಲ ಹುಬ್ಬಳ್ಳಿಗಷ್ಟೇ ಸೀಮಿತವಾಗಿಲ್ಲ.

ಸಮಗ್ರ ಉತ್ತರ ಕರ್ನಾಟಕ ಅಭಿವೃದ್ಧಿ ದೃಷ್ಟಿಕೋನದಿಂದ ಮಾಡುತ್ತಿರುವ ಕಾರ್ಯಕ್ರಮವಾಗಿದೆ. ಅದಾನಿ ಸೇರಿದಂತೆ ದೇಶದ ದೊಡ್ಡ ಉದ್ಯಮೆದಾರರು ಬಂಡವಾಳ ಹೂಡಲು ಉತ್ಸುಕರಾಗಿದ್ದಾರೆ.ಲಸಿಕಾ ತಯಾರಿಕಾ ಘಟಕ ಪ್ರಾರಂಭಿಸಲು ಮುಂದಾಗಿದ್ದಾರೆ. 600ಕ್ಕೂ ಹೆಚ್ಚು ಮಂದಿ ನೋಂದಣಿ ಮಾಡಿಸಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ 8 ಸಾವಿರದಿಂದ 10 ಸಾವಿರ ಕೋಟಿಯಷ್ಟು ಬಂಡವಾಳ ಹರಿದು ಬರುವ ಸಾಧ್ಯತೆ ಇದೆ ಎಂದು ಹೇಳಿದರು.

ಬೃಹತ್ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಮಾತನಾಡಿ, ಸಣ್ಣ ಕೈಗಾರಿಕೆ ಮತ್ತು ದೊಡ್ಡ ಕೈಗಾರಿಕೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇನ್ವೆಸ್ಟ್ ಕರ್ನಾಟಕ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಲು ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದರು. ಸರ್ಕಾರ ಉದ್ಯಮಿಗಳಿಗೆ ಆಹ್ವಾನ ನೀಡಿದರೆ ಅವರು ಬೆಂಗಳೂರಿನಲ್ಲಿ ಹೂಡಿಕೆ ಮಾಡಲು ಸಿದ್ದರಿದ್ದರು. ಆದರೆ ನಾವು ಬೇರೆ ಬೇರೆ ನಗರಗಳಿಗೆ ವಿಸ್ತರಣೆ ಮಾಡುತ್ತಿದ್ದೇವೆ. ಅದಕ್ಕೆ ಸಹಕಾರ ನಮ್ಮ ಸರ್ಕಾರ ನೀಡುತ್ತಿದೆ.

ಈ ಸಮಾವೇಶಕ್ಕಾಗಿ ನಾವು ಬಹಳ ಪ್ರಯತ್ನ ಮಾಡಿದ್ದೇವೆ. ದೇಶದ ನಾನಾ ಭಾಗಗಳಲ್ಲಿ ರೋಡ್ ಶೋ ಮಾಡಿದ್ದೇವೆ. ಹಾಗಾಗಿ ಇಂದು ದೇಶವಿದೇಶಗಳಿಂದ ಹೂಡಿಕೆದಾರರು ಆಮಿಸಿದ್ದಾರೆ ಎಂದರು.  ಪ್ರತಿಷ್ಠಿತ ಟಾಟಾ, ಹಿಂದೂಜಾ, ಅದಾನಿ ಗ್ರೂಪ್ ಸೇರಿದಂತೆ 700ಕ್ಕೂ ಹೆಚ್ಚು ಹೂಡಿಕೆದಾರರು ಆಗಮಿಸಿದ್ದಾರೆ. ಈ ಭಾಗದ ಜನರಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಮುಖ್ಯಮಂತ್ರಿ ಯಡಿಯೂರಪ್ಪನವರು ಸಂಪೂರ್ಣ ಸಹಕಾರ ನೀಡಿದ್ದಾರೆ ಎಂದು ಹೇಳಿದರು.

ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಸರ್ಕಾರದ ಪ್ರದಾನ ಕಾರ್ಯದರ್ಶಿ ಗೌರವ್ ಗುಪ್ತ ಮಾತನಾಡಿ, 15 ವರ್ಷಗಳ ಹಿಂದೆ ಧಾರವಾಡದ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿರುವ ತಮಗೆ ಉತ್ತರ ಕರ್ನಾಟಕ ಭಾಗದ ಭೌಗೋಳಿಕ, ಸಾಮಾಜಿಕ, ಆರ್ಥಿಕ ಪರಿಸ್ಥಿತಿಯ ಪರಿಚಯವಿದೆ. ಈ ಭಾಗದ ಅಭಿವೃದ್ಧಿ ನಮ್ಮೆಲ್ಲರ ಕನಸಾಗಿದೆ ಎಂದರು.
ಕೈಗಾರಿಕಾ ಅಭಿವೃದ್ದಿ ಆಯುಕ್ತೆ ಮತ್ತು ಕೈಗಾರಿಕಾ ಇಲಾಖೆ ನಿರ್ದೇಶಕಿ ಗುಂಜನ್ ಕೃಷ್ಣ ಅವರು ಟಿಪಿಟಿ ಪ್ರಾತ್ಯಕ್ಷಿಕೆ ಮೂಲಕ ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕ ಜಿಲ್ಲೆಗಳ ಪರಿಚಯ ಮಾಡಿಕೊಟ್ಟರು.

ಸಮಾರಂಭದಲ್ಲಿ ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ, ಸುರೇಶ್ ಅಂಗಡಿ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಶಾಸಕರಾದ ಅರವಿಂದ್ ಬೆಲ್ಲದ್, ಪ್ರಸಾದ್ ಅಬ್ಬಯ್ಯ,ಸಿ.ಎಂ. .ನಿಂಬಣ್ಣನವರ್, ಅಮೃತ್ ದೇಸಾಯಿ, ಶಂಕರ್ ಪಾಟೀಲ್ ಮುನೇನಕೊಪ್ಪ, ಸಂಸದ ಭಗವಂತ್ ಖೂಬ, ರಾಜ್ಯಸಭಾ ಸದಸ್ಯ ಪ್ರಭಾಕರ್ ಕೋರೆ, ವಿ ಆರ್‍ಎಲ್ ಸಮೂಹ ಸಂಸ್ಥೆಗಳ ಸಿಎಂಡಿ ಪದ್ಮಶ್ರೀ ಡಾ.ಜೆ.ವಿಜಯ ಸಂಕೇಶ್ವರ್ ಮುಂತಾದವರು ಭಾಗಿಯಾಗಿದ್ದರು.

Facebook Comments