ಪಾಕ್ ಪರ ಘೋಷಣೆ ಕೂಗಿದ ಪ್ರಕರಣದ ತನಿಖೆಗೆ ಎಸ್‍ಐಟಿ ರಚನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಫೆ.22- ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪಾಕಿಸ್ತಾನ ಪರ ಘೋಷಣೆ ಕೂಗಿದ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಇದರ ತನಿಖೆ ನಡೆಸಲು ವಿಶೇಷ ತನಿಖಾ ತಂಡ(ಎಸ್‍ಐಟಿ) ರಚನೆ ಮಾಡಿದೆ. ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣೆಯ ಎಸಿಪಿ ಮಹಾಂತ ರೆಡ್ಡಿ ನೇತೃತ್ವದಲ್ಲಿ ಎಸ್‍ಐಟಿ ತಂಡವನ್ನು ರಚಿಸಲಾಗಿದ್ದು, ಚಾಮರಾಜಪೇಟೆ ಇನ್‍ಸ್ಪೆಕ್ಟರ್‍ಗಳಾದ ಸುರೇಶ್ ಮತ್ತು ಕುಮಾರಸ್ವಾಮಿ ಸೇರಿದಂತೆ ಮತ್ತಿತರರು ತನಿಖಾ ತಂಡದಲ್ಲಿ ಇರಲಿದ್ದಾರೆ.

ಪಾಕಿಸ್ತಾನ ಪರ ಘೋಷಣೆ ಕೂಗಿ ನ್ಯಾಯಾಂಗ ಬಂಧನದಲ್ಲಿರುವ ಅಮೂಲ್ಯ ಲಿಯೋನ ಹಿಂದೆ ಯಾರ್ಯಾರ ಕೈವಾಡವಿದೆ, ಇದಕ್ಕೆ ಕುಮ್ಮಕ್ಕು ನೀಡಿದವರು ಯಾರು, ಸಂಘಟನೆಗಳು ನಕ್ಸಲ್ ಜೊತೆ ಸಂಪರ್ಕ ಹೊಂದಿದ್ದಾರಾ? ಸೇರಿದಂತೆ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಲಿದೆ.  ಪ್ರಕರಣ ಕುರಿತಂತೆ ವಿಸ್ತೃತ ತನಿಖೆ ನಡೆಸಿ ವರದಿ ನೀಡಬೇಕೆಂದು ಗೃಹ ಇಲಾಖೆ ಸೂಚನೆ ಕೊಟ್ಟಿದೆ.

ಈ ಹಿಂದೆ ಖಾಸಗಿ ವಾಹಿನಿಗೆ ಸಂದರ್ಶನ ನೀಡಿದ್ದ ಅಮೂಲ್ಯ ಲಿಯೋನ, ನಾನು ಕೇವಲ ಮುಖವಾಣಿ ಮಾತ್ರ. ನನ್ನ ಹಿಂದೆ ಅನೇಕರು ಇದ್ದಾರೆ. ನಮಗೆ ಸಲಹಾ ಸಮಿತಿ ಇದೆ. ಅವರು ನೀಡುವ ಸಲಹೆಗಳಂತೆ ನಾವು ನಡೆದುಕೊಳ್ಳುತ್ತೇವೆ ಎಂದು ಹೇಳಿಕೊಂಡಿದ್ದಳು. ಮೂಲಗಳ ಪ್ರಕಾರ ನಿಷೇಧಿತ ನಕ್ಸಲ್ ಸಂಘಟನೆ ಹಾಗೂ ಅದರ ಮುಖಂಡರ ಸಂಪರ್ಕವನ್ನು ಈಕೆ ಹೊಂದಿರುವುದರ ಬಗ್ಗೆಯೂ ಪೊಲೀಸರಿಗೆ ಅನುಮಾನ ವ್ಯಕ್ತವಾಗಿದೆ. ಅಮೂಲ್ಯಾಗೆ ನಕ್ಸಲ್ ನಂಟು ಇದೆ ಎಂಬುದನ್ನು ಮುಖ್ಯಮಂತ್ರಿ ಯಡಿಯೂರಪ್ಪ ಬಹಿರಂಗಪಡಿಸಿದ್ದರು.  ಶಾಂತಿ ಸುವ್ಯವಸ್ಥೆಗೆ ಧಕ್ಕೆ ತಂದು ಸಮಾಜದಲ್ಲಿ ಸಾಮರಸ್ಯ ಹಾಳು ಮಾಡುವ ದುರದ್ದೇಶದಿಂದ ಅಮೂಲ್ಯ ಭಾಷಣ ಮಾಡಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಸಲಿದೆ.

ಈ ಹಿಂದೆ ಸಿಎಎ ವಿರೋಧಿಸಿ ಬೆಂಗಳೂರಿನ ಆರ್‍ಟಿನಗರ, ಮಂಗಳೂರು ಸೇರಿದಂತೆ ನಾನಾ ಕಡೆ ಭಾಷಣ ಅಮೂಲ್ಯ ಮಾಡಿದ್ದರು. ಯಾವ ಯಾವ ಸಂಘಟನೆಗಳು ಅವರಿಗೆ ಕುಮ್ಮಕ್ಕು ನೀಡಿವೆ ಎಂಬುದರ ಕುರಿತು ತನಿಖೆ ನಡೆಸುವಂತೆ ಸರ್ಕಾರ ಸೂಚನೆ ಕೊಟ್ಟಿದೆ.  ಗುರುವಾರ ಫ್ರೀಡಂಪಾರ್ಕ್‍ನಲ್ಲಿ ಸಿಎಎ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಯುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ವೇದಿಕೆಗೆ ಬಂದ ಅಮೂಲ್ಯ ಲಿಯೋನ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಮಾಡಿರುವುದು ಭಾರೀ ವಿವಾದವನ್ನೇ ಸೃಷ್ಟಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಅಮೂಲ್ಯಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ. ಈ ಪ್ರಕರಣ ಹಸಿಯಾಗಿರುವಾಗಲೇ ನಿನ್ನೆ ಟೌನ್‍ಹಾಲ್ ಮುಂದೆ ಆರುದ್ರಾ ಎಂಬ ಯುವತಿ ಪ್ಲೆಕಾರ್ಡ್‍ನಲ್ಲಿ ಫ್ರೀ ಕಾಶ್ಮೀರ್ ಎಂಬ ಘೋಷಣೆ ಕೂಗಿದ್ದರು. ಅವರನ್ನು ಸಹ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Facebook Comments