ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕಕ್ಕೆ ಅಗ್ರಸ್ಥಾನ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಅ.18-ವಿವಿಧ ಕ್ಷೇತ್ರಗಳಲ್ಲಿ ಹತ್ತು ಹಲವು ಪ್ರಥಮಗಳ ಹೆಗ್ಗಳಿಕೆ ಪಡೆದಿರುವ ಕರ್ನಾಟಕ ಬಂಡವಾಳ ಹೂಡಿಕೆ ಕ್ಷೇತ್ರದಲ್ಲೂ ಅತ್ಯುತ್ತಮ ರಾಜ್ಯ. ಹೂಡಿಕೆಯನ್ನು ಆಕರ್ಷಿಸುವ ವಿಷಯದಲ್ಲಿ ದೇಶದ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಅಗ್ರ ಸ್ಥಾನದಲ್ಲಿದೆ ಎಂದು ನೀತಿ ಆಯೋಗ ಹೇಳಿದೆ.

ಹೊಸ ಹೊಸ ಆವಿಷ್ಕಾರಗಳು ಮತ್ತು ನಾವಿನ್ಯತೆಯ ಪರಿಕಲ್ಪನೆಯಲ್ಲಿ ದೇಶದಲ್ಲೆ ಅಗ್ರಸ್ಥಾನ ಪಡೆದಿರುವ ಕರ್ನಾಟಕ ಹೊರರಾಜ್ಯಗಳ ಮತ್ತು ವಿದೇಶಿ ಬಂಡವಾಳ ಹೂಡಿಕೆ ಪ್ರಶಸ್ತ ಸ್ಥಳ ಎಂಬುದು ಆಯೋಗದ ದೃಢಿಕರಣದೊಂದಿಗೆ ಮತ್ತೊಮ್ಮೆ ಸಾಬೀತಾಗಿದೆ. ಇದೇ ಮೊದಲ ಬಾರಿಗೆ ನೀತಿ ಆಯೋಗ ಬಿಡುಗಡೆ ಮಾಡಿರುವ ಹೂಡಿಕೆ ಆಕರ್ಷಿಸುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಕಟಕ್ಕೆ ಅಗ್ರ ಸ್ಥಾನ ಲಭಿಸಿದೆ. ಇನ್ನುಳಿದಂತೆ ಮಹಾರಾಷ್ಟ್ರ, ಹರ್ಯಾಣ, ಕೇರಳ, ತಮಿಳುನಾಡು, ಗುಜರಾತ್, ತೆಲಂಗಾಣ, ರಾಜಸ್ಥಾನ ಮತ್ತು ಉತ್ತರ ಪ್ರದೇಶ ನಂತರದ ಸ್ಥಾನಗಳಲ್ಲಿವೆ.

ಇನ್ನು ಹೂಡಿಕೆ ಆಕರ್ಷಿಸುವ ಪಟ್ಟಿಯಲ್ಲಿ ಬಿಹಾರ,ಜಾರ್ಖಂಡ್ ಮತ್ತು ಪಂಜಾಬ್ ಕನಿಷ್ಠ ಆಕರ್ಷಣೆಯ ರಾಜ್ಯಗಳಾಗಿವೆ ಎಂದು ನೀತಿ ಆಯೋಗ ಸ್ಪಷ್ಟಪಡಿಸಿದೆ. ಈಶಾನ್ಯ ಮತ್ತು ಗುಡ್ಡಗಾಡು ರಾಜ್ಯಗಳ ಪೈಕಿ ಮಣಿಪುರ, ಅರುಣಾಚಲ ಪ್ರದೇಶ ಮತ್ತು ತ್ರಿಪುರಾ ಮೊದಲ ಮೂರು ಅಗ್ರ ರಾಜ್ಯಗಳಾಗಿದ್ದರೆ, ಲಕ್ಷದ್ವೀಪ, ದೆಹಲಿ ಮತ್ತು ಗೋವಾ ಅತ್ಯುತ್ತಮ ಮೂರು ಕೇಂದ್ರಾಡಳಿತ ಪ್ರದೇಶಗಳಾಗಿವೆ.

ಪಟ್ಟಿ ಬಿಡುಗಡೆ ಬಳಿಕ ಮಾತನಾಡಿದ ನೀತಿ ಆಯೊಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಅವರು, ಇದೇ ಮೊದಲ ಬಾರಿಗೆ ಸಿದ್ಧಪಡಿಸಲಾದ ಇಂಡಿಯಾ ಇನ್ನೊವೇಶನ್ ಇಂಡೆಕ್ಸ್ (ಭಾರತ ಅನ್ವೇಷಣೆ ಸೂಚಿ) ದೇಶಾದ್ಯಂತ ನವೀನ ಪರಿಕಲ್ಪನೆಗಳು ಪ್ರವರ್ಧಮಾನಕ್ಕೆ ಬರಲು ಅನುಕೂಲಕರ ಪರಿಸರವನ್ನು ಉಂಟುಮಾಡಲು ಸಹಾಯ ಮಾಡುತ್ತದೆ. ಇದು ರಾಜ್ಯಗಳೊಂದಿಗೆ ಅದರ ಕಾರ್ಯಕ್ಷಮತೆಯನ್ನು ಗುರುತಿಸಲು ಸಹಕಾರಿ ಎಂದು ಹೇಳಿದರು.

Facebook Comments